Advertisement

ಮಂಗಳೂರು –ಕಾರ್ಕಳ ಎನ್‌ಎಚ್‌ 169 ತ್ರಿಶಂಕು ಸ್ಥಿತಿ

12:25 AM Jun 06, 2022 | Team Udayavani |

ಮಂಗಳೂರು:ಆರು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಮಂಗಳೂರು – ಕಾರ್ಕಳ ರಾ.ಹೆ. 169 ಚತುಷ್ಪಥ ಯೋಜನೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ ಭೂಸ್ವಾಧೀನದಲ್ಲಿ ಹಿಂದುಳಿದ ಕಾರಣ ಈ ಹೆದ್ದಾರಿ ಭಾಗವನ್ನು ರಾ.ಹೆ. ಪ್ರಾಧಿಕಾರ ಇನ್ನೂ ಪಡೆದುಕೊಂಡಿಲ್ಲ.

Advertisement

ಇದರಿಂದಾಗಿ ಅತ್ತ ಹೆದ್ದಾರಿ ವಿಭಾಗದಿಂದಲೂ ಇತ್ತ ಹೆದ್ದಾರಿ ಪ್ರಾಧಿಕಾರದಿಂದಲೂ ನಿರ್ವಹಣೆ ಆಗದೆ ಹೆದ್ದಾರಿಯ ಈ 45 ಕಿ.ಮೀ. ಭಾಗ ತ್ರಿಶಂಕು ಸ್ಥಿತಿಯಲ್ಲಿದೆ.

ಸಾಮಾನ್ಯವಾಗಿ ಭೂಸ್ವಾಧೀನ ಶೇ. 80ರಷ್ಟು ಪೂರ್ಣಗೊಂಡ ಬಳಿಕ ಹೆದ್ದಾರಿ ವಿಭಾಗದಲ್ಲಿರುವ ರಾ.ಹೆ. ಯೋಜನೆಯ ಭಾಗವನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕಾಗುತ್ತದೆ. ಇದುವರೆಗೆ ಹೆದ್ದಾರಿಯ ಭಾಗವನ್ನು ಸ್ವೀಕರಿಸುವ ಗೋಜಿಗೆ ರಾ.ಹೆ. ಪ್ರಾಧಿಕಾರ ಹೋಗಿಲ್ಲ. ಒಂದು ವೇಳೆ ಭೂಸ್ವಾಧೀನ ಪೂರ್ಣವಾಗುವ ಮೊದಲೇ ಸ್ವೀಕರಿಸಿದಲ್ಲಿ ಅದರ ನಿರ್ವಹಣೆಯ ಹೊಣೆ ಹೊರಬೇಕಾಗುತ್ತದೆ ಎನ್ನುವುದು ಕಾರಣ. ಪ್ರಾರಂಭದಿಂದಲೂ ಈ ಯೋಜನೆ ಕ್ಯಾರೇಜ್‌ ವೇ ಅಗಲ, ಅಲೈನ್‌ಮೆಂಟ್‌ ಗೊಂದಲ ಇತ್ಯಾದಿ ಕಾರಣಕ್ಕೆ ಕುಂಟುತ್ತ ಸಾಗುತ್ತಿದೆ. 2016ರ ಮೇ 20ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು.

ಪ್ರಾಧಿಕಾರವು ಈ ಹೆದ್ದಾರಿ ಭಾಗವನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಹೆದ್ದಾರಿ ವಿಭಾಗವೇ ನಿರ್ವಹಣೆ ಮಾಡಬೇಕಿದೆ. ಹಾಗಾಗಿ ಮಂಗಳೂರು ವಿಭಾಗದ ಅಧಿಕಾರಿಗಳು ತಮ್ಮ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದು ನಿರ್ವಹಣೆಗೆ ಅನುದಾನ ನೀಡುವಂತೆ ಕೋರಿಕೊಂಡಿದ್ದಾರೆ.

ನಿರ್ವಹಣೆ ವಿಚಾರ ಗೊಂದಲದಲ್ಲಿದೆ, ಅನುದಾನ ಬರುತ್ತಿಲ್ಲ. ಸದ್ಯಕ್ಕೆ ಹೆದ್ದಾರಿಯಲ್ಲಿ ತೇಪೆ ಕೆಲಸ ಬೇಕಾಗಿಲ್ಲ, ಆದರೆ ಇಕ್ಕೆಲಗಳ ಶೌಲ್ಡರ್ ಹಾಳಾಗಿದ್ದರೆ ಸರಿಪಡಿಸಬೇಕು. ವಾಹನ ಸಂಚಾರದ ವೇಳೆ ವೀಕ್ಷಣೆಗೆ ಅಡ್ಡಿಯಾಗುವ ಗಿಡ ಮರಗಳ ಗೆಲ್ಲು ತೆರವು ಮಾಡಬೇಕಿದೆ. ಮೊದಲ ಕೆಲವು ಮಳೆಗೆ ಚರಂಡಿಗಳಲ್ಲಿ ಕಸ ತುಂಬಿರುತ್ತವೆ. ಕೆಲವೆಡೆ ತೋಡಿಗೆ ಮಣ್ಣು ಹಾಕಿ ರಸ್ತೆ ಮಾಡಿರುವುದನ್ನು ತೆಗೆಯಬೇಕು. ಇಂತಹ ಕೆಲಸಗಳು ಕ್ಷಿಪ್ರವಾಗಿ ಆಗದಿದ್ದರೆ ಸುಗಮ ಸಂಚಾರಕ್ಕೆ ತೊಂದರೆಯಾಗಬಹುದು ಎನ್ನುವುದು ಹೆದ್ದಾರಿ ವಿಭಾಗದ ಅಧಿಕಾರಿಗಳ ಆತಂಕ.

