Advertisement

ಸ್ಕೌಟ್ಸ್‌-ಗೈಡ್ಸ್‌ ಅಂ.ರಾ. ಸಾಂಸ್ಕೃತಿಕ ಜಾಂಬೂರಿ: ಇಲಾಖೆಗಳ ಸಮನ್ವಯಕ್ಕೆ ಡಿಸಿ ಸೂಚನೆ 

12:36 AM Nov 04, 2022 | Team Udayavani |

ಮಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಸ್ಕೌಟ್ಸ್‌-ಗೈಡ್ಸ್‌ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯು ಮೂಡುಬಿದರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ಡಿ. 21ರಿಂದ 27ರ ವರೆಗೆ ನಡೆಯಲಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳ ತಂಡ ಸಮನ್ವಯದಿಂದ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಬೇಕು ಎಂದು ದ.ಕ. ನೂತನ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಸೂಚನೆ ನೀಡಿದ್ದಾರೆ.

Advertisement

ಜಾಂಬೂರಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸರ್ವರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದ.ಕ. ಜಿಲ್ಲೆಯ ಹೆಸರು ಪ್ರಜ್ವಲಿಸಲಿದೆ. ಹೀಗಾಗಿ ಜಿಲ್ಲೆಯ ಜನರಿಗೆ ಇದೊಂದು ಸುವರ್ಣಾವಕಾಶ. ದೇಶ-ವಿದೇಶದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಲಕ್ಷಾಂತರ ಮಂದಿ ಆಗಮಿಸುವ ಕಾರಣದಿಂದ ಕರಾವಳಿ ಪ್ರವಾಸೋದ