Advertisement

ಪಾಲಿಕೆ ವಾರ್ಡ್‌ಗಳಲ್ಲಿ ಹಾಲಿ-ಮಾಜಿ ಉಸ್ತುವಾರಿ ಸಚಿವರ ಮತಬೇಟೆ

10:22 PM Nov 07, 2019 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರ ಸದ್ಯ ಬಿರುಸು ಪಡೆಯುತ್ತಿದ್ದು, ಕೊನೆಯ ದಿನವಾದ ರವಿವಾರದವರೆಗೆ ಇನ್ನಷ್ಟು ಕುತೂ ಹಲದ ಸ್ಪರ್ಧಾ ಕಣವಾಗಿ ಬದಲಾಗುವ ಎಲ್ಲ ಸಾಧ್ಯತೆಗಳಿವೆ.

Advertisement

ಸದ್ಯ ರಾಜ್ಯ ರಾಜಿಕೀಯದ ಘಟಾನುಘಟಿ ನಾಯಕರು ಮಂಗಳೂರಿನಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಅದರಲ್ಲಿ ಯೂ ದ.ಕ. ಜಿಲ್ಲೆಯ ಹಾಲಿ ಹಾಗೂ ಮಾಜಿ ಉಸ್ತುವಾರಿ ಸಚಿವರು ವಿವಿಧ ವಾರ್ಡ್‌ ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದ ದೃಶ್ಯ ಗಮನಸೆಳೆಯಿತು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನಗರದ ಕೆಲವೆಡೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಗುರುವಾರ ಸಂಜೆ ಮತಯಾಚಿಸಿದರು. ಅತ್ತ ಮಾಜಿ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್‌ ಅವರು ಜಪ್ಪಿನಮೊಗರು ಸಹಿತ ವಿವಿಧ ಭಾಗಗಳಲ್ಲಿ ಗುರುವಾರ ಸಂಜೆ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತಯಾಚಿಸಿದರು. ಮಾಜಿ ಉಸ್ತುವಾರಿ ಬಿ. ರಮಾನಾಥ ರೈ, ವಿನಯ್‌ ಕುಮಾರ್‌ ಸೊರಕೆ ಅವರು ಕೂಡ ಮಂಗಳೂರಿನ ವಿವಿಧ ಭಾಗಗಳಲ್ಲಿ ಮತ ಯಾಚನೆಯಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಪಾಲಿಕೆಯ ಹಾಲಿ-ಮಾಜಿ ಉಸ್ತುವಾರಿ ಸಚಿವರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿರುವುದು “ಸುದಿನ’ ತಂಡವು ನಗರದ ಹಲವು ವಾರ್ಡ್‌ಗಳಲ್ಲಿ ಸುತಾಡಿದ್ದ ವೇಳೆ ಕಾಣಿಸಿತು.

ಮಣ್ಣಗುಡ್ಡ ವ್ಯಾಪ್ತಿಯಲ್ಲಿ ಸುತ್ತಾಡಿದಾಗ, ಅಬ್ಬರದ ಪ್ರಚಾರ ಕಾಣಲಿಲ್ಲ. ಈ ವಾರ್ಡ್‌ನಲ್ಲಿ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬಿಜಿಯಾಗಿದ್ದು, ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಮತಯಾಚನೆ ನಡೆಸುವ ದೃಶ್ಯವೂ ಎದುರಾಗಿರಲಿಲ್ಲ.

ಹೊಟೇಲ್‌ವೊಂದರಲ್ಲಿ ಟೀ ಕುಡಿಯುತ್ತಿದ್ದ ಸುಕುಮಾರ್‌ ಅವರನ್ನು ಮಾತನಾಡಿ ಸಿದಾಗ “ಚುನಾವಣೆ ವೇಳೆಯಲ್ಲಿ ಎಲ್ಲ ಪಕ್ಷದವರಿಗೆ ನಮ್ಮ ಮೇಲೆ ಬಾರೀ ಪ್ರೀತಿ ಉಕ್ಕಿ ಬರುತ್ತದೆ. ಫಲಿತಾಂಶ ಬಂದ ಮೇಲೆ ಅವರ ಪ್ರೀತಿ ಎಲ್ಲ ಕರಗಿ ಹೋಗುತ್ತದೆ. ಹಾಗೆಂದು ಮತದಾನ ಮಾಡದೆ ಇದ್ದರೆ ನಾವು ತಪ್ಪು ಮಾಡಿದಂತಾಗುತ್ತದೆ. ಆದರೂ ಮತದಾನವನ್ನು ತಪ್ಪದೆ ಮಾಡುತ್ತೇನೆ. ಮತ ಗಳಿಸಿ ಆಯ್ಕೆಯಾದವರು ಆ ಬಳಿಕವೂ ನಮ್ಮ ಮೇಲೆ ಕನಿಕರ ತೋರಿದರೆ ಉತ್ತಮ’ ಎನ್ನುವುದು ಅವರ ನಿರೀಕ್ಷೆಯಾಗಿತ್ತು.

