Advertisement

ಮಂಗಳೂರು ಐಟಿ ಕಚೇರಿ ಎದುರು ಕಾಂಗ್ರೆಸ್‌ ದಾಂಧಲೆ

05:43 PM Aug 02, 2017 | Sharanya Alva |

ಮಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮತ್ತವರ ನಿಕಟವರ್ತಿಗಳ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಸಂಜೆ ಅತ್ತಾವರದಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿ ದಾಂಧಲೆ ನಡೆಸಿದರು.
ಕಾರ್ಪೊರೇಟರ್‌ ಎ.ಸಿ. ವಿನಯರಾಜ್‌ ನೇತೃತ್ವ ದಲ್ಲಿ ಯುವ ಕಾಂಗ್ರೆಸ್‌ ಕಾರ್ಯ ಕರ್ತರು ಸಂಜೆ 4.45ರ ವೇಳೆಗೆ ಅತ್ತಾವರದ ಐ.ಟಿ. ಕಚೇರಿ ಆವರಣಕ್ಕೆ ತೆರಳಿ ಮೊದಲು ದ್ವಾರದ ಬಳಿ ಮೆಟ್ಟಲಿನಲ್ಲಿ ಕುಳಿತು ಕೇಂದ್ರ ಸರಕಾರ ಮತ್ತು ಪ್ರಧಾನಿ ವಿರುದ್ಧ ಧಿಕ್ಕಾರ ಕೂಗಿ ದರು. ಆಗ ಪೊಲೀಸರು ಆಗಮಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ತಂದಿದ್ದ ಟೈರನ್ನು ಎತ್ತಿಕೊಂಡು ಹೋಗಲು ಯತ್ನಿಸಿ ದಾಗ ಅದನ್ನು ಪೊಲೀಸರ ಕೈಯಿಂದ ಕಿತ್ತುಕೊಂಡರು ಹಾಗೂ ಐಟಿ ಕಚೇರಿ ಎದುರು ಅದಕ್ಕೆ ಕಿಚ್ಚಿಟ್ಟರು. ಬಳಿಕ ಐಟಿ ಕಚೇರಿಯ ದ್ವಾರದ ಬಳಿ ತೆರಳಿದ ಕಾರ್ಯಕರ್ತರು ದ್ವಾರದ ಗಾಜು ಗಳಿಗೆ ಕೈಯಿಂದ ಹೊಡೆದರು. ದ್ವಾರದ ನಾಲ್ಕು ಗಾಜುಗಳು ಪುಡಿ ಯಾಗಿವೆ. ಅನಂತರ ಆಕ್ರೋಶಿತ ಕಾರ್ಯಕರ್ತರು ಐ.ಟಿ. ಇಲಾಖೆಯ ಕಚೇರಿಯ ಒಳಗೆ ನುಗ್ಗಲು ಯತ್ನಿಸಿ ದಾಗ ಪೊಲೀಸರು ಅವರನ್ನು ತಡೆದರು.

Advertisement

ಪ್ರತೀಕಾರದ ರಾಜಕಾರಣ
ಈ ಸಂದರ್ಭ ಎ.ಸಿ. ವಿನಯರಾಜ್‌ ಅವರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತ ನಾಡಿ, ಮಣಿಪುರ, ಗೋವಾ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಬಿಜೆಪಿ ಕುದುರೆ ವ್ಯಾಪಾರ ನಡೆಸಿ ಅಧಿಕಾರಕ್ಕೆ ಬಂದಿದೆ. ಈಗ ಗುಜರಾತಿ ನಲ್ಲಿಯೂ ಕುದುರೆ ವ್ಯಾಪಾರ ನಡೆಸಲು ಅದು ಪ್ರಯ ತ್ನಿಸುತ್ತಿದೆ. ಗುಜರಾತಿನ ಕಾಂಗ್ರೆಸ್‌ ಶಾಸಕರು ಬೆದರಿಕೆ ಇರುವ ಕಾರಣ ಬೆಂಗ ಳೂರಿಗೆ ಬಂದು ಆಶ್ರಯ ಪಡೆದಿದ್ದಾರೆ. ಅವರಿಗೆ ಇಲ್ಲಿ ಆಶ್ರಯ ನೀಡಿರುವುದನ್ನು ಸಹಿಸ ಲಾಗದೆ ಸಚಿವ ಡಿ.ಕೆ. ಶಿವಕುಮಾರ್‌ ಅವರ ಮೇಲೆ ಐ.ಟಿ. ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು. ಕಳೆದ 4 ವರ್ಷಗಳಿಂದ ಉತ್ತಮ ಆಡಳಿತ ನೀಡುತ್ತಿರುವ ಕರ್ನಾಟಕ ಸರಕಾರ ದಲ್ಲಿ ಸಚಿವ ರಾಗಿರುವ ಡಿ.ಕೆ. ಶಿವಕುಮಾರ್‌ ಅವರ ಮನೆ, ಕಚೇರಿ ಮತ್ತು ವ್ಯಾಪಾರ ಸಂಸ್ಥೆಗಳ ಮೇಲೆ ಐ.ಟಿ. ದಾಳಿ ಮಾಡಿಸುವ ಮೂಲಕ ಮೋದಿ ಸರಕಾರ ಪ್ರತೀ ಕಾರದ ರಾಜಕಾರಣ ಮಾಡುತ್ತಿದೆ. ಇಂತಹ ರಾಜಕೀಯ ವೈಷಮ್ಯ ಪ್ರಜಾಪ್ರಭುತ್ವ ಮತ್ತು ದೇಶದ ಏಕತೆಗೆ ಮಾರಕವಾಗಿದೆ. ಆದಾಯ ತೆರಿಗೆ ಇಲಾಖೆಯು ಸಿಆರ್‌ಪಿಎಫ್‌ ಸಿಬಂದಿ ಯನ್ನು ಬಳಸಿ ದಾಳಿ ನಡೆಸಿರುವುದು ಖಂಡನೀಯ ಎಂದರು.

