ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಶನಿವಾರ ಮುಂಜಾನೆ ನಗರದ ಪಡೀಲ್ ಬಜಾಲ್ ಕ್ರಾಸ್‌ನಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ರಘು ನಾಯಕ್ ಅವರು ಸಿಬಂದಿಯೊಂದಿಗೆ ತಡೆದು ನಿಲ್ಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಲಾರಿ ಮಾಲಕ ಸರಿಪಳ್ಳ ಗ್ರಾಮ ಅಳಪೆಯ ರೋಷನ್ ಲೋಬೋ (38) ಮತ್ತು ಚಾಲಕ ಬಜಾಲ್ ಜಲ್ಲಿಗುಡ್ಡೆಯ ಶಾಕೀರ್ (36) ಬಂಧಿತರು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮುಂಜಾನೆ 5.45ಕ್ಕೆ ಬಜಾಲ್ ಕ್ರಾಸ್ ಬಳಿ ಲಾರಿ ನಿಲ್ಲಿಸುವಂತೆ ಸೂಚನೆ ನೀಡಿದ್ದು, ಚಾಲಕ ಸ್ವಲ್ಪ ಮುಂದೆ ಹೋಗಿಸಿ ನಿಲ್ಲಿಸಿ, ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಸುತ್ತುವರಿದು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉಳಾಯಿಬೆಟ್ಟು ಗ್ರಾಮದ ಉದ್ದಬೆಟ್ಟು ಎಂಬಲ್ಲಿ ಫಲ್ಗುಣಿ ನದಿ ತೀರದ ಮರಳು ಧಕ್ಕೆಯಿಂದ ಮರಳನ್ನು ಟಿಪ್ಪರ್‌ನಲ್ಲಿ ತುಂಬಿಸಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದು, 5 ಸಾವಿರ ರೂ. ಮೌಲ್ಯದ ಒಂದೂವರೆ ಯುನಿಟ್ ಮರಳು ಮತ್ತು 4 ಲಕ್ಷ ರೂ. ಮೌಲ್ಯದ ಲಾರಿಯನ್ನು ಜಪ್ತಿ ಮಾಡಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.