Advertisement

ಮಂಗಳೂರು: ಮಂಗಳಾ ಕ್ರೀಡಾಂಗಣ: ವಾಕಿಂಗ್‌ ಟ್ರ್ಯಾಕ್‌

10:55 AM Nov 10, 2022 | Team Udayavani |

ಮಹಾನಗರ: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮುಂಜಾನೆ- ಸಂಜೆ ವೇಳೆ ವಾಕಿಂಗ್‌, ಜಾಗಿಂಗ್‌ ಮಾಡುವವರಿಗಾಗಿ ಪ್ರತ್ಯೇಕ ಟ್ರ್ಯಾಕ್‌ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಶೀಘ್ರ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

Advertisement

ಕ್ರೀಡಾಂಗಣದಲ್ಲಿ ವಾಕಿಂಗ್‌ ಟ್ರ್ಯಾಕ್‌ನಿರ್ಮಿಸಬೇಕು ಎಂಬುವುದು ಹಿರಿಯ ನಾಗರಿಕರ, ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿತ್ತು. ಅದರಂತೆ ಶಾಸಕ ವೇದವ್ಯಾಸ ಕಾಮತ್‌ ಅವರು ತಮ್ಮ ಶಾಸಕರ ನಿಧಿಯಿಂದ 2 ಕೋ.ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ.

ಇದರಲ್ಲಿ ವಾಕಿಂಗ್‌ ಟ್ರ್ಯಾಕ್‌, ಮೈದಾನದ ನೀರು ಹೊರಗೆ ಹರಿದು ಹೋಗಲು ಚರಂಡಿ ವ್ಯವಸ್ಥೆ ಮತ್ತು ಸೇಫ್ಟಿಗಾಗಿ ಕೆಲವೊಂದು ವ್ಯವಸ್ಥೆಗಳನ್ನು ಆಳವಡಿಸಲಾಗುತ್ತದೆ. ಜತೆಗೆ ಕ್ರೀಡಾಂಗಣದ ಮೆಟ್ಟಿಲುಗಳನ್ನು ಕೆಳಭಾಗದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತದೆ. ಸದ್ಯ ಮೈದಾನದಲ್ಲಿರುವ ಸಿಂಥೆಟಿಕ್‌ ಟ್ರ್ಯಾಕ್‌ ಹೊರತುಪಡಿಸಿದ ಪ್ರದೇಶದಲ್ಲಿ ಈ ಕಾಮಗಾರಿ ನಡೆಯುಲಿದೆ. ಆ ಮೂಲಕ ಮೈದಾನಕ್ಕೆ ಹೊಸ ರೂಪ ಸಿಗಲಿದೆ. ಜತೆಗೆ ಕ್ರೀಡಾಂಗಣದ ಹೊರಭಾಗದಲ್ಲಿರುವ ವಾಲಿಬಾಲ್‌ ಕೋರ್ಟ್‌ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.

ಈ ಮೊದಲು ಮೈದಾನದ ಹೊರ ಭಾಗದಲ್ಲಿ ಹೊಸ ಸ್ಮಾರ್ಟ್‌ ಸಿಟಿಯಿಂದ ನಿರ್ಮಿಸಲಾದ ಪೆವಿಲಿಯನ್‌ ಬದಿಯಿಂದಾಗಿ ಇಂಡೋರ್‌ ಸ್ಟೇಡಿಯಂ, ಕರಾವಳಿ ಉತ್ಸವ ಮೈದಾನದವರೆಗೆ ವಾಕಿಂಗ್‌ಗೆ ಮಣ್ಣಿನ ರಸ್ತೆ ಇತ್ತು. ಅನೇಕರು ಇದನ್ನು ವಾಕಿಂಗ್‌ಗೆ ಬಳಸುತ್ತಿದ್ದರು. ಆದರೆ ಪೆವಿಲಿಯನ್‌ ಕಾಮಗಾರಿ ವೇಳೆ ಅಲ್ಲಿ ಮಣ್ಣು ರಾಶಿ ಹಾಕಿದ್ದರಿಂದ ವಾಕಿಂಗ್‌ ಮಾಡಲು ಆಡ್ಡಿಯಾಗಿತ್ತು. ಸದ್ಯ ಮಣ್ಣು ತೆರವುಗೊಳಿಸಿದ್ದು, ವಾಕಿಂಗ್‌ ಹಾಗೂ ಇತರ ಉದ್ದೇಶಕ್ಕೆ ಒಳಾಂಗಣ ಕ್ರೀಡಾಂಗಣಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.

