Advertisement

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

11:25 PM Mar 14, 2020 | mahesh |

ದೇಶದ ಪ್ರಮುಖ ಸ್ಮಾರ್ಟ್‌ ಸಿಟಿ ನಗರಗಳಲ್ಲಿ ಮಂಗಳೂರು ಕೂಡ ಒಂದಾಗಿದೆ. ವಿವಿಧ ಕ್ಷೇತ್ರಗಳಿಂದ ದೇಶದಲ್ಲಿ ಗುರುತಿಸಿಕೊಂಡಿರುವ ಮಂಗಳೂರಿಗೆ ಸಂಚಾರಕ್ಕೆ ಪೂರಕವಾಗಿ ವಿವಿಧ ಭಾಗಗಳಿಂದ ರೈಲು ಸಂಪರ್ಕ ಜಾಲ ವಿಸ್ತರಣೆಯ ಹೊಸ ಸಾಧ್ಯತೆಗಳ ಬಗ್ಗೆ ಇಲ್ಲಿ ಅವಲೋಕಿಸಲಾಗಿದೆ.

Advertisement

ರೈಲ್ವೇ ಸಂಪರ್ಕ ಜಾಲಕ್ಕೆ ಸಂಬಂಧಪಟ್ಟಂತೆ ಮಂಗಳೂರು ಸಂಕೀರ್ಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮಂಗಳೂರು ಪಾಲಿಗೆ ಪಾಲಕ್ಕಾಡ್‌ ವಿಭಾಗ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಭಾವನೆ ಇದೆ. ಇದೀಗ ಕೊಂಕಣ ರೈಲ್ವೇಯ ಇತ್ತೀಚಿನ ನಡೆಯನ್ನು ಅವಲೋಕಿಸಿದಾಗ ಇದೇ ಭಾವನೆ ಕೊಂಕಣ ರೈಲ್ವೇಯ ಬಗ್ಗೆಯೂ ಹುಟ್ಟಿಕೊಂಡಿದೆ.

ಮಂಗಳೂರನ್ನು ರಾಜ್ಯದ ಇತರ ಕಡೆಗೆ ಸಂಪರ್ಕಿಸುವ ನಿಟ್ಟಿನಲ್ಲಿ ಮಂಗಳೂರು- ಬೆಂಗಳೂರು ರೈಲುಮಾರ್ಗದಲ್ಲಿ ಸಕಲೇಶಪುರ ಭಾಗದಲ್ಲಿ ರೈಲು ಸಂಚಾರ ಎದುರಿಸುತ್ತಿರುವ ಸಮಸ್ಯೆ ಈ ಮಾರ್ಗದಲ್ಲಿ ಇನ್ನೂ ಹೆಚ್ಚಿನ ರೈಲು ಸಂಚಾರ ಆರಂಭಿಸಲು ಸುರಕ್ಷತೆ ದೃಷ್ಟಿಯಿಂದ ಅಡ್ಡಿಯಾಗಿದೆ. ಇನ್ನೊಂದೆಡೆ ಕೊಂಕಣ ರೈಲ್ವೇ ಕೂಡ ತಮ್ಮ ಮಾರ್ಗದಲ್ಲಿ ಮಂಗಳೂರಿನಿಂದ ಹೊಸದಾಗಿ ರೈಲು ಸಂಚಾರ ಆರಂಭಿಸಲು ಅವಕಾಶವಿಲ್ಲ ಎಂದು ಹೇಳಿಕೊಂಡಿದೆ. ಬೆಂಗಳೂರಿನಿಂದ ವಾಸ್ಕೋಗೆ ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರು ಪಡೀಲ್‌ ಮೂಲಕ ಹೊಸದಾಗಿ ಸಂಚಾರಗೊಂಡಾಗ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೆಂಗಳೂರು-ಮಂಗಳೂರು -ಕಾರವಾರ ವಯಾ ಕುಣಿಗಲ್‌ ಹಾಗೂ ಮೈಸೂರು ಮೂಲಕ ಸಂಚರಿಸುತ್ತಿದ್ದ ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ಕೊಂಕಣ ರೈಲು ಮಾರ್ಗದ ಮೂಲಕ ಹೊಸ ರೈಲುಗಳ ಸಂಚಾರದ ನಿರೀಕ್ಷೆಯಲ್ಲಿದ್ದ ಮಂಗಳೂರಿನ ಜನತೆಯಲ್ಲಿ ನಿರಾಸೆ ಮೂಡಿಸಿದೆ. ಈ ಹಂತದಲ್ಲಿ ರೈಲ್ವೇ ಸಂಪರ್ಕಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳನ್ನು ಪರಿಶೀಲಿಸಿ ರೈಲ್ವೇ ಇಲಾಖೆ ಕಾರ್ಯೋನ್ಮುಖವಾಗಬೇಕಾಗಿದೆ. ಈ ನಿಟ್ಟಿನಲ್ಲಿ ರೈಲ್ವೇ ಬಳಕೆದಾರರಿಂದ ಹಲವಾರು ಸಲಹೆಗಳು ಕೂಡ ವ್ಯಕ್ತವಾಗಿವೆ. ಈ ಬಗ್ಗೆ ಕರಾವಳಿ ಭಾಗದ ಜನಪ್ರತಿನಿಧಿಗಳು ಇಲಾಖೆ ಮೇಲೆ ಒತ್ತಡ ತರುವ ಕಾರ್ಯವನ್ನು ಮಾಡಬೇಕಾಗಿದೆ.