Advertisement

ಭೂಸ್ವಾಧೀನ ವಿಳಂಬ: ಕೆಲವು ಗ್ರಾಮಸ್ಥರು ಪರಿಹಾರದಲ್ಲಿ ತಾರತಮ್ಯ ವಾಗಿದೆ ಎಂದು ಹೈಕೋರ್ಟ್‌ಗೆ ದೂರು ನೀಡಿ ಭೂ ಸ್ವಾಧೀನಕ್ಕೆ ತಡೆಯಾಜ್ಞೆ ತಂದಿದ್ದರು. ಸುಮಾರು 15 ಗ್ರಾಮಗಳಿಂದ 212ರಷ್ಟು ರೈತರು ತಡೆಯಾಜ್ಞೆ ತಂದಿದ್ದಾರೆ.

ಇದರ ನಡುವೆ ಹಲವರಿಗೆ ಪರಿಹಾರ ವಿತರಣೆ ನಡೆದಿದೆ. ಇದು ವರೆಗೆ 427 ಮಂದಿಗೆ ಒಟ್ಟು 206 ಕೋ.ರೂ. ಪರಿಹಾರವಾಗಿ ನೀಡಲಾಗಿದೆ. ಇನ್ನೂ 427 ಮಂದಿಗೆ ಪರಿಹಾರ ನೀಡುವುದು ಬಾಕಿ ಇದೆ. ತಡೆಯಾಜ್ಞೆ ತಂದವರನ್ನು ಬಿಟ್ಟು ಉಳಿದವರಿಗೆ ನಿಧಾನಗತಿಯಲ್ಲಿ ಪರಿಹಾರ ದೊರೆಯುತ್ತಿದೆ ಎನ್ನುತ್ತಾರೆ ಹೆದ್ದಾರಿ ಭೂಮಾಲಕರ ಹೋರಾಟ ಸಮಿತಿಯ ಕಾರ್ಯದರ್ಶಿ ಪ್ರಕಾಶ್ಚಂದ್ರ. ಭೂಸ್ವಾಧೀನ ಮುಂದುವರಿದು ಶೇ. 80ರಷ್ಟಾದರೂ ಆಗದೆ ಇದ್ದರೆ ಹೆದ್ದಾರಿ ಹಸ್ತಾಂತರ ಇನ್ನಷ್ಟು ವಿಳಂಬವಾಗುವ ಆತಂಕ ಇದೆ.

ವರ್ಕ್‌ ಆರ್ಡರ್‌ ಆಗಿದೆ, ಭೂಸ್ವಾಧೀನ ಆಗಿಲ್ಲ!
ದಿಲೀಪ್‌ ಬಿಲ್ಡ್‌ಕಾನ್‌ ಕಂಪೆನಿಯು ಕುಲಶೇಖರ-ಸಾಣೂರು ಚತುಷ್ಪಥ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಯೋಜನಾ ವೆಚ್ಚ ಒಟ್ಟು 1.137 ಕೋ.ರೂ. ಬಿಡ್‌ ಅಂತಿಮಗೊಂಡು ವರ್ಷವೇ ಕಳೆದಿದೆ. ಇದರ ನಡುವೆ ವರ್ಕ್‌ ಆರ್ಡರ್‌ ನೀಡಲಾಗಿದೆ. ಕಂಪೆನಿಯವರು ತೋಡಾರು ಬಳಿ ಸ್ಥಾವರ ಸ್ಥಾಪಿಸಿದ್ದು ಪೂರ್ವಭಾವಿ ಕೆಲಸ ಮಾಡಿದ್ದಾರೆ. ಆದರೆ ಕಾಮಗಾರಿ ಪ್ರಾರಂಭಿಸಬೇಕಾದರೆ ಭೂಸ್ವಾಧೀನ ಆಗಿಲ್ಲ ಎನ್ನುವುದು ತೊಡಕು.

ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಅಗತ್ಯವಿರುವಷ್ಟು ಭೂಸ್ವಾಧೀನ ಆದ ಬಳಿಕವಷ್ಟೇ ಹೆದ್ದಾರಿಯನ್ನು ನಮ್ಮ ಸುಪರ್ದಿಗೆ ಪಡೆದುಕೊಳ್ಳುತ್ತೇವೆ.
– ಲಿಂಗೇಗೌಡ,
ಯೋಜನಾ ನಿರ್ದೇಶಕರು,
ಎನ್‌ಎಚ್‌ಎಐ, ಮಂಗಳೂರು

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next