ಮಂಗಳೂರು: ಕಳೆದುಹೋದ/ಕಳವಾದ ಮೊಬೈಲ್‌ಗಳನ್ನು ಪತ್ತೆ ಮಾಡಲು ಕೇಂದ್ರ ಸರಕಾರ ಜಾರಿಗೆ ತಂದಿರುವ “ಸಿಇಐಆರ್ ಪೋರ್ಟಲ್’ ನೆರವಿನಿಂದ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಇದುವರೆಗೆ ಪತ್ತೆ ಮಾಡಲಾದ ಒಟ್ಟು 524 ಮೊಬೈಲ್ ಪೋನ್‌ಗಳ ಪೈಕಿ 93 ಮೊಬೈಲ್ ಪೋನ್‌ಗಳನ್ನು ಶನಿವಾರದಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಅವರು ವಾರಸುದಾರರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು, ಸಿಇಐಆರ್ ಪೋರ್ಟಲ್ ವ್ಯವಸ್ಥೆ 2022ರ ಸೆ.5ರಿಂದ ಆರಂಭಗೊಂಡಿದ್ದು ನಗರದಲ್ಲಿ ಇದುವರೆಗೆ 2,133 ಮೊಬೈಲ್‌ಪೋನ್‌ಗಳ ಪತ್ತೆಗೆ ಸಾರ್ವಜನಿಕರಿಂದ ಸಿಇಐಆರ್ ಪೋರ್ಟಲ್ ಮುಖಾಂತರ ಕೋರಿಕೆಗಳು ಬಂದಿವೆ. ಇದರಲ್ಲಿ 2,391 ಐಎಂಇಐಗಳನ್ನು ಬ್ಲಾಕ್ ಮಾಡಲಾಗಿದೆ. 524 ಮೊಬೈಲ್ ಪೋನ್‌ಗಳು ಪತ್ತೆಯಾಗಿವೆ. ಈಗಾಗಲೇ 240 ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ 147 ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇದೀಗ ಮತ್ತೆ 93 ಮೊಬೈಲ್‌ಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದರು.
ಮೊಬೈಲ್ ಕಳೆದು ಹೋದರೆ ಪಕ್ಕದ ಪೊಲೀಸ್ ಠಾಣೆಯಲ್ಲಿ ಅಥವಾ ಕೆಎಸ್‌ಪಿ ಆ್ಯಪ್‌ನಲ್ಲಿ ದೂರು ದಾಖಲಿಸಿ //www.ceir.gov.in ನಲ್ಲಿ ಮೊಬೈಲ್‌ನ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೆ ಐಎಂಇಐ ಬ್ಲಾಕ್‌ಗೆ ಕೋರಿಕೆ ಸಲ್ಲಿಸಬಹುದು ಅಥವಾ ಸ್ಥಳೀಯ ಪೊಲೀಸರು ಕೂಡ ಪೋರ್ಟಲ್ ಮೂಲಕ ವಿವರ ನಮೂದಿಸುತ್ತಾರೆ. ಈ ಪೋರ್ಟಲ್‌ನ ಬಳಕೆ ಸಾರ್ವಜನಿಕರಿಗೆ ಸುಲಭವಾಗಬೇಕೆಂಬ ಉದ್ದೇಶದಿಂದ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ “ಚಾಟ್ ಬಾಟ್’ ವ್ಯವಸ್ಥೆ ಜಾರಿಗೆ ತರಲಾಗಿದೆ. 8277949183 ಸಂಖ್ಯೆಗೆ ಏಜಿ ಮೆಸೇಜ್ ಕಳುಹಿಸಿದರೆ ಪೊಲೀಸರಿಂದ ಒಂದು ಲಿಂಕ್ ಬರುತ್ತದೆ. ಅದರ ಮೂಲಕವೂ ಮಾಹಿತಿಯನ್ನು ದಾಖಲಿಸಬಹುದು. “ಚಾಟ್ ಬಾಟ್’ ಜಾರಿಗೊಂಡ ಅನಂತರ ಸಿಇಐಆರ್ ಪೋರ್ಟಲ್ ಮೂಲಕ ಹೆಚ್ಚಿನ ಕೋರಿಕೆಗಳು ದಾಖಲಾಗುತ್ತಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.