ಸಂಚಾರ ಸಾಧ್ಯತೆಗಳ ಗುರುತಿಸುವಿಕೆ
ರೈಲ್ವೇ ಸಂಪರ್ಕದಲ್ಲಿ ಮಂಗಳೂರು ಇನ್ನೂ ಹೆಚ್ಚು ವಿಸ್ತೃತವನ್ನು ಪಡೆದುಕೊಳ್ಳುವಂತಾಗಲು ಹೊಸ ಸಾಧ್ಯತೆಗಳನ್ನು ಗುರುತಿಸುವ ಕಾರ್ಯ ನಡೆಯಬೇಕಾಗಿದೆ. ಪ್ರಸ್ತುತ ಇರುವ ಮಾರ್ಗಗಳಲ್ಲಿ ಸಂಚರಿಸುತ್ತಿರುವ ರೈಲುಗಳನ್ನು ಇನ್ನಷ್ಟು ವಿಸ್ತರಣೆ, ಈ ಹಿಂದೆ ಸಂಚರಿಸುತ್ತಿದ್ದು, ಪ್ರಸ್ತುತ ಸ್ಥಗಿತಗೊಂಡಿರುವ ರೈಲುಗಳ ಮರು ಆರಂಭ ಜತೆಗೆ ಒಂದಷ್ಟು ಹೊಸ ಮಾರ್ಗಗಳ ಮುಖ್ಯವಾಗಿ ಕರ್ನಾಟಕದ ಪ್ರಮುಖ ನಗರಗಳಿಗೆ ಸಂಚಾರ ವೇರ್ಪಡುವ ನಿಟ್ಟಿನಲ್ಲಿ ಮಾರ್ಗಗಳ ಗುರುತಿಸುವಿಕೆ ಹಾಗೂ ಈಗಾಗಲೇ ಸಮೀಕ್ಷೆ ನಡೆದಿರುವ ಹೊಸ ಮಾರ್ಗಗಳ ಅನುಷ್ಠಾನ ಮುಂತಾದ ಪೂರಕ ಕ್ರಮಗಳು ನಡೆಯಬೇಕಾಗಿದೆ.

