ಮಹಾನಗರ: ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು, ಕಾನೂನು ಸುವ್ಯವಸ್ಥೆ ಕಾಪಾಡಲು ಪೂರಕವಾಗಿ ಪೊಲೀಸರೊಂದಿಗೆ ಕೈಜೋಡಿಸಲು ಸ್ಥಳೀಯ ಕ್ರಿಯಾಶೀಲ ಯುವಕ – ಯುವತಿಯರನ್ನೊಳಗೊಂಡ ಯುವ ಸಮಿತಿ (ಯೂತ್ ಕಮಿಟಿ) ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣಾ ಮಟ್ಟದಲ್ಲಿಯೂ ಅಸ್ತಿತ್ವಕ್ಕೆ ಬಂದಿದೆ.
ಪ್ರತಿಯೊಂದು ಸಮಿತಿ ತಲಾ ಸುಮಾರು 30- 50 ಮಂದಿಯನ್ನು ಒಳಗೊಂಡಿದೆ. ಮಂಗಳೂರು ಪೊಲೀಸ್ ಕಮಿಷನರೆಟ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ 15 ಪೊಲೀಸ್ ಠಾಣೆಗಳಿದ್ದು ಸರಾಸರಿ 40 ಸದಸ್ಯರಂತೆ ಒಟ್ಟು ಸುಮಾರು 600 ಮಂದಿ ಸದಸ್ಯರು ಯುವ ಸಮಿತಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈ ಸದಸ್ಯರೊಂದಿಗೆ ಈಗಾಗಲೇ ಪೊಲೀಸರು ಸಂವಹನ ಸಾಧಿಸಿದ್ದಾರೆ.
ಉತ್ತಮ ಹಿನ್ನೆಲೆಯವರಿಗೆ ಆದ್ಯತೆ ಸಾಮಾಜಿಕವಾಗಿ, ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಯುವ ಸಮಿತಿಯಲ್ಲಿ ಆದ್ಯತೆ ನೀಡಲಾಗಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಸಮಿತಿಯಿಂದ ಸಾಧ್ಯವಾದಷ್ಟು ದೂರ ಇಡಲಾಗಿದೆ. ಯಾವುದೇ ಧರ್ಮ, ಪಕ್ಷ ಅಥವಾ ಇತರ ಯಾವುದೇ ವರ್ಗ ಭೇದ ಮಾಡದೆ ಸಮಿತಿಯನ್ನು ರಚಿಸಲಾಗಿದ್ದು, ಒಂದು ಸಮಿತಿಯಲ್ಲಿ ಸರಾಸರಿ 4ರಿಂದ 5 ಮಂದಿ ಮಹಿಳೆಯರೂ ಇದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವ ಸಮಿತಿಯ ಸದಸ್ಯರೊಂದಿಗೆ ಸ್ಥಳೀಯ ಪೊಲೀಸರು ತಿಂಗಳಿಗೆ ಕನಿಷ್ಠ 2 ಬಾರಿ ಸಂಪರ್ಕ ಸಾಧಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಅಗತ್ಯ ಸಂದರ್ಭದಲ್ಲಿ ಈ ಸಮಿತಿಯ ಸದಸ್ಯರೊಂದಿಗೆ ಸಂಪರ್ಕ-ಸಂವಹನ ನಡೆಸಬಹುದಾಗಿದೆ.
Related Articles
ಭೌತಿಕವಾಗಿ ಯುವ ಸಮಿತಿಯ ಸದಸ್ಯರು ಒಂದೆಡೆ ಸೇರುವುದಿಲ್ಲ. ಆದರೆ ಆ ಸಮಿತಿಯ ಸದಸ್ಯರು ನೇರವಾಗಿ ಪೊಲೀಸರೊಂದಿಗೆ ಸಂಪರ್ಕ ಹೊಂದಿರುತ್ತಾರೆ.
ಸಮಿತಿ ಸದಸ್ಯರಿಗೆ ಬದ್ಧತೆ
ಕೆಲವು ಮಂದಿ ಯುವಕ-ಯುವತಿ ತಾವಾಗಿಯೇ ಒಲವು ವ್ಯಕ್ತಪಡಿಸಿ ಸಮಿತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಕೆಲವು ಮಂದಿ ಪೊಲೀಸರ ಸಲಹೆ ಮೇರೆಗೆ ಸಮಿತಿಯ ಸದಸ್ಯತ್ವ ಪಡೆದಿದ್ದಾರೆ. ಇದು ಖಾಯಂ ಸದಸ್ಯತನವಾಗಿರುವುದಿಲ್ಲ. ಗುರುತಿನ ಕಾರ್ಡ್ ಕೂಡ ನೀಡುವುದಿಲ್ಲ. ಸ್ಥಳೀಯವಾದ ಸಂವಹನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಸಮಿತಿ ಸದಸ್ಯರಿಗೆ ಹೆಚ್ಚಿನ ಬದ್ಧತೆ ಇರುತ್ತದೆ. ಉತ್ತಮ ಸಮಾಜಕ್ಕಾಗಿ ಅವರು ಕೊಡುಗೆ ನೀಡಿದಂತಾಗುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಉತ್ತಮ ಸಂವಹನಕ್ಕೆ ಸಹಕಾರಿ: ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯವರ ಸೂಚನೆಯಂತೆ ಎಲ್ಲ ಪೊಲೀಸ್ ಠಾಣಾ ಮಟ್ಟದಲ್ಲಿಯೂ ಯುವ ಸಮಿತಿಗಳನ್ನು ರಚಿಸಲಾಗಿದೆ. ಅಪರಾಧ ಹಿನ್ನೆಲೆಯುಳ್ಳವರಿಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಈ ಸಮಿತಿಯ ಸದಸ್ಯರು ಪರೋಕ್ಷವಾಗಿ ಕೈಜೋಡಿಸಲಿದ್ದಾರೆ. ಸಮಾಜದೊಂದಿಗಿನ ಉತ್ತಮ ಸಂವಹನ-ಸಮನ್ವಯಕ್ಕೆ ಇದು ನೆರವಾಗಲಿದೆ. –ಹರಿರಾಂ ಶಂಕರ್, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಮಂಗಳೂರು ಪೊಲೀಸ್