Advertisement

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಪುನರಾರಂಭಗೊಳ್ಳದ ದೇಶೀಯ ಸರಕು ಸಾಗಾಟ

11:46 AM May 16, 2022 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶೀಯ ಕಾರ್ಗೋ ಸೇವೆ ಸ್ಥಗಿತಗೊಂಡು ಒಂದು ವರ್ಷ ಕಳೆದಿದ್ದು, ಔಷಧ ಮತ್ತಿತರ ತುರ್ತು ಸಾಮಗ್ರಿಗಳ ಸಾಗಾಟಕ್ಕೆ ತೀವ್ರ ತೊಂದರೆಯಾಗಿದೆ.

Advertisement

ಕೊರೊನಾ ಬಳಿಕ ಅಂತಾರಾಷ್ಟ್ರೀಯ ಕಾರ್ಗೊ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡರೂ ದೇಶೀಯ ಕಾರ್ಗೋ ಸೇವೆ ಇನ್ನೂ ಆರಂಭಗೊಂಡಿಲ್ಲ. 2021ರ ಮಾರ್ಚ್‌ನಲ್ಲಿ ಈ ಸೇವೆ ಸ್ಥಗಿತಗೊಂಡಿತ್ತು. ಹೊರಗಿನ ಉತ್ಪನ್ನಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿವೆ. ಆದರೆ ಇಲ್ಲಿಂದ ರವಾನಿಸಲು ಅವಕಾಶವಿಲ್ಲ.

ಸ್ಕ್ರೀನರ್‌ಗಳ ಕೊರತೆ
ಕಾರ್ಗೋ ಟರ್ಮಿನಲನ್ನು 2017ರ ವರೆಗೆ ಮುಂಬಯಿಯ ಖಾಸಗಿ ಸಂಸ್ಥೆ ನಿರ್ವಹಿಸುತ್ತಿತ್ತು. ಆದರೆ ಕೊರೊನಾ ಸಂದರ್ಭ ಪರವಾನಿಗೆ ನವೀಕರಿಸಿಕೊಂಡಿರಲಿಲ್ಲ. ಬಳಿಕ ಗುತ್ತಿಗೆಯನ್ನು ಕೊನೆಗೊಳಿಸಿ ಸ್ಕ್ರೀನಿಂಗ್‌ ಯಂತ್ರದೊಂದಿಗೆ ಸಂಸ್ಥೆ ಜಾಗ ಖಾಲಿ ಮಾಡಿತು. ಅನಂತರ ಮತ್ತೂಂದು ಕಂಪೆನಿ ಗುತ್ತಿಗೆ ವಹಿಸಿಕೊಂಡರೂ ಸ್ಕ್ರೀನಿಂಗ್‌ ಯಂತ್ರಕ್ಕೆ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಪರಿಣಾಮವಾಗಿ ಕಾರ್ಗೋ ಸಾಗಾಟಕ್ಕೆ ಬೇಡಿಕೆ ಇದ್ದರೂ ಸ್ಕ್ರೀನಿಂಗ್‌ ಯಂತ್ರದ ಅಲಭ್ಯತೆ ಅಡ್ಡಿಯಾಗಿತ್ತು. ಹಲವು ತಿಂಗಳುಗಳ ಬಳಿಕ ಯಂತ್ರವನ್ನು ತಂದರೂ ಕಾರ್ಗೊ ಸೇವೆ ಆರಂಭಿಸಲು ಮತ್ತೆ ಬಿಸಿಎಎಸ್‌ (ಬ್ಯೂರೋ ಆಫ್ ಸಿವಿಲ್‌ ಏವಿಯೇಷನ್‌ ಸೆಕ್ಯುರಿಟಿ) ಅನುಮತಿ ಪಡೆದುಕೊಳ್ಳಬೇಕೆಂಬ ಷರತ್ತು ವಿಧಿಸಲಾಯಿತು. ಕೊನೆಗೆ ಫೆ. 3ರಂದು ಬಿಸಿಎಎಸ್‌ ಅನುಮತಿ ನೀಡಿತು. ಆದರೆ ಈಗ ಸ್ಕ್ರೀನಿಂಗ್‌ ಸಿಬಂದಿ ಇಲ್ಲದೆ ಸಮಸ್ಯೆಯಾಗಿದೆ ಎಂದು ತಿಳಿದುಬಂದಿದೆ.