ಮಂಗಳೂರಿನಿಂದ ಗುಲ್ಬರ್ಗಾಕ್ಕೆ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಹಲವಾರು ಸಮಯದಿಂದ ಇದೆ. ಗುಲ್ಬರ್ಗಾದಿಂದ ವಾಡಿ-ಯಾದಗಿರಿ-ರಾಯಚೂರು-ಗುಂಟಕಲ್‌, ಬಳ್ಳಾರಿ, ಚಿಕ್ಕಮಗಳೂರು- ಬೀರೂರು, ಕಡೂರು, ಅರಸೀಕೆರೆ, ಹಾಸನ- ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ, ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಸಂಚಾರ ನಡೆಸಬಹುದು ಎಂಬ ಸಲಹೆ ಕೂಡ ವ್ಯಕ್ತವಾಗಿತ್ತು. ಪ್ರಸ್ತುತ ತಾತ್ಕಾಲಿಕ ನೆಲೆಯಲ್ಲಿ ಸಂಚರಿಸುತ್ತಿರುವ ಮಂಗಳೂರು -ವಿಜಯಪುರ ರೈಲುಗಾಡಿಯನ್ನು ವಯಾ ಗುಲ್ಬರ್ಗ ಮೂಲಕ ಬೀದರ್‌ವರೆಗೆ ವಿಸ್ತರಿಸುವ ಬಗ್ಗೆ ಸಲಹೆಗಳು ವ್ಯಕ್ತವಾಗಿವೆ.

Advertisement

ಮಂಗಳೂರು -ಬೀದರ್‌, ಮಂಗಳೂರು-ತಿರುಪತಿ ಹಾಗೂ ಮಂಗಳೂರು -ರಾಮೇಶ್ವರ ನಡುವೆ ಹೊಸ ನೇರ ರೈಲು ಸಂಚಾರ ಆರಂಭಿಸಬೇಕು, ಮಂಗಳೂರು-ಮಡಗಾಂವ್‌ ರೈಲ್‌ನ್ನು ಸೂಪರ್‌ಫಾಸ್ಟ್‌ ರೈಲು ಆಗಿ ಪರಿವರ್ತಿಸಬೇಕು ಹಾಗೂ ಥಾಣೆ ಅಥವಾ ಸಿಎಸ್‌ಟಿಗೆ ವಿಸ್ತರಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.

ಕಣ್ಣೂರು- ಬೈಂದೂರು- ಕಣ್ಣೂರು
ಕಣ್ಣೂರು-ಬೈಂದೂರು-ಕಣ್ಣೂರು (56665/56666) ಪ್ಯಾಸೆಂಜರ್‌ ರೈಲಿನ ಸಂಚಾರ ರದ್ದುಪಡಿಸಲಾಗಿದೆ. ಈ ರೈಲು ಬೆಳಗ್ಗೆ ಕಣ್ಣೂರಿನಿಂದ ಬೈಂದೂರಿಗೆ ಹೋಗಿ ಮಧ್ಯಾಹ್ನ ಬಳಿಕ ಹಿಂದಿರುಗುತ್ತಿತ್ತು. ರೈಲು ಸಂಚಾರವನ್ನು ಮರು ಆರಂಭಿಸಬೇಕು ಹಾಗೂ ಇದು ಮಂಗಳೂರು ಸೆಂಟ್ರಲ್‌ ನಿಲ್ದಾಣ ಮೂಲಕ ಸಂಚರಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದ್ದರೂ ಈ ವರೆಗೆ ಈ ರೈಲು ಸಂಚಾರ ಮರು ಪ್ರಾರಂಭವಾಗಿಲ್ಲ.

ಕೊಂಕಣ ರೈಲುಮಾರ್ಗದಲ್ಲಿ ಹಳಿ ದ್ವಿಗುಣ
ಕೊಂಕಣ ರೈಲು ಮಾರ್ಗದಲ್ಲಿ ಹಳಿ ದ್ವಿಗುಣಗೊಳಿಸುವ ಮೂಲಕ ಹೆಚ್ಚಿನ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ರೈಲ್ವೇ ಇಲಾಖೆಗೆ ಒತ್ತಡ ತರುವ ಕಾರ್ಯ ಜನಪ್ರತಿನಿಧಿಗಳಿಂದ ನಡೆಯಬೇಕು.

