Advertisement

ಕುವೈಟ್‌ನಲ್ಲಿ ಮಂಗಳೂರು ಯುವಕರ ಸಂಕಷ್ಟ : ಸುಷ್ಮಾಗೆ ನಳಿನ್‌ ಪತ್ರ

01:37 AM May 28, 2019 | Team Udayavani |

ಮಂಗಳೂರು: ಕುವೈಟ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರು ಮೂಲದ ಯುವಕರ ಸಮಸ್ಯೆ ಬಗೆಹರಿಸುವುದಕ್ಕೆ ಮಧ್ಯ ಪ್ರವೇಶ ಮಾಡುವಂತೆ ಒತ್ತಾಯಿಸಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕೇಂದ್ರ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಕುವೈಟ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳ ಜತೆ ಮಾತನಾಡಿ ಆದಷ್ಟು ಶೀಘ್ರ ಸಂತ್ರಸ್ತ 35 ಮಂದಿ ಯುವಕರಿಗೆ ಅವರ ಪಾಸ್‌ಪೋರ್ಟ್‌ ಮರಳಿ ಲಭಿಸುವಂತೆ ಮಾಡಿ, ಆ ಮೂಲಕ ಭಾರತಕ್ಕೆ ಹಿಂದಿರುಗಲು ಸಿದ್ಧತೆಗಳನ್ನು ಮಾಡಬೇಕೆಂದು ನಳಿನ್‌ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಜಿಪಿ ಲೆಟರ್‌ ತಂದೊಪ್ಪಿಸಿದರೆ ಶೀಘ್ರ ಬಿಡುಗಡೆ
ಮಂಗಳೂರು ಮೂಲದ 35 ಸಂತ್ರಸ್ತ ಯುವಕರು ಕುವೈಟ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಜಿಪಿ ಲೆಟರ್‌ ತಂದೊಪ್ಪಿಸಿದರೆ 5- 6 ದಿನಗಳಲ್ಲಿ ಅವರ ವೀಸಾ ರದ್ದುಪಡಿಸಿ ಭಾರತಕ್ಕೆ ವಾಪಸಾಗಲು ಅನುಮತಿ ನೀಡಲಾಗುವುದು ಎಂದು ಸೋಮವಾರ ಈ ಯುವಕರಿಗೆ ಉದ್ಯೋಗದ ಭರವಸೆ ನೀಡಿದ್ದ ಇನೆಸ್ಕೊ ಜನರಲ್‌ ಟ್ರೇಡಿಂಗ್‌ ಆ್ಯಂಡ್‌ ಕಾಂಟ್ರಾಕ್ಟಿಂಗ್‌ ಕಂಪೆನಿ ತಿಳಿಸಿದೆ ಎಂದು ಕುವೈಟ್‌ನಲ್ಲಿರುವ ಮಂಗಳೂರಿನ ಕನ್ನಡಿಗರು “ಉದಯವಾಣಿ’ಗೆ ತಿಳಿಸಿದ್ದಾರೆ. ತಮ್ಮ ಪ್ರಯತ್ನದ ಫಲವಾಗಿ ಇದು ಸಾಧ್ಯವಾಗಿದೆ ಎಂದವರು ವಿವರಿಸಿದ್ದಾರೆ.

ಈ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲು ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ ನ ಕುವೈಟ್‌ ಘಟಕ ಮುಂದೆ ಬಂದಿದೆ ಎಂದವರು ತಿಳಿಸಿದ್ದಾರೆ.

ಏಜನ್ಸಿ ದಾಖಲೆ ಪತ್ರ ಪರಿಶೀಲನೆ
ಕುವೈಟ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಯುವಕರನ್ನು ಮಂಗಳೂರಿನಿಂದ ಕಳುಹಿಸಿ ಕೊಟ್ಟ ಏಜನ್ಸಿ ಕಚೇರಿಗೆ ಮಂಗಳೂರಿನ ಪೊಲೀಸರು ತೆರಳಿದ್ದು, ಅಲ್ಲಿಂದ ಸಂಬಂಧ ಪಟ್ಟ ದಾಖಲೆಪತ್ರಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next