Advertisement
ರೈಲು ನಿಲ್ದಾಣ, ಬಸ್ ನಿಲ್ದಾಣ, ಮೈದಾನ, ಸಮುದ್ರ, ನದಿ ತಟ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಮೃತಪಟ್ಟವರ, ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದವರ ಸಂಬಂಧಿಕರನ್ನು ಪತ್ತೆ ಹಚ್ಚಲು ಪೊಲೀಸರು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಮಂಗಳೂರು ದಕ್ಷಿಣ (ಪಾಂಡೇಶ್ವರ) ಹಾಗೂ ಮಂಗಳೂರು ಉತ್ತರ (ಬಂದರು) ಪೊಲೀಸ್ ಠಾಣೆಗಳಲ್ಲಿ ತಿಂಗಳಿಗೆ ಸರಾಸರಿ 10ರಿಂದ 12 ಶವಗಳು ಪತ್ತೆಯಾಗುತ್ತವೆ. ಇದರಲ್ಲಿ ಶೇ.50ಕ್ಕೂ ಅಧಿಕ ಶವಗಳ ವಾರಸುದಾರರು ಯಾರೆಂಬುದೇ ಪತ್ತೆಯಾಗುತ್ತಿಲ್ಲ.
Related Articles
Advertisement
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2021ರಲ್ಲಿ 30 ಅಪರಿಚಿತ ಶವಗಳು ಪತ್ತೆಯಾಗಿದ್ದು ಇದರಲ್ಲಿ ಶವಗಳ ವಾರಸುದಾರರು ಪತ್ತೆಯಾಗಿರುವುದು ಶೇ. 40ಕ್ಕಿಂತಲೂ ಕಡಿಮೆ. 2020ರಲ್ಲಿ 38 ಅಪರಿಚಿತ ಶವಗಳು ಪತ್ತೆಯಾಗಿದ್ದು 7 ಪುರುಷರು ಮತ್ತು ಒಬ್ಬರು ಹೆಂಗಸಿನ ಶವದ ವಾರಸುದಾರರು ಮಾತ್ರ ಪತ್ತೆಯಾಗಿದ್ದರು. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ತಿಂಗಳಿಗೆ 4ರಿಂದ 5ರಂತೆ ವರ್ಷಕ್ಕೆ ಸುಮಾರು 60 ಅಪರಿಚಿತ ಶವಗಳು ಪತ್ತೆಯಾಗುತ್ತಿವೆ. ಇದರಲ್ಲಿ ಶೇ.50ರಷ್ಟು ವಾರಸುದಾರರ ಪತ್ತೆ ಸಾಧ್ಯವಾಗಿಲ್ಲ. ಅಪರಿಚಿತ ಶವಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟನೆ, ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನೆ, ಬ್ಯಾನರ್ ಅಳವಡಿಕೆ, ಬೇರೆ ಠಾಣೆಗಳಲ್ಲಿ ನಾಪತ್ತೆಯಾದ ಪ್ರಕರಣಗಳ ಪರಿಶೀಲನೆ ಮೊದಲಾದ ಎಲ್ಲ ರೀತಿಯ ಪ್ರಯತ್ನಗಳನ್ನು ಪೊಲೀಸರು ನಡೆಸುತ್ತಿದ್ದಾರೆ. ಆದರೂ ಅನೇಕ ಶವಗಳ ವಾರಸುದಾರರ ಪತ್ತೆ ಸಾಧ್ಯವಾಗಿಲ್ಲ.
ಶವಾಗಾರದಲ್ಲಿ ಜಾಗದ ಕೊರತೆ :
ಸಾಮಾನ್ಯವಾಗಿ ಅಪರಿಚಿತ ಶವಗಳನ್ನು ಒಂದು ವಾರ ಶವಾಗಾರದಲ್ಲಿಟ್ಟು ವಾರಸುದಾರರಿಗಾಗಿ ಕಾಯಲಾಗುತ್ತದೆ. ಒಂದು ವೇಳೆ ಕೊಳೆತ ಸ್ಥಿತಿಯಲ್ಲಿದ್ದರೆ ಅದನ್ನು 2-3 ದಿನಗಳಲ್ಲೇ ವಿಲೇವಾರಿ ಮಾಡಲಾಗುತ್ತದೆ. ಶವಾಗಾರದ ಶೈತ್ಯಾಗಾರದಲ್ಲಿ ಇತರ ಶವಗಳನ್ನು ಕೂಡ ಇಡಬೇಕಾಗಿರುವುದರಿಂದ ಕೆಲವೊಮ್ಮೆ ಶೈತ್ಯಾಗಾರದಲ್ಲೂ ಜಾಗದ ಕೊರತೆ ಎದುರಾಗುತ್ತದೆ.
ಮಣ್ಣಲ್ಲಿ ಹೂಳುವುದು ಕಡ್ಡಾಯ :
ಅಪರಿಚಿತ ಶವಗಳನ್ನು ಮಣ್ಣಿನಲ್ಲೇ ಹೂಳಬೇಕಿದೆ. ಒಂದು ವೇಳೆ ಯಾವತ್ತಾದರೂ ಶವದ ವಾರಸುದಾರರು ಬಂದರೆ ಅದನ್ನು ಕಾನೂನಾತ್ಮಕವಾಗಿ ದೃಢೀಕರಿಸಿ ಕಳೇಬರ ಹಸ್ತಾಂತರಿಸಲು ಸಾಧ್ಯವಾಗಬೇಕೆಂಬ ದೃಷ್ಟಿಯಿಂದ ಮಣ್ಣಿನಲ್ಲಿ ಹೂಳಲಾಗುತ್ತದೆ.
ಪತ್ತೆಗೆ ಗರಿಷ್ಠ ಪ್ರಯತ್ನ:
ಅಪರಿಚಿತ ಶವಗಳ ವಾರಸುದಾರರ ಪತ್ತೆಗೆ ಪೊಲೀಸರು ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಕೆಲವೊಂದು ಶವಗಳ ವಾರಸುದಾರರು ಪತ್ತೆಯಾಗುವುದಿಲ್ಲ. ಮೃತದೇಹ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಗಮನಿಸಿ ಅದನ್ನು ಎಷ್ಟು ದಿನಗಳವರೆಗೆ ರಕ್ಷಿಸಿಡಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ.-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು
-ಸಂತೋಷ್ ಬೊಳ್ಳೆಟ್ಟು