ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ಮಹಾನಗರ ವತಿಯಿಂದ ರವಿವಾರ ನಗರದಲ್ಲಿ “ವಿಜಯ ದಶಮಿ ಪಥಸಂಚಲನ’ ಜರಗಿತು.
ಪಥಸಂಚಲನದಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಡಾ| ವೈ. ಭರತ್ ಶೆಟ್ಟಿ, ಮಹಾನಗರ ಸಂಘ ಚಾಲಕ್ ಡಾ| ಸತೀಶ್ ರಾವ್, ವಿಭಾಗ ಪ್ರಚಾರ ಪ್ರಮುಖ್ ಸೂರಜ್, ಪ್ರಮುಖರಾದ ಕಿಶೋರ್ ಕುಮಾರ್ ಪುತ್ತೂರು, ನಂದನ್ ಮಲ್ಯ, ಜಗದೀಶ್ ಶೇಣವ, ಜಗದೀಶ್ ಶೆಟ್ಟಿ ಸಹಿತ ಹಲವು ಪ್ರಮುಖರು ಪಥಸಂಚಲನದಲ್ಲಿ ಭಾಗಿಯಾದರು. ಸುಮಾರು 1,500ಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ಡೊಂಗರಕೇರಿಯ ಕೆನರಾ ಪ್ರೌಢಶಾಲೆಯಿಂದ ಆರಂಭವಾದ ಪಥಸಂಚಲನ ಡೊಂಗರಕೇರಿ ರಸ್ತೆ, ನ್ಯೂ ಚಿತ್ರ ಜಂಕ್ಷನ್, ಬಿಇಎಂ ಶಾಲೆ ರಸ್ತೆ, ಕಾಳಿಕಾಂಬಾ ದೇವಸ್ಥಾನ, ಮುಖ್ಯಪ್ರಾಣ ದೇವಸ್ಥಾನ, ಬಜಿಲಕೇರಿ, ಟಿ.ಟಿ.ರಸ್ತೆ, ರಾಘವೇಂದ್ರ ಮಠ, ಜೋಡುಮಠ ರಸ್ತೆ, ಫ್ಲವರ್ ಮಾರ್ಕೆಟ್, ರಥಬೀದಿ ವೆಂಕಟರಮಣ ದೇವಸ್ಥಾನ, ಮಹಾಮಾಯಿ ದೇವಸ್ಥಾನ, ಟಿ.ವಿ.ರಮಣ ಪೈ ರಸ್ತೆ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ (ನವಭಾರತ್ ಸರ್ಕಲ್) ಮೂಲಕ ಮತ್ತೆ ಕೆನರಾ ಪ್ರೌಢಶಾಲೆ ಆವರಣದ ವರೆಗೆ ಸಾಗಿ ಸಮಾಪನಗೊಂಡಿತು.
ಸಂಘ ಶತಾಬ್ದಿ ವರ್ಷಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಸಾಮಾಜಿಕ ಪಂಚ ಪರಿವರ್ತನೆ ಗುರಿಯನ್ನು ಇರಿಸಿಕೊಂಡಿದೆ. ಮುಂದಿನ ಒಂದು ವರ್ಷದಲ್ಲಿ ಎಲ್ಲ ಸ್ವಯಂಸೇವಕರು ಸಮಾಜದ ಪ್ರತಿಯೊಬ್ಬ ನಾಗರಿಕರ ಸಹಯೋಗದೊಂದಿಗೆ ಕಾರ್ಯ ಚಟುವಟಿಕೆಯಲ್ಲಿ ಒಂದೇ ದಿಕ್ಕಿನ ಕಡೆ ನಡೆಯುವ ಸಂಕಲ್ಪವನ್ನು ಈ ವೇಳೆ ವ್ಯಕ್ತಪಡಿಸಿದರು.