Advertisement

ಕುದ್ರೋಳಿ ವಾರ್ಡ್‌ ಸುತ್ತಾಡಿದರೂ ಅಲ್ಲೂ ಅಬ್ಬರದ ಪ್ರಚಾರವಿ ರಲಿಲ್ಲ. ಆದರೆ ಮತಯಾಚನೆ ಮಾಡಿ ದ್ದರು ಎಂಬುದು ತಿಳಿಯಿತು. ಬಸ್‌ಗಾಗಿ ಕಾದು ಕುಳಿತಿದ್ದ ಸೇಸಮ್ಮ ಅವರನ್ನು ಮಾತನಾಡಿಸಿದಾಗ “ಸ್ಥಳೀಯ ಚುನಾವಣೆ ಇದಾಗಿರುವುದರಿಂದ ಪಕ್ಷದ ಚಿಹ್ನೆ ನೋಡುವ ಬದಲು ಅಭ್ಯರ್ಥಿಗಳ ಸಾಮರ್ಥ್ಯ ನೋಡಿ ಮತ ಚಲಾಯಿಸಲು ನಿರ್ಧರಿಸಿದ್ದೇವೆ’ ಎಂದರು.

ಬೆಳಗ್ಗೆ-ಸಂಜೆಯ ಬಳಿಕ ಪ್ರಚಾರ
ಸ್ಟೇಟ್‌ಬ್ಯಾಂಕ್‌ ಪರಿಸರದಲ್ಲಿಯೂ ಪಾಲಿಕೆ ಚುನಾವಣೆಯ ಬಹುದೊಡ್ಡ ಕ್ರೇಜ್‌ ಇದ್ದಂತೆ ಕಂಡಿಲ್ಲ. ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಕಿರಣ್‌ ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ “ಪ್ರಚಾರ ಪೂರ್ಣವಾಗಿ ಬೆಳಗ್ಗೆ, ಸಂಜೆ, ರಾತ್ರಿ ಮಾತ್ರ ನಡೆಯುತ್ತದೆ. ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕೆಲಸಕ್ಕೆ ಹೋಗುವವರು ಇರುವ ಕಾರಣದಿಂದ ಪ್ರಚಾರ ಬೆಳಗ್ಗೆ-ಸಂಜೆಯ ಬಳಿಕವೇ ನಡೆಯುತ್ತದೆ’ ಎಂದರು.

ನಾಮಫಲಕಗಳಲ್ಲಿದ್ದ ಹೆಸರು ಕಾಣುತ್ತಿಲ್ಲ!
ಚುನಾವಣ ನೀತಿಸಂಹಿತೆಯ ಬಿಸಿ ದ.ಕ. ಜಿಲ್ಲಾಧಿಕಾರಿ ಕಚೇರಿಗೂ ತಟ್ಟಿದೆ. ಇಲ್ಲಿರುವ ಬಹುತೇಕ ಜನಪ್ರತಿನಿಧಿಗಳ ಬೊರ್ಡ್‌ಗಳ ಹೆಸರಿಗೆ ಇದೀಗ ಕಾಗದ ಮುಚ್ಚಿ ಹೆಸರು ಕಾಣದಂತೆ ಬಂದ್‌ ಮಾಡಲಾಗಿದೆ. ಹೀಗಾಗಿ ನಾಮಫಲಕಗಳಲ್ಲಿದ್ದ ಹೆಸರು ಕಾಣುತ್ತಿಲ್ಲ!

ಈ ಬಾರಿ ನಮ್ಮದೇ ಗೆಲುವು
ಪಾಂಡೇಶ್ವರ ವಾರ್ಡ್‌ನಲ್ಲಿ ತೆರಳಿದಾಗ ಅಲ್ಲಿ ಒಂದು ಪಕ್ಷದ ಸುಮಾರು 10ಕ್ಕೂ ಹೆಚ್ಚು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಕಂಡುಬಂದರು. “ಈ ಬಾರಿ ನಮ್ಮದೇ ಗೆಲುವು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರೆ, ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಮನೆಗಳತ್ತ ತೆರಳುತ್ತಿದ್ದ ಇನ್ನೊಂದು ಪಕ್ಷದ ಕಾರ್ಯಕರ್ತರು ಕೂಡ “ನಮ್ಮದೇ ಗೆಲುವು’ ಎನ್ನುವ ವಿಶ್ವಾಸದಲ್ಲಿದ್ದರು. ನ. 12ರಂದು ಮತದಾನ ಮಾಡಲು ಅಣಿಯಾಗುತ್ತಿರುವ ಮತದಾರ ಮಾತ್ರ ಈ ಬಗ್ಗೆ ಯಾವ ಗುಟ್ಟನ್ನೂ ಬಿಟ್ಟು ಕೊಡಲಿಲ್ಲ.

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next