ಪರ್ಯಾಯ ಮಾರ್ಗ
ಮಂಗಳೂರಿಗೆ ರೈಲ್ವೇ ಸಂಚಾರ ಜಾಲ ವಿಸ್ತರಣೆಗೆ ಪ್ರಮುಖ ಅಡಚಣೆ ಮಂಗಳೂರು- ಬೆಂಗಳೂರು ರೈಲುಮಾರ್ಗದ ಸಕಲೇಶಪುರ ಭಾಗದಲ್ಲಿ ರೈಲು ಸಂಚಾರ ಎದುರಿಸುತ್ತಿರುವ ಸಮಸ್ಯೆ. ಇದಕ್ಕೆ ಪರಿಹಾರವಾಗಿ ನಂದಿಕೂರು ಮೂಲಕ ಸುಮಾರು 135 ಕಿ.ಮೀ. ಪರ್ಯಾಯ ಮಾರ್ಗದ ಪ್ರಸ್ತಾವವನ್ನು ರೈಲ್ವೇ ಯಾತ್ರಿಕರ ಸಂಘ ಮಂಡಿಸಿತ್ತು. ನಂದಿಕೂರು, ಕಾರ್ಕಳ, ಬಜಗೋಳಿ,ಉಜಿರೆ,ಚಾರ್ಮಾಡಿ ಮೂಲಕ ಸಾಗಿ ಸೋಮನಕಾಡು ಸೇತುವೆಯ ಭಾಗದಲ್ಲಿ ಸುರಂಗದ ಮೂಲಕ ಸಾಗಿ ಕೊಟ್ಟಿಗೆಹಾರದಿಂದ ಮೂಡಿಗೆರೆಯಲ್ಲಿ ರೈಲು ಮಾರ್ಗಕ್ಕೆ ಜೋಡಣೆಯಾಗಿ ಅಲ್ಲಿಂದ ಮುಂದೆ ಬೆಂಗಳೂರಿಗೆ ಸಾಗುವುದು ಮತ್ತು ನಂದಿಕೂರು ಜಂಕ್ಷನ್‌ ಆಗಿ ರೂಪುಗೊಳ್ಳುವುದು ಈ ಪ್ರಸ್ತಾವನೆಯಲ್ಲಿ ಒಳಗೊಂಡಿದೆ.

ಸ್ಥಗಿತಗೊಂಡಿರುವ ಸಂಚಾರಗಳ ಮರು ಆರಂಭ
ಮಂಗಳೂರಿಗೆ ರೈಲ್ವೇ ಸಂಚಾರ ಜಾಲ ವಿಸ್ತರಣೆಗೆ ಪ್ರಮುಖ ಅಡಚಣೆ ಮಂಗಳೂರು- ಬೆಂಗಳೂರು ರೈಲುಮಾರ್ಗದ ಸಕಲೇಶಪುರ ಭಾಗದಲ್ಲಿ ರೈಲು ಸಂಚಾರ ಎದುರಿಸುತ್ತಿರುವ ಸಮಸ್ಯೆ. ಇದಕ್ಕೆ ಪರಿಹಾರವಾಗಿ ನಂದಿಕೂರು ಮೂಲಕ ಸುಮಾರು 135 ಕಿ.ಮೀ. ಪರ್ಯಾಯ ಮಾರ್ಗದ ಪ್ರಸ್ತಾವವನ್ನು ರೈಲ್ವೇ ಯಾತ್ರಿಕರ ಸಂಘ ಮಂಡಿಸಿತ್ತು. ನಂದಿಕೂರು, ಕಾರ್ಕಳ, ಬಜಗೋಳಿ,ಉಜಿರೆ,ಚಾರ್ಮಾಡಿ ಮೂಲಕ ಸಾಗಿ ಸೋಮನಕಾಡು ಸೇತುವೆಯ ಭಾಗದಲ್ಲಿ ಸುರಂಗದ ಮೂಲಕ ಸಾಗಿ ಕೊಟ್ಟಿಗೆಹಾರದಿಂದ ಮೂಡಿಗೆರೆಯಲ್ಲಿ ರೈಲು ಮಾರ್ಗಕ್ಕೆ ಜೋಡಣೆಯಾಗಿ ಅಲ್ಲಿಂದ ಮುಂದೆ ಬೆಂಗಳೂರಿಗೆ ಸಾಗುವುದು ಮತ್ತು ನಂದಿಕೂರು ಜಂಕ್ಷನ್‌ ಆಗಿ ರೂಪುಗೊಳ್ಳುವುದು ಈ ಪ್ರಸ್ತಾವನೆಯಲ್ಲಿ ಒಳಗೊಂಡಿದೆ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next