Advertisement

ಮಂಗಳೂರು: 71ನೇ ಗಣರಾಜ್ಯೋತ್ಸವ ಆಚರಣೆ

10:08 AM Jan 27, 2020 | Naveen |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ರವಿವಾರ ನಡೆದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೇಶಭಕ್ತಿ-ಗಾಯನ-ನೃತ್ಯದ ಸಂಗಮಕ್ಕೆ ಸೇರಿದ್ದ ಜನರು, ವಿದ್ಯಾರ್ಥಿಗಳು ಸಾಕ್ಷಿಯಾದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಧ್ವಜಾರೋಹಣಗೈದರು. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಸೇರಿದಂತೆ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಆಕರ್ಷಕ ಪಥ ಸಂಚಲನ
18 ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ಜರಗಿತು. ಕೆಎಸ್‌ಆರ್‌ಪಿ, ಸಿಎಆರ್, ಸಿವಿಲ್ ಪೊಲೀಸ್, ಮಹಿಳಾ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತುಸೇವೆ, ಕರಾವಳಿ ನಿಯಂತ್ರಣ ದಳ, ಎನ್‌ಸಿಸಿ ಆರ್ಮಿ ಸೀನಿಯರ್, ಎನ್‌ಸಿಸಿ ಏರ್‌ವಿಂಗ್ ಸೀನಿಯರ್, ಎನ್‌ಸಿಸಿ ನೇವಲ್ ಸೀನಿಯರ್, ಸ್ಕೌಟ್ಸ್, ಭಾರತ ಸೇವಾದಳ ಸೀನಿಯರ್ ಸೇರಿದಂತೆ ವಿವಿಧ ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡವು. ಪಥಸಂಚಲನದಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ನೀಡುವ ಪ್ರಶಸ್ತಿಯಲ್ಲಿ ಎನ್‌ಸಿಸಿ ಏರ್‌ವಿಂಗ್ ಸೀನಿಯರ್ ಪ್ರಥಮ ಹಾಗೂ ಎನ್‌ಸಿಸಿ ಆರ್ಮಿ ಸೀನಿಯರ್ ದ್ವಿತೀಯ ಸ್ಥಾನ ಗಳಿಸಿತು.

ಪಾರಂಪರಿಕ ವಿಂಟೇಜ್ ಕಾರು ರ‍್ಯಾಲಿ
ಗಣರಾಜ್ಯೋತ್ಸವ ಪ್ರಯುಕ್ತ ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿಂಟೇಜ್ ಕಾರು ರ‍್ಯಾಲಿ ಆಯೋಜಿಸಲಾಯಿತು. ಹಳೆಯ ಮಾದರಿಯ ಬಜಾಜ್ ಆಟೋ ರಿಕ್ಷಾ, ಲ್ಯಾಂಬ್ರೆಟ್ಟಾ ಆಟೋರಿಕ್ಷಾ, 1952ರ ಮೋರಿಸ್ ಕಾರು, 1929ರ ಫೋರ್ಡ್, 1936ರ ಜೀಪ್, 1982ರ ಪಿಯಟ್ ಕಾರು ಸಹಿತ ವಿವಿಧ ಮಾದರಿಯ ಕಾರುಗಳು, ಸ್ಕೂಟರ್, ಮೋಟಾರ್ ಬೈಕ್‌ಗಳ ರ‍್ಯಾಲಿ ನಡೆಯಿತು. ರ‍್ಯಾಲಿಗೆ ಜಿಲ್ಲಾಽಕಾರಿ ಸಿಂಧೂ ಬಿ. ರೂಪೇಶ್ ಚಾಲನೆ ನೀಡಿದರು.

Advertisement

ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ನೌಕರರಿಗೆ ನೀಡುವ ದ.ಕ. ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರದಾನ ಮಾಡಿದರು.

ಭಾರತ ಸರಕಾರದಿಂದ ಕೊಡ ಮಾಡುವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು. ಮನಪಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನ. 1ರಂದು ನೀಡಲಾಗದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ವತಿಯಿಂದ ಗಣರಾಜ್ಯೋತ್ಸವ ದಿನದಂದು ಪ್ರದಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಒಟ್ಟು 27 ಮಂದಿ ಪ್ರಶಸ್ತಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next