ಮಂಗಳೂರು: ಕೇಂದ್ರ ರೈಲ್ವೇ ಸಚಿವಾಲಯದಡಿ ಅಮೃತ ಭಾರತ ಯೋಜನೆಯಡಿ 1 ಸಾವಿರ ರೈಲು ನಿಲ್ದಾಣಗಳು ಮೇಲ್ದರ್ಜೆಗೇರಲಿದೆ; ಇದರಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ (ಕಂಕನಾಡಿ) ಸೇರಿದೆ.
ಉಳಿದಂತೆ, ದ. ಕ. ಜಿಲ್ಲೆಯ ಬಂಟ್ವಾಳ ಮತ್ತು ಸುಬ್ರಹ್ಮಣ್ಯ ರೋಡ್ ಹಾಗೂ ಕಾಸರಗೋಡು ನಗರ ನಿಲ್ದಾಣಗಳು ಕೂಡ ಪ್ರಸ್ತಾವಿತ ಯೋಜನೆಯಡಿ ಮೇಲ್ದರ್ಜೆಗೇರಲಿದೆ.
ರೈಲು ನಿಲ್ದಾಣದ ಆದಾಯ, ಬಳಸುತ್ತಿರುವ ಪ್ರಯಾಣಿಕರ ಸಂಖ್ಯೆ, ಪ್ರವಾಸೋದ್ಯಮ, ಯಾತ್ರಾರ್ಥಿಗಳ ಸಂಖ್ಯೆ ಮತ್ತಿತರ ವಿಷಯ, ಬೆಳವಣಿಗೆಗೆ ಇರುವ ಅವಕಾಶಗಳನ್ನು ಆಧರಿಸಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಲು ನಿಲ್ದಾಣಗಳ ಆಯ್ಕೆ ನಡೆಸಲಾಗಿದೆ. ನಿಲ್ದಾಣದಲ್ಲಿ ಹೆಚ್ಚು ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.
ಮಂಗಳೂರು ನಗರ ಸಂಪರ್ಕಕ್ಕೆ ಸುಗಮ ವ್ಯವಸ್ಥೆ ಒದಗಿಸುವುದು ಪ್ರಸ್ತಾವಿತ ಯೋಜನೆಯಲ್ಲಿ ಸೇರಿದೆ. ಮಂಗಳೂರು ಜಂಕ್ಷನ್ ನಿಲ್ದಾಣ ನಗರ ಸರಹದ್ದಿನಲ್ಲೇ ಇದ್ದರೂ ಇಲ್ಲಿಗೆ ಪ್ರಯಾಣಿಕರ ಸಂಪರ್ಕ ಕಷ್ಟವಿದೆ. ಹೊಸ ಯೋಜನೆಯಲ್ಲಿ ಪರಿಹಾರ ಹುಡುಕಬಹುದು. ಹೆಚ್ಚುವರಿ ಪ್ಲಾಟ್‌ಫಾರ್ಮ್ ನಿರ್ಮಿಸಬಹುದಾಗಿದೆ.
ಅಮೃತ ಭಾರತ ಯೋಜನೆಗೆ ಆಯ್ಕೆಯಾಗಿರುವ ನೈಋತ್ಯ ರೈಲ್ವೇಯ ಮೈಸೂರು ವಿಭಾಗದ 15 ರೈಲು ನಿಲ್ದಾಣಗಳಿಗೆ ತಲಾ 8ರಿಂದ 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುದಾನ ನೀಡಲಾಗುತ್ತದೆ. ಸಮಗ್ರ ಯೋಜನ ವರದಿ ಆಧರಿಸಿ ಹೆಚ್ಚುವರಿ ಅನುದಾನ ಪಡೆಯಲು ಅವಕಾಶವೂ ಇದೆ.
ಸೌಲಭ್ಯ ದೊರೆಯುವ ನಿರೀಕ್ಷೆ
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್ ನಿರ್ಮಾಣ ನಡೆಯುತ್ತಿದ್ದು, ಬಹು ಸಂಖ್ಯೆಯ ಪ್ರಯಾಣಿಕರು ಭೇಟಿ ನೀಡುವ ನಿಲ್ದಾಣದಲ್ಲಿ ಬಹು ಸೌಲಭ್ಯಗಳನ್ನು ನೀಡಬಹುದಾಗಿದೆ. ಪ್ರಯಾಣಿಕರು ಹಣ ಪಾವತಿಸಿ ವಿಶ್ರಾಂತಿ ಪಡೆಯಬಹುದಾದ ವಿಶಾಲ ಕಟ್ಟಡ, ಹೆಚ್ಚುವರಿ ಎಕ್ಸಲೇಟರ್‌ಗಳು, ಡಿಜಿಟಲ್ ಮಾಹಿತಿ ಫಲಕಗಳು, ಹೆಚ್ಚುವರಿ ಪ್ರವೇಶ ದ್ವಾರ ಇತ್ಯಾದಿ ಸೌಲಭ್ಯ ದೊರೆಯುವ ನಿರೀಕ್ಷೆಯಿದೆ