ಕ್ರೀಡಾಂಗಣದಲ್ಲಿ ಹೆಚ್ಚಿದ ಚಟುವಟಿಕೆ

Advertisement

ಎರಡು ವರ್ಷದ ಬಳಿಕ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆ ಮತ್ತೆ ಚುರುಕುಗೊಂಡಿದೆ. ಶಾಲಾ ಕಾಲೇಜುಗಳಿಗೆ ಸಂಬಂಧಿಸಿದ ಕ್ರೀಡಾ ಚಟುವಟಿಕೆಗಳು ಪ್ರತಿದಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದರಿಂದ ಮೈದಾನದ ಬಳಕೆ ಹೆಚ್ಚಾಗಿದ್ದು, ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಕೂಡ ಹೆಚ್ಚು ಬಳಕೆಯಾಗುತ್ತಿದೆ.

ವಾಕಿಂಗ್‌ ಟ್ರ್ಯಾಕ್‌ ಮಾಡುವಂತಿಲ್ಲ?

ಒಂದು ಕಡೆಯಲ್ಲಿ ವಾಕಿಂಗ್‌ ಟ್ರ್ಯಾಕ್‌ ನಡೆಯುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಇದಕ್ಕೆ ಅಪಸ್ವರವೂ ಕೇಳಿ ಬಂದಿದೆ. ಕ್ರೀಡಾಂಗಣವನ್ನು ಕೇವಲ ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ಅಲ್ಲಿ ಇತರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಕ್ರೀಡೆಗೆ ಸಂಬಂಧ ಪಡದವರು ಕ್ರೀಡಾಂಗಣದೊಳಗೆ ಬಂದು ವಾಕಿಂಗ್‌-ಜಾಗಿಂಗ್‌ ಮಾಡಲು ಅವಕಾಶ ನೀಡಬಾರದು. ಕ್ರೀಡಾಂಗಣದ ಬಳಕೆಗೆ ಕೆಲವೊಂದು ನಿಯಮಾವಳಿಗಳಿದ್ದು, ವಾಕಿಂಗ್‌ ಗೆ ಪಾರ್ಕ್‌ ಅಥವಾ ಬೇರೆ ಯಾವುದಾದರೂ ಸ್ಥಳವನ್ನು ಬಳಸಬಹುದು. ಯಾವುದೇ ಕ್ರೀಡಾಂಗಣದಲ್ಲಿ ಜಾಗಿಂಗ್‌ ಟ್ರ್ಯಾಕ್‌ ಇಲ್ಲ ಎನ್ನುವ ಮಾತುಗಳೂ ಇಲ್ಲಿ ಕೇಳಿ ಬಂದಿದೆ.

ಅನುದಾನ ಬಿಡುಗಡೆ: ಮಂಗಳಾ ಕ್ರೀಡಾಂಗಣದ ಅಭಿವೃದ್ಧಿಯ ಭಾಗವಾಗಿ ವಾಕಿಂಗ್‌ ಟ್ರ್ಯಾಕ್‌, ನೀರು ಹರಿದು ಹೋಗುವ ಚರಂಡಿ ಹಾಗೂ ಇತರ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಬೆಳಗ್ಗೆ – ಸಂಜೆ ವೇಳೆ ಹಿರಿಯ ನಾಗರಿಕರಿಗೆ ವಾಕಿಂಗ್‌ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆಗೊಳಿಸಲಾಗಿದೆ. – ವೇದವ್ಯಾಸ ಕಾಮತ್‌, ಶಾಸಕರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next