Advertisement

ಮಂಗಳೂರು: ಕಳೆದು ಹೋದ 93 ಮೊಬೈಲ್‌ಗ‌ಳ ಹಸ್ತಾಂತರ

12:42 AM Jun 04, 2023 | Team Udayavani |

ಮಂಗಳೂರು: ಕಳೆದುಹೋದ/ಕಳವಾದ ಮೊಬೈಲ್‌ಗ‌ಳನ್ನು ಪತ್ತೆ ಮಾಡಲು ಕೇಂದ್ರ ಸರಕಾರ ಜಾರಿಗೆ ತಂದಿರುವ “ಸಿಇಐಆರ್‌ ಪೋರ್ಟಲ್‌’ ನೆರವಿನಿಂದ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಇದುವರೆಗೆ ಪತ್ತೆ ಮಾಡಲಾದ ಒಟ್ಟು 524 ಮೊಬೈಲ್‌ ಪೋನ್‌ಗಳ ಪೈಕಿ 93 ಮೊಬೈಲ್‌ ಪೋನ್‌ಗಳನ್ನು ಶನಿವಾರ ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಅವರು ವಾರಸುದಾರರಿಗೆ ಹಸ್ತಾಂತರಿಸಿದರು.

Advertisement

ಈ ಸಂದರ್ಭ ಮಾತನಾಡಿದ ಪೊಲೀಸ್‌ ಆಯುಕ್ತರು, ನಗರದಲ್ಲಿ ಇದುವರೆಗೆ 2,133 ಮೊಬೈಲ್‌ಪೋನ್‌ಗಳ ಪತ್ತೆಗೆ ಸಾರ್ವಜನಿಕರಿಂದ ಸಿಇಐಆರ್‌ ಪೋರ್ಟಲ್‌ ಮುಖಾಂತರ ಕೋರಿಕೆಗಳು ಬಂದಿವೆ. ಇದರಲ್ಲಿ 2,391 ಐಎಂಇಐಗಳನ್ನು ಬ್ಲಾಕ್‌ ಮಾಡಲಾಗಿದೆ. 524 ಮೊಬೈಲ್‌ ಪೋನ್‌ಗಳು ಪತ್ತೆಯಾಗಿವೆ. ಈಗಾಗಲೇ 240 ಮೊಬೈಲ್‌ ಪೋನ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ 147 ಮೊಬೈಲ್‌ಗ‌ಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇದೀಗ ಮತ್ತೆ 93 ಮೊಬೈಲ್‌ಗ‌ಳನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದರು.

ಮೊಬೈಲ್‌ ಕಳೆದು ಹೋದರೆ ಪಕ್ಕದ ಪೊಲೀಸ್‌ ಠಾಣೆಯಲ್ಲಿ ಅಥವಾ ಕೆಎಸ್‌ಪಿ ಆ್ಯಪ್‌ನಲ್ಲಿ ದೂರು ದಾಖಲಿಸಿ //www.ceir.gov.in ನಲ್ಲಿ ಮೊಬೈಲ್‌ನ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೆ ಐಎಂಇಐ ಬ್ಲಾಕ್‌ಗೆ ಕೋರಿಕೆ ಸಲ್ಲಿಸಬಹುದು ಅಥವಾ ಸ್ಥಳೀಯ ಪೊಲೀಸರು ಕೂಡ ಪೋರ್ಟಲ್‌ ಮೂಲಕ ವಿವರ ನಮೂದಿಸುತ್ತಾರೆ. ಈ ಪೋರ್ಟಲ್‌ನ ಬಳಕೆ ಸಾರ್ವಜನಿಕರಿಗೆ ಸುಲಭವಾಗಬೇಕೆಂಬ ಉದ್ದೇಶದಿಂದ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ “ಚಾಟ್‌ ಬಾಟ್‌’ ವ್ಯವಸ್ಥೆ ಜಾರಿಗೆ ತರಲಾಗಿದೆ. 8277949183 ಸಂಖ್ಯೆಗೆ ಏಜಿ ಮೆಸೇಜ್‌ ಕಳುಹಿಸಿದರೆ ಪೊಲೀಸರಿಂದ ಒಂದು ಲಿಂಕ್‌ ಬರುತ್ತದೆ. ಅದರ ಮೂಲಕವೂ ಮಾಹಿತಿಯನ್ನು ದಾಖಲಿಸಬಹುದು.

ಸೈಬರ್‌ ವಂಚನೆ ಬಳಕೆಗೆ ತಡೆ
ಸೈಬರ್‌ ವಂಚಕರು ಬಳಸುವ ಮೊಬೈಲ್‌ ಪೋನ್‌ಗಳ ಐಎಂಇಐನ್ನು ಕೂಡ ಸಿಇಐಆರ್‌ ಮೂಲಕ ಬ್ಲಾಕ್‌ ಮಾಡಲಾಗುತ್ತಿದೆ. ಇದರಿಂದಾಗಿ ಸೈಬರ್‌ ವಂಚಕರು ಅದೇ ಸಂಖ್ಯೆಯನ್ನು ಮತ್ತೆ ಬಳಕೆ ಮಾಡುವುದನ್ನು ತಡೆಯಬಹುದಾಗಿದೆ.

ಮೊಬೈಲ್‌ ಮರಳಿ ಪಡೆದವರ ಸಂಭ್ರಮ
“ನಾನು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಮೊಬೈಲ್‌ ಕಳವಾಗಿತ್ತು. ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು ಅನಂತರ ಸಿಇಐಆರ್‌ನಲ್ಲಿ ಮೂಲಕ ಮಾಹಿತಿ
ನಮೂದಿಸಲಾಗಿತ್ತು. 14,000 ರೂ. ಮೌಲ್ಯದ ಮೊಬೈಲ್‌ ವಾಪಸ್‌ ಸಿಕ್ಕಿದೆ’ ಎಂದು ಜೆಪ್ಪುವಿನ ಬಿಂದು ಅವರು ಸಂತೋಷ ಹಂಚಿಕೊಂಡರು. “ನಾನು ಮಣ್ಣಗುಡ್ಡೆಯಲ್ಲಿ ರೇಷನ್‌ ನಡೆಸಿಕೊಂಡಿದ್ದು ಮೊಬೈಲ್‌ ಕಳವಾಗಿದ್ದರಿಂದ ತುಂಬಾ ತೊಂದರೆಯಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಕಳವಾಗಿದ್ದ ಮೊಬೈಲ್‌ ಈಗ ಸಿಕ್ಕಿದೆ’ ಎಂದು ಸುಕುಮಾರ ಶೆಟ್ಟಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next