Advertisement

ಮಂಗಳೂರು-ಕಾಸರಗೋಡು ಬಸ್‌ ಸಂಚಾರ ವ್ಯತ್ಯಯ

12:45 AM Sep 24, 2022 | Team Udayavani |

ಮಂಗಳೂರು: ಕೇರಳದಲ್ಲಿ ಪಿಎಫ್‌ಐ ಕರೆ ನೀಡಿರುವ ಹರತಾಳದ ಹಿನ್ನೆಲೆಯಲ್ಲಿ ಮಂಗಳೂರು ನಗರದಿಂದ ಕಾಸರಗೋಡಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್‌ ಸಂಚಾರದಲ್ಲಿ ಶುಕ್ರವಾರ ವ್ಯತ್ಯಯ ಉಂಟಾಗಿದೆ.

Advertisement

ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಕಾಸರಗೋಡಿಗೆ ಪ್ರತೀ ದಿನ 39 ಶೆಡ್ಯೂಲ್‌ನಲ್ಲಿ ಕೆಎಸ್ಸಾರ್ಟಿಸಿ ಬಸ್‌ ಸಂಚರಿಸುತ್ತದೆ. ಆದರೆ, ಹರತಾಳ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ತಲಪಾಡಿ ಗಡಿವರೆಗೆ ಮಾತ್ರ ಬಸ್‌ಗಳು ಸಂಚರಿಸಿದವು. ಸಂಜೆ ಬಳಿಕ 10 ಬಸ್‌ಗಳು ಕಾಸರಗೋಡಿಗೆ ಸಂಚರಿಸಿದೆ. ಆದರೆ, ಕಾಸರಗೋಡು ಭಾಗದಿಂದ ಅಲ್ಲಿನ ಕೆಎಸ್ಸಾರ್ಟಿಸಿ ಬಸ್‌ಗಳು ಯಾವುದೇ ಮಂಗಳೂರಿಗೆ ಆಗಮಿಸಿಲ್ಲ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡಿಯಲ್ಲಿ ಮಿಶ್ರ ಪ್ರತಿಕ್ರಿಯೆ
ಪಿಎಫ್ಐ ಕರೆ ನೀಡಿದ ಹರತಾಳಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಮೊಟಕುಗೊಂಡಿದೆ. ಕೆಲವೆಡೆ ತ್ರಿಚಕ್ರ ವಾಹನಗಳ ಸಹಿತ ಖಾಸಗಿ ವಾಹನಗಳು ಸಂಚರಿಸಿವೆ.

ವ್ಯಾಪಾರ ಸಂಸ್ಥೆಗಳು ಆಂಶಿಕವಾಗಿ ತೆರೆದಿವೆ. ಕಾಸರಗೋಡು ನಗರದಲ್ಲಿ ವ್ಯಾಪಾರ ಸಂಸ್ಥೆಗಳು ಬಹುತೇಕ ಮುಚ್ಚಿಕೊಂಡಿತ್ತು. ಸರಕಾರಿ ಕಚೇರಿಗಳಲ್ಲಿ ನೌಕರರ ಸಂಖ್ಯೆ ಕಡಿಮೆಯಿತ್ತು. ಕುಂಬಳೆ, ಉಪ್ಪಳ ಸಹಿತ ವಿವಿಧೆಡೆ ವ್ಯಾಪಾರ ಸಂಸ್ಥೆಗಳು ಮುಚ್ಚಿಕೊಂಡಿತ್ತು. ದ್ವಿಚಕ್ರ ವಾಹನಗಳು ಕೆಲವೆಡೆ ಸಂಚರಿಸಿವೆ. ಹರತಾಳದಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್‌ ಪುತ್ತೂರು ಕೊಪ್ಪರ ಬಜಾರ್‌ನಲ್ಲಿ ಸರಕು ಲಾರಿಯೊಂದಕ್ಕೆ ಶುಕ್ರವಾರ ಬೆಳಗ್ಗೆ ಕಲ್ಲೆಸೆಯಲಾಗಿದೆ. ಭದ್ರತೆಯಂಗವಾಗಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಪೊಲೀಸ್‌ ಹಾಗು ಶ್ವಾನ ದಳದಿಂದ ತಪಾಸಣೆ ನಡೆಯಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next