ಮಂಗಳೂರು: ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಮಾದಕ ದ್ರವ್ಯ ಪ್ರಕರಣದಲ್ಲಿ ಪೊಲೀಸರು ಬೇಟೆ ಮುಂದುವರಿಸಿದ್ದು, ಮತ್ತೆ ಏಳು ವಿದ್ಯಾರ್ಥಿಗಳು ಹಾಗೂ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಡ್ರಗ್ಸ್ ದಂಧೆಯನ್ನು ಪೊಲೀಸರು ಬೇಧಿಸಿದ್ದಾರೆ.
ಬಂಧಿತರನ್ನು ವಿದುಶ್ ಕುಮಾರ್, ಶರಣ್ಯಾ, ಸಿದ್ದಾರ್ಥ ಪವಾಸ್ಕರ್, ಸೂರ್ಯಜಿತ ದೇವ್, ಆಯುಷಾ ಮೊಹಮ್ಮದ್, ಪ್ರಣಯ್ ನಟರಾಜ್, ಚೈತನ್ಯ ಆರ್ ತುಮುಲುರಿ, ಸುಧೀಂದ್ರ ಮತ್ತು ಇಶಾ ಮಿಡ್ಡಾ ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಆರೋಪಿಗಳಾಗಿರುವ ನಗರದ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 7 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಇಬ್ಬರು ವೈದ್ಯರನ್ನು ಸೇವೆಯಿಂದ ಗುರುವಾರ ವಜಾಗೊಳಿಸಲಾಗಿದೆ.
3 ಪಟ್ಟು ಹೆಚ್ಚು ಬೆಲೆಗೆ ಮಾರಾಟ: ಆರೋಪಿಗಳ ಪೈಕಿ ಕೆಲವರು ಪೆಡ್ಲರ್ ಗಳು. ಇವರು ಮಾದಕ ದ್ರವ್ಯವನ್ನು ಹೊರಗಡೆಯಿಂದ ಕಡಿಮೆ ಬೆಲೆಗೆ ಖರೀದಿಸಿ ಮಂಗಳೂರಿನಲ್ಲಿ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ. ಆರೋಪಿಗಳನ್ನು ವಿಚಾರಿಸಿದಾಗ ಅವರು ಕಾಲೇಜು ಆವರಣದಿಂದ ಹೊರಗೆ ಪಿಜಿ, ಅಪಾರ್ಟ್‌ಮೆಂಟ್, ಬಾಡಿಗೆ ಮನೆಯಲ್ಲಿ ಮಾದಕ ದ್ರವ್ಯ ಸೇವನೆ, ಮಾರಾಟ ಮಾಡಿರುವುದು ತಿಳಿದುಬಂದಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಆಯುಕ್ತರು ಗುರುವಾರ ತಿಳಿಸಿದ್ದರು.
ನಿಗಾ ಇಡಲು ಸೂಚನೆ: ನಗರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಪಿಜಿ, ಅಪಾರ್ಟ್‌ಮೆಂಟ್, ಬಾಡಿಗೆ ಮನೆಗಳಲ್ಲಿಯೂ ಉಳಿದುಕೊಂಡಿದ್ದಾರೆ. ಆದರೆ ಕೆಲವೆಡೆ ಅಕ್ರಮ ಚಟುವಟಿಕೆ ನಡೆಯುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಹೆಚ್ಚಿನ ನಿಗಾ ಇಡುವಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಿಜಿ, ಬಾಡಿಗೆ ಮನೆ ಮಾಲಕರಿಗೂ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಕೂಡ ತಮ್ಮ ಸುತ್ತಮುತ್ತ ನಡೆಯುವ ಚಟುವಟಿಕೆ ಗಮನಿಸಿ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು ಎಂದು ಆಯುಕ್ತರು ಹೇಳಿದ್ದರು.