Advertisement

ಮಂಗಳೂರು ಚಲೋಗೆ ಅನುಮತಿ ನಿರಾಕರಣೆ

06:15 AM Sep 05, 2017 | Team Udayavani |

ಮಂಗಳೂರು/ಬೆಂಗಳೂರು: ಬಿಜೆಪಿ ರಾಜ್ಯ ಯುವ ಘಟಕ ಆಯೋಜಿಸಿರುವ “ಮಂಗಳೂರು ಚಲೋ’ ಬೈಕ್‌ ರ್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತು ಉಡುಪಿ ಜಿಲ್ಲಾ ದಂಡಾಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿಬಂದೋಬಸ್ತ್ ವಹಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಹೇಳಿದೆ. ಈ ನಡುವೆಯೇ ಮಂಗಳೂರು ಚಲೋ ನಡೆಸಿಯೇ ಸಿದ್ಧ ಎಂದು ಬಿಜೆಪಿ ಸವಾಲು ಹಾಕಿದೆ. ಬೆಂಗಳೂರು, ಹುಬ್ಬಳ್ಳಿ, ಚಿಕ್ಕಮಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗದಲ್ಲೂ ಬೈಕ್‌ ರ್ಯಾಲಿಗೆ ತಡೆ ಹೇರಲಾಗಿದೆ.

Advertisement

ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕ ರಣಗಳನ್ನು ಸಿಬಿಐಗೆ ವಹಿಸಬೇಕು ಹಾಗೂ ಇದರಲ್ಲಿ ಭಾಗಿಯಾಗಿರುವ ಪಿಎಫ್‌ಐ, ಎಸ್‌ಡಿಪಿಐ, ಕೆಎಫ್‌ಡಿ ಸಂಘಟನೆಗಳನ್ನು ನಿಷೇಧ ಮಾಡುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಘಟಕವು ಗುರುವಾರ ಮಂಗಳೂರಿನಲ್ಲಿ ಬೃಹತ್‌ ಬೈಕ್‌ ರ್ಯಾಲಿ ಹಾಗೂ ಪ್ರತಿಭಟನ ಸಭೆ ಹಮ್ಮಿಕೊಂಡಿದೆ. 

ಗುರುವಾರ ಮಂಗಳೂರಿನಲ್ಲಿ ನಡೆಯಲಿರುವ ಬೈಕ್‌ ರ್ಯಾಲಿಗೆ ಅನುಮತಿ ನೀಡದಿರಲು ನಗರ ಪೊಲೀಸ್‌ ಆಯುಕ್ತರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಜಂಟಿಯಾಗಿ ತೀರ್ಮಾನಿಸಿದ್ದಾರೆ.

ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ: ಸೋಮವಾರ ಸಂಜೆ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸುದೀರ್ಘ‌ ಸಭೆ ನಡೆದಿದ್ದು, ಇದರಲ್ಲಿ ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಜಿಲ್ಲಾ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ ಹಾಗೂ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು. 
ಪೊಲೀಸ್‌ ಬಿಗಿ ಬಂದೋಬಸ್ತು: ಬಿಜೆಪಿ ಆಯೋಜಿಸಿರುವ ರ್ಯಾಲಿಗೆ ಪೊಲೀಸ್‌ ಇಲಾಖೆ ಅನುಮತಿ ನಿರಾಕರಿಸಿದೆ ಎಂದು ಜಿಲ್ಲಾ ಎಸ್ಪಿ ಸುಧೀರ್‌ ಕುಮಾರ್‌ ರೆಡ್ಡಿ ಉದಯವಾಣಿಗೆ ತಿಳಿಸಿದರು. ಆಯೋಜಕರು, ನಿರಾಕರಣೆ ಆದೇಶವನ್ನು ಉಲ್ಲಂಘಿಸಿದಲ್ಲಿ  ಸೂಕ್ತ ಕಾನೂನು ಕ್ರಮ ಜರಗಿಸಲಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಡದಂತೆ ಜಿಲ್ಲೆಗೆ ಭದ್ರತೆ
ಗಾಗಿ ಹೆಚ್ಚುವರಿಯಾಗಿ 15 ಕೆಎಸ್‌ಆರ್‌ಪಿ ತುಕುಡಿಗಳು ಮಂಗಳವಾರ ಆಗಮಿಸಲಿವೆ. ಇತರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್‌ ಪಡೆಯನ್ನು ಕರೆಸಿಕೊಳ್ಳಲಾಗುತ್ತಿದೆ ಎಂದರು.

