Advertisement

ಇಂದಿನಿಂದ ಕಡಲ ಮೀನುಗಾರಿಕೆ: ವ್ಯಾಪಾರ ವಹಿವಾಟು ವೃದ್ಧಿ

01:44 AM Aug 01, 2022 | Team Udayavani |

ಮಂಗಳೂರು/ಮಲ್ಪೆ: ಮೀನುಗಾರಿಕೆಗೆ ಸರಕಾರ ವಿಧಿಸಿದ್ದ 61 ದಿನಗಳ ನಿಷೇಧ ಜು. 31ಕ್ಕೆ ಮುಕ್ತಾಯಗೊಂಡಿದ್ದು, ಆ. 1ರಿಂದ ದೋಣಿಗಳು ಸಮುದ್ರಕ್ಕಿಳಿಯಲಿವೆ. ಈ ನಿಟ್ಟಿನಲ್ಲಿ ಮೀನುಗಾರಿಕೆಗೆ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

Advertisement

ಮೀನುಗಾರಿಕೆಗೆ ಬೋಟು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಬಲೆಗಳನ್ನು ಸಿದ್ಧಗೊಳಿಸಲಾಗಿದೆ. ಐಸ್‌ಪ್ಲಾಂಟ್‌ಗಳು ರವಿವಾರವೇ ಕಾರ್ಯಾರಂಭಿಸಿದ್ದು, ಕಡಲಿಗಿಳಿಯುವ ಬೋಟುಗಳಿಗೆ ಮಂಜುಗಡ್ಡೆ ತುಂಬಿಸಲಾಗುತ್ತಿದೆ. ಸರಕಾರದ ತೆರಿಗೆ ರಹಿತ ಡೀಸೆಲ್‌ ನೀಡುವ ಕಾರ್ಯ ಸೋಮವಾರದಿಂದ ಪ್ರಾರಂಭವಾಗಲಿದೆ.

ಆಳಸಮುದ್ರಕ್ಕೆ ತೆರಳುವ ಬೋಟುಗಳಲ್ಲಿ 15 ದಿನಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತದೆ. ದೋಣಿಗಳ ಕಾರ್ಮಿಕರಲ್ಲಿ ಹೆಚ್ಚಿನವರು ಹೊರ ರಾಜ್ಯಗಳಿಗೆ ಸೇರಿದ್ದು ಊರಿನಿಂದ ಮರಳಿದ್ದಾರೆ.

ಆಳಸಮುದ್ರಕ್ಕೆ ತೆರಳುವ ಟ್ರಾಲ್‌ ಬೋಟುಗಳು ಸೋಮವಾರದಿಂದ ಮೀನುಗಾರಿಕೆಗೆ ತೆರಳಲು ನಿರ್ಧರಿಸಿವೆಯಾದರೂ ಆ. 3ರ ವರೆಗೆ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅಂದಿನ ಹವಾಮಾನ ನೋಡಿಕೊಂಡು ಕಡಲಿಗಿಳಿಯುವ ಸಾಧ್ಯತೆಗಳಿವೆ. ಆ. 12ರಂದು ಸಮುದ್ರ ಪೂಜೆ ಮಾಡಿ ಆ. 13ರಿಂದ ಮೀನುಗಾರಿಕೆಗೆ ನಡೆಸಲು ಪರ್ಸಿನ್‌ ಬೋಟುಗಳ ಮಾಲಕರು ತೀರ್ಮಾನಿಸಿದ್ದಾರೆ.

ಮಂಗಳೂರು ಮೀನುಗಾರಿಕೆ ದಕ್ಕೆಯಲ್ಲಿ ಪರ್ಸಿನ್‌ ಹಾಗೂ ಟ್ರಾಲ್‌ ಸೇರಿ ಒಟ್ಟು 1,400 ಬೋಟುಗಳು ಹಾಗೂ ಮಲ್ಪೆ ಮತ್ತು ಗಂಗೊಳ್ಳಿ ಸೇರಿ ಟ್ರಾಲ್‌, ಪರ್ಸಿನ್‌ ಒಳಗೊಂಡು ಸುಮಾರು 2,166 ಬೋಟುಗಳು ಸಮುದ್ರ ಮೀನುಗಾರಿಕೆಯಲ್ಲಿ ನಿರತವಾಗಿವೆ.

Advertisement

ವ್ಯಾಪಾರ ವಹಿವಾಟು ವೃದ್ಧಿ
ಮಲ್ಪೆ: ಯಾಂತ್ರಿಕ ಮೀನುಗಾರಿಕೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿರುವ ಹೊಟೇಲು, ಅಂಗಡಿ ಮುಂಗಟ್ಟುಗಳು ಮತ್ತೆ ಸದ್ದು ಮಾಡಲಿವೆ. ನಗರದ ಪೇಟೆಯಲ್ಲಿ ವ್ಯಾಪಾರ ವಹಿವಾಟುಗಳು ವೃದ್ಧಿಸಲಿದೆ. ಯಾಂತ್ರಿಕ ದೋಣಿಗಳಲ್ಲಿ ದುಡಿಯುವ ಬಹುಪಾಲು ಮಂದಿ ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಝಾರ್ಖಂಡ್‌ ಇತ್ಯಾದಿ ರಾಜ್ಯಗಳಿಗೆ ಸೇರಿದವರಾಗಿದ್ದು, ಮತ್ತೆ ಬಂದರಿನತ್ತ ಮುಖ ಮಾಡುತ್ತಿದ್ದಾರೆ.

ಪರಿಹಾರವಾಗಬೇಕಾದ ಸಮಸ್ಯೆಗಳು
ಪ್ರಸ್ತುತ ಬಂದರಿನಲ್ಲಿ ಹಲವಾರು ಸಮಸ್ಯೆಗಳಿವೆ. ಮುಖ್ಯವಾಗಿ ಸಮರ್ಪಕವಾದ ಲ್ಯಾಂಡಿಂಗ್‌ ಸೆಂಟರ್‌ ಇಲ್ಲದೆ ತಂದ ಮೀನನ್ನು ಒತ್ತಡದಲ್ಲಿ ಖಾಲಿ ಮಾಡುವ ಪರಿಸ್ಥಿತಿ ಇದೆ. 2,500 ಸಾವಿರಕ್ಕೂ ಅಧಿಕ ಯಾಂತ್ರಿಕ ಬೋಟುಗಳು ಇಲ್ಲಿವೆ. ಆದರೆ ಅವಕಾಶ ಇರುವುದು 1,000 ಬೋಟುಗಳಿಗೆ ಮಾತ್ರ. 8 ವರ್ಷಗಳಿಂದ ಬಂದರಿನಲ್ಲಿ ಡ್ರೆಜ್ಜಿಂಗ್‌ ಮಾಡದಿರುವುದರಿಂದ ಬೋಟುಗಳ ತಳ ತಾಗಿ ಹಾನಿಗೀಡಾಗುತ್ತವೆ. ಮೀನುಗಾರ ಸಂಘಟನೆಗಳು ಮಂಡಿಸಿದ ಬೇಡಿಕೆಗೆ ಮನ್ನಣೆಯೇ ಇಲ್ಲ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next