ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ. 6 ಮತ್ತು 7 ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಚಿನ್ನ ಸಾಗಾಟದ 3 ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿ ಒಟ್ಟು 63.73 ಲಕ್ಷ ರೂ. ಮೌಲ್ಯದ 1.57 ಕೆ.ಜಿ. ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.
ಈ ಪೈಕಿ ಎರಡು ಪ್ರಕರಣಗಳಲ್ಲಿ 20 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಪತ್ತೆಯಾಗಿದ್ದರಿಂದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪ್ರತ್ಯೇಕ ಟ್ವೀಟ್ ಸಂದೇಶಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ದುಬಾಯಿನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನ ಬಳಿ 24 ಕ್ಯಾರೆಟ್ ಪರಿಶುದ್ಧತೆಯ 13.43 ಲಕ್ಷ ರೂ. ಮೌಲ್ಯದ 336.7 ಗ್ರಾಂ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಪತ್ತೆಯಾಗಿತ್ತು. ಈ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಆತ ಧರಿಸಿದ ಸಾಕ್ಸ್ ಗಳಲ್ಲಿ ಬಚ್ಚಿಟ್ಟಿದ್ದನು.
ಮಂಗಳವಾರ ದುಬಾಯಿನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನೊಬ್ಬ 24 ಕ್ಯಾರೆಟ್ ಪರಿಶುದ್ಧತೆಯ 29.06ಲಕ್ಷ ರೂ. ಮೌಲ್ಯದ 716ಗ್ರಾಂ ಚಿನ್ನವನ್ನು ಪೇಸ್ಟ್ರೂಪದಲ್ಲಿ ತನ್ನ ದೇಹದಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ. ಹಾಗೆಯೇ ಅದೇ ವಿಮಾನದಲ್ಲಿ ಬಂದ ಇನ್ನೋರ್ವ ಪ್ರಯಾಣಿಕನ ಬಳಿ 24 ಕ್ಯಾರೆಟ್ ಪರಿಶುದ್ಧತೆಯ 21.24ಲಕ್ಷ ರೂ. ಮೌಲ್ಯದ 523ಗ್ರಾಂ ಚಿನ್ನ ಪೇಸ್ಟ್ ರೂಪದಲ್ಲಿ ತನ್ನ ದೇಹದಲ್ಲಿ ಬಚ್ಚಿಟ್ಟು ಸಾಗಿಸುತ್ತಿರುವುದು ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಪತ್ತೆಯಾಗಿದೆ.
ತನಿಖೆಯ ಹಿತ ದೃಷ್ಟಿಯಿಂದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಿಲ್ಲ.