ತಿಂಗಳಿಗೆ 300
ಟನ್‌ ಸರಕು ಬೇಡಿಕೆ
ಮಂಗಳೂರು ವಿಮಾನ ನಿಲ್ದಾಣದಿಂದ ತಿಂಗಳಿಗೆ ಸರಿಸುಮಾರು 200ರಿಂದ 300 ಟನ್‌ ಸರಕು ದೇಶದ ವಿವಿಧ ರಾಜ್ಯಗಳಿಗೆ ರವಾನೆಯಾಗುತ್ತಿತ್ತು. ಮೀನು, ಮಲ್ಲಿಗೆ, ಹಣ್ಣು ಹಂಪಲು, ಔಷಧ, ಅಂಚೆ ಮೊದಲಾದವು ಬೇರೆ ರಾಜ್ಯಗಳಿಗೆ ವಿಮಾನದ ಮೂಲಕ ಹೋಗುತ್ತಿತ್ತು. ಪೂರೈಕೆದಾರರಿಗೂ ಇದರಿಂದ ಅನುಕೂಲವಾಗುತ್ತಿತ್ತು. ಈಗ ಇಂತಹ ಸರಕು ಸಾಗಾಟದಾರರಿಗೆ ಪೆಟ್ಟು ಬಿದ್ದಿದೆ.ಈ ಪೈಕಿ ಕೆಲವು ಸರಕುಗಳನ್ನು ಬೆಂಗಳೂರಿಗೆ ರಸ್ತೆ ಮೂಲಕ ಸಾಗಿಸಿ ಅಲ್ಲಿಂದ ವಿಮಾನದಲ್ಲಿ ಒಯ್ಯಲಾಗುತ್ತಿದೆ.

ಬೆಂಗಳೂರಿಗೆ ಸಾಗಿಸುವುದು ಹೆಚ್ಚುವರಿ ವೆಚ್ಚವಾಗುವುದರಿಂದ ಕೆಲವು ಸಾಗಾಟದಾರರು ಅದಕ್ಕೆ ಮನಸ್ಸು ಮಾಡುತ್ತಿಲ್ಲ. ಬೇಗನೆ ಹಾಳಾಗುವ ಕೆಲವು ಉತ್ಪನ್ನಗಳನ್ನು ರಸ್ತೆ ಮೂಲಕ ಕಳುಹಿಸಿದರೆ ಪ್ರಯೋಜನವಿಲ್ಲ ಎನ್ನುತ್ತಾರೆ ಪೂರೈಕೆದಾರರು.

Advertisement

ರಕ್ತ ಮಾದರಿ ಕಳುಹಿಸಲು ತೊಡಕು
ಪ್ರತೀ ದಿನ ರಕ್ತದ ಮಾದರಿಯನ್ನು ವಿಮಾನದ ಮೂಲಕ ಬೇರೆ ಬೇರೆ ರಾಜ್ಯ ಗಳಿಗೆ ಕಳುಹಿಸಿಕೊಡಲಾಗುತ್ತಿತ್ತು. ಅಲ್ಲದೆ ಮೃತದೇಹವನ್ನು ಕೂಡ ವಿಮಾನದ ಮೂಲಕ ಕಳುಹಿಸಲಾಗುತ್ತಿತ್ತು. ಇದಕ್ಕೂ ಈಗ ತೀವ್ರ ತೊಂದರೆಯಾಗಿದೆ. ಬೆಂಗಳೂರು ಅಥವಾ ಕಣ್ಣೂರಿಗೆ ತೆರಳಿ ರವಾನಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಬಿಸಿಎಎಸ್‌ ಅನುಮತಿ ದೊರೆತಿದ್ದು, ಸ್ಕ್ರೀನರ್‌ಗಳ ನೇಮಕ ಪ್ರಕ್ರಿಯೆ ಆಗುತ್ತಿದೆ. ಸ್ಕ್ರೀನಿಂಗ್‌ ದರ ನಿಗದಿ ಕೂಡ ಆಗಬೇಕಿದ್ದು, ಅನಂತರ ಡೊಮೆಸ್ಟಿಕ್‌ ಕಾರ್ಗೋ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ. ಈಗ ಡೊಮೆಸ್ಟಿಕ್‌ ಕಾರ್ಗೋವನ್ನು ಬೆಂಗಳೂರಿನ ಮೂಲಕ ಕಳುಹಿಸಿಕೊಡಲಾಗುತ್ತಿದೆ. ಮೃತದೇಹ ಸಾಗಾಟದಂತಹ ತುರ್ತು ಸಂದರ್ಭದಲ್ಲಿ ಕಸ್ಟಮ್ಸ್‌ ಅನುಮತಿ ಪಡೆದು ವ್ಯವಸ್ಥೆ ಮಾಡಿಕೊಡುತ್ತೇವೆ.
– ಸೆಲ್ವ ಕುಮಾರ್‌,
ಕಾರ್ಗೋ ವಿಭಾಗದ ಮ್ಯಾನೇಜರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next