ಅವರು ಭಾಷಣವನ್ನು ಪೂರ್ತಿಗೊಳಿಸುವ ಮೊದಲೇ ಪಾಂಡೇಶ್ವರ ಪೊಲೀಸ್‌ ಇನ್ಸ್‌ ಪೆಕ್ಟರ್‌ ಕೆ.ಯು. ಬೆಳ್ಳಿಯಪ್ಪ ನೇತೃತ್ವದ ಪೊಲೀಸರು ಆಗಮಿಸಿ ಪ್ರತಿಭಟನ ನಿರತರನ್ನು ಚದುರಿಸಿದರು.

ರಾಜ್ಯದಲ್ಲಿ  ಈ ರೀತಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜಕಾರಣಿಗಳು, ಉದ್ಯಮಿ ಅಥವಾ ಸರಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ ಉದಾಹರಣೆಗಳು ಸಾಕಷ್ಟು ಇವೆ. ಆದರೆ ಇಲ್ಲಿವರೆಗೆ, ಈ ರೀತಿ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯನ್ನು ಪ್ರತಿರೋಧಿಸಿ, ಬೆಂಬಲಿಗರು ಐಟಿ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಥವಾ ಕಿಟಕಿ ಗಾಜು ಪುಡಿ ಮಾಡಿ ದಾಂಧಲೆ ನಡೆಸಿದ ಘಟನೆ ಹಿಂದೆ ಯಾವತ್ತೂ ನಡೆದಿಲ್ಲ. ಈ ಕಾರಣಕ್ಕೆ ಕಾಂಗ್ರೆಸ್‌ ಕಾರ್ಯಕರ್ತರ ಈ ರೀತಿಯ ದಾಳಿಯನ್ನು ಮಂಗಳೂರು ವಿಭಾಗದ ತೆರಿಗೆ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಕೂಡ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಲು ಮುಂದಾಗಿರುವುದು ಗಮನಾರ್ಹ.

Advertisement

ಬಿಜೆಪಿ ತೀವ್ರ ಖಂಡನೆ: ಡಿ.ಕೆ.ಶಿ. ಮತ್ತವರ ನಿಕಟವರ್ತಿಗಳ ಮೇಲಿನ ಐ.ಟಿ. ಅಧಿಕಾರಿಗಳ ದಾಳಿಯನ್ನು ಪ್ರತಿಭಟಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳೂರಿ ನಲ್ಲಿ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿ ದಾಂಧಲೆ ನಡೆ ಸಿರುವುದನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ. 

ಈ ಕೃತ್ಯ ಗೂಂಡಾಗಿರಿಗೆ ಸಮಾನವಾಗಿದ್ದು, ದಾಂಧಲೆ ನಡೆಸಿದವರನ್ನು ಬಂಧಿಸಬೇಕು ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಬಿಜೆಪಿ ಜಿಲಾ ಪ್ರಧಾನ ಕಾರ್ಯದರ್ಶಿ ಕಿಶೋರ್‌ ರೈ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್‌ ಅವರೂ‌ ಯುವ ಕಾಂಗ್ರೆಸ್‌ ಕಾರ್ಯ ಕರ್ತರ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

“ದೂರು ನೀಡಲು ಸೂಚಿಸಲಾಗಿದೆ’
ಘಟನೆಯ ಬಗ್ಗೆ ಪ್ರಕರಣ ಇನ್ನಷ್ಟೇ ದಾಖಲಾಗಬೇಕಿದೆ. ದೂರು ನೀಡುವಂತೆ ಐ.ಟಿ. ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು, ಅವರು ದೂರು ನೀಡುವುದಾಗಿ ತಿಳಿಸಿದ್ದಾರೆ. ಒಂದೊಮ್ಮೆ ಅವರು ದೂರು ನೀಡದಿದ್ದರೆ ನಾವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುತ್ತೇವೆ ಎಂದು ಪಾಂಡೇಶ್ವರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರಣ್‌ ಬೆಳ್ಳಿಯಪ್ಪ ಕೆ.ಯು. ತಿಳಿಸಿದ್ದಾರೆ. ಐ.ಟಿ. ಕಚೇರಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ ಎಂದಿದ್ದಾರೆ.

ಚಿತ್ರಗಳು: ಸತೀಶ್ ಇರಾ

Advertisement

Udayavani is now on Telegram. Click here to join our channel and stay updated with the latest news.

Next