ಮಂಗಳೂರು: ಕೇರಳದಿಂದ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚೆಂಬುಗುಡ್ಡೆಯ ನಿವಾಸಿ ಹುಸೇನ್, ಕೋಡಿ ಉಳ್ಳಾಲ ನಿವಾಸಿಗಳಾದ ಮೊಹಮ್ಮದ್ ಅಮೀನ್, ಸುಹೈಬ್ ಅಖ್ತರ್ ಮತ್ತು ಮುಹಮ್ಮದ್ ಮುಜಾಂಬಿಲ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕಾಸರಗೋಡಿನಿಂದ ಉಳ್ಳಾಲಕ್ಕೆ ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದರು.
ಬಂದ್ಯೋಡು ಎಂಬಲ್ಲಿ ಮಹಮ್ಮದ್ ಎಂಬುವರಿಂದ ಹಸುಗಳನ್ನು ಖರೀದಿಸಿ ಅವರ ಮನೆಯಲ್ಲಿಯೇ ಪ್ರಾಣಿಗಳನ್ನು ಕೊಂದು ಮಾಂಸವನ್ನು ಉಳ್ಳಾಲದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಆರೋಪಿಯಿಂದ ಸುಮಾರು 3,10,000 ರೂಪಾಯಿ ಮೌಲ್ಯದ ಕಾರು, 160 ಕೆಜಿ ಗೋಮಾಂಸ, 3 ಹಸುವಿನ ತಲೆ ಮತ್ತು ಪ್ರಾಣಿಗಳ ಚರ್ಮವನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ ಪಿ ರವರ ಮಾರ್ಗದರ್ಶನದಲ್ಲಿ ನಗರ ಅಪರಾಧ ಪತ್ತೆ ವಿಭಾಗದ ಪೋಲಿಸ್ ನಿರೀಕ್ಷಕ ಮಹೇಶ್ ಪ್ರಸಾದ್ , ಪಿ ಎಸ್ ಐ ರಾಜೇಂದ್ರ, ಎ ಎಸ್ ಐ ಮೋಹನ್, ಸಿಬ್ಬಂದಿ ಗಳಾದ ಸುಬ್ರಹ್ಮಣ್ಯ ಕೆ. ಎನ್, ಮಣಿ ಎಂ. ಎನ್, ಅಬ್ದುಲ್ ಜಬ್ಬಾರ್, ಸುನಿಲ್ ಕುಮಾರ್ ಹಾಗೂ ಎ ಆರ್ ಎಸ್ ಐ ತೇಜ ಕುಮಾರ್ ಭಾಗವಸಿದ್ದರು.