Advertisement

Mangalore: ನೀರಿನ ಅಭಾವವಿದ್ದರೂ ಅಗ್ನಿಶಾಮಕ ದಳ ಸನ್ನದ್ಧ

02:58 PM Apr 26, 2023 | Team Udayavani |

ಮಹಾನಗರ: ಈ ಬಾರಿ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ಜನರು ಮಳೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದರ ಬಿಸಿ ಅಗ್ನಿ ಶಾಮಕ ದಳಕ್ಕೆ ಮಾತ್ರ ಸದ್ಯ ತಟ್ಟಿಲ್ಲ. ನೀರಿನ ಸಮಸ್ಯೆಯಿಲ್ಲದೆ, ಎಲ್ಲ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ.

Advertisement

ಜಿಲ್ಲೆಯಲ್ಲಿ ಬಿಸಿಲಿನ ಧಗೆಯೂ ಹೆಚ್ಚಾಗಿರುವುದರಿಂದ ಅಲ್ಲಲ್ಲಿ ಅಗ್ನಿ ಅವಘಡಗಳೂ ಸಂಭವಿಸುತ್ತಿದೆ. ಇದೇ ವೇಳೆ ನೀರಿನ ಅಭಾವವೂ ಎಲ್ಲೆಡೆ ಕಾಡುತ್ತಿದೆ. ಆದರೆ ಅಗ್ನಿ ಶಾಮಕ ದಳಕ್ಕೆ ಇಲ್ಲಿನ ವರೆಗೆ ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ. ಠಾಣೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿರುವ ಅಗ್ನಿ ಶಾಮಕ ವಾಹನಗಳ ಟ್ಯಾಂಕ್‌ಗಳಲ್ಲಿ ನೀರು ಭರ್ತಿಯಾಗಿಯೇ ಇರುತ್ತದೆ. ಇದರಿಂದ ಕರೆಗಳು ಬಂದ ತತ್‌ಕ್ಷಣ ತಡ ಮಾಡದೆ ಕಾರ್ಯಾಚರಣೆ ನಡೆಸಬಹುದಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ನೀರು ಸಿಕ್ಕಲ್ಲಿ ಭರ್ತಿ
ಬೆಂಕಿ ನಂದಿಸುವ ಕಾರ್ಯಾಚರಣೆಗೆ ಹೋದ ಸಂದರ್ಭದಲ್ಲಿ ಕಾರ್ಯಾಚರಣೆ ಮುಗಿದ ಬಳಿಕ ವಾಪಸಾಗುವ ವೇಳೆ ನೀರು ಭರ್ತಿ ಮಾಡಿಯೇ ವಾಹನಗಳು ಠಾಣೆಗೆ ಹಿಂದಿರುಗುತ್ತವೆ. ಇದಕ್ಕಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ನೀರಿನ ಪಂಪಿಂಗ್‌ ಪಾಯಿಂಟ್‌ಗಳಿವೆ.

ಮಾತ್ರವಲ್ಲದೆ ಠಾಣೆಯಲ್ಲೂ ತುರ್ತು ಉಪಯೋಗಕ್ಕಾಗಿ 1 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ ಇದೆ. ಹಾಗಾಗಿ ಯಾವುದೆ ಸಮಸ್ಯೆ ಇಲ್ಲ. ಎಲ್ಲ ಠಾಣೆಗಳಲ್ಲೂ ಈ ರೀತಿ ಟ್ಯಾಂಕ್‌ ಗಳಲ್ಲಿ ನೀರು ಶೇಖರಿಸಿ ಇರಿಸಲಾಗುತ್ತದೆ ಎನ್ನುತ್ತಾರೆ ಕದ್ರಿ ಅಗ್ನಿ ಶಾಮಕ ಠಾಣೆಯ ಠಾಣಾಧಿಕಾರಿ ಸುನೀಲ್‌ ಕುಮಾರ್‌.

ಈ ಬಾರಿ ನೀರಿನ ಹೆಚ್ಚು ಬಳಕೆ
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಗ್ನಿ ಶಾಮಕ ಠಾಣೆಗಳಿಗೆ ಅಗ್ನಿ ಅವಘಡಗಳಿಗೆ ಸಂಬಂಧಿಸಿದಂತೆ ಅತೀ ಹೆಚ್ಚು ಕರೆಗಳು ಬಂದಿವೆ. ಇದರಿಂದಾಗಿ ಬೆಂಕಿ ನಂದಿಸಲು ಬಳಸಿದ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಪಚ್ಚನಾಡಿಯಲ್ಲಿ ತ್ಯಾಜ್ಯಕ್ಕೆ ಬಿದ್ದ ಬೆಂಕಿ ನಂದಿಸಲು ಲಕ್ಷಾಂತರ ಲೀ. ನೀರು ಬಳಕೆಯಾಗಿದೆ. ಕೆಲವು ಸ್ಥಳಗಳಿಗೆ ಬೆಂಕಿ ನಂದಿಸಲು ಹೋದಾಗ ವಾಹನದಲ್ಲಿ ಇದ್ದ ನೀರು ಸಾಕಾಗದೆ ಸ್ಥಳೀಯ ಮೂಲಗಳಿಂದ ನೀರು ಪಡೆದು ಬೆಂಕಿ ನಂದಿಸಿದ ಉದಾಹರಣೆಗಳೂ ಇವೆ. ಶೀಘ್ರ ಮಳೆಯಾದಲ್ಲಿ ಯಾವುದೇ ಸಮಸ್ಯೆಯಾಗದು. ಇಲ್ಲದವಾದಲ್ಲಿ ಅಗ್ನಿ ಶಾಮಕ ಇಲಾಖೆಗೂ ಬಿಸಿತಟ್ಟುವ ಸಾಧ್ಯತೆಯಿದೆ.

Advertisement

ನೀರಿಗೆ ಸಮಸ್ಯೆಯಾಗಿಲ್ಲ
ಅಗ್ನಿಶಾಮಕ ವಾಹನಗಳಿಗೆ ಈ ಬಾರಿ ಇಲ್ಲಿಯವರೆಗೆ ನೀರಿಗೆ ಸಮಸ್ಯೆಯಾಗಿಲ್ಲ, ಮುಂದಿನ ದಿನಗಳಲ್ಲೂ ಆಗುವ ಸಾಧ್ಯತೆ ಕಡಿಮೆ. ಠಾಣೆಯಲ್ಲಿ ಎಲ್ಲ ವಾಹನಗಳಲ್ಲೂ ನೀರು ತುಂಬಿಸಿ ಸನ್ನದ್ಧ ಸ್ಥಿತಿಯಲ್ಲಿ ಇರುತ್ತವೆ. ಠಾಣಾ ಮಟ್ಟದಲ್ಲಿ ನೀರಿನ ಟ್ಯಾಂಕ್‌ ಗಳಿದ್ದು, ತುರ್ತು ಸಂದರ್ಭಗಳಿಗಾಗಿ ಅವುಗಳನ್ನು ಭರ್ತಿ ಮಾಡಿ ಇರಿಸಲಾಗುತ್ತದೆ.
ಭರತ್‌ ಕುಮಾರ್‌, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ, ಪಾಂಡೇಶ್ವರ ಠಾಣೆ

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next