ರ್ಯಾಲಿ ನಡೆಸಿಯೇ ಸಿದ್ಧ: ಬಿಜೆಪಿಗೆ ವ್ಯಕ್ತವಾಗುತ್ತಿರುವ ಜನ ಬೆಂಬಲ, ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆಯಿಂದ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್‌, ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ ರ್ಯಾಲಿ ನಡೆಸಿಯೇ ಸಿದ್ಧ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ. 

Advertisement

ವ್ಯಾಪಕ ಸಿದ್ಧತೆ: ರಾಜ್ಯದ 5 ವಿಭಾಗಗಳಿಂದ ಬೈಕ್‌ಗಳ ಮೂಲಕ ಆಗಮಿಸುವ ಕಾರ್ಯಕರ್ತರು ಸೆ. 6ರ ಸಂಜೆ 5ರ ಬಳಿಕ ಜಿಲ್ಲೆಯನ್ನು ಪ್ರವೇಶಿಸಲಿದ್ದು ಇವರಿಗೆ ತಂಗಲು ವಿವಿಧೆಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಯಾವುದೇ ಹಾಲ್‌ಗ‌ಳಲ್ಲಿ ಕಾರ್ಯಕರ್ತರು ಉಳಿದುಕೊಳ್ಳುವುದಕ್ಕೆ ಅವಕಾಶ ನೀಡಬಾರದು ಎಂದು ಪೊಲೀಸ್‌ ಇಲಾಖೆ ಸೂಚನೆ ನೀಡಿದೆ. 

ರ್ಯಾಲಿಗೆ ಅಡ್ಡಿ ಮಾಡಿದ್ರೆ?: ರ್ಯಾಲಿಯನ್ನು ಅರ್ಧಕ್ಕೇ ನಿಲ್ಲಿಸಿದರೆ, ಪಾಲ್ಗೊಂಡಿದ್ದವರು ಅಲ್ಲೇ ಧರಣಿ ಮಾಡಬೇಕು. ಕೆಲವರು ಬೇರೆ ವಾಹನಗಳಲ್ಲಿ ಮಂಗಳೂರಿಗೆ ತೆರಳಿ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಇದಕ್ಕೂ ಅಡ್ಡಿ ಮಾಡಿದರೆ, ಇದೇ ವಿಚಾರವನ್ನೇ ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಮತ್ತೂಂದು ಸುತ್ತಿನ ಹೋರಾಟಕ್ಕೂ ಬಿಜೆಪಿ ನಿರ್ಧರಿಸಿದೆ.

ಬಿಜೆಪಿಯವರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಥಾ ಮಾಡೋದಕ್ಕೆ ಎಲ್ಲರಿಗೂ ಅವಕಾಶ ಇದೆ. ಆದರೆ ಕಾನೂನು ಉಲ್ಲಂ ಸಿದರೆ ಕ್ರಮ ಕೈಗೊಳ್ಳಲಾಗುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಯೋಜಿತ ಹತ್ಯೆಗಳು ನಡೆದಿದ್ದು, ಮುಂದಿನ ವಿಧಾನಸಭೆ ಚುನಾವಣೆ ವರೆಗೂ ಇದೇ ಪ್ರಕ್ಷುಬ್ಧ ಸ್ಥಿತಿ ಕಾಯ್ದುಕೊಂಡು ಹೋಗಲು ಬಿಜೆಪಿ ನಾಯಕರು ಬಯಸಿದ್ದರು. ಇದು ಫಲಿಸದ ಕಾರಣ ಬೈಕ್‌ ರ್ಯಾಲಿ ನಡೆಸಲು ಹೊರಟಿದ್ದಾರೆ. ಅವ ರಿಗೆ ಸಾಮರಸ್ಯದ ಉದ್ದೇಶವಿದ್ದರೆ ಸ್ಥಳೀಯವಾಗಿಯೇ ರ್ಯಾಲಿ ಮಾಡಬಹುದಿತ್ತಲ್ಲ.
-ರಮಾನಾಥ ರೈ, ದ. ಕ.ಉಸ್ತುವಾರಿ ಸಚಿವ

ಮಂಗಳೂರು ಚಲೋ ರ್ಯಾಲಿಗೆ ಭದ್ರತೆ ಒದಗಿಸುವುದು ರಾಜ್ಯ ಸರಕಾರದ ಜವಾಬ್ದಾರಿ. ಎಲ್ಲ ನಗರ, ಪಟ್ಟಣ, ಗ್ರಾಮಗಳಿಂದ ಮಂಗಳೂರು ಚಲೋ ರ್ಯಾಲಿ ಪ್ರಾರಂಭವಾಗಲಿದ್ದು ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದು ಸೂಕ್ತ ಭದ್ರತೆ ಒದಗಿಸುವಂತೆ ಕೋರಿದ್ದೇವೆ .
-ಜಗದೀಶ್‌ ಶೆಟ್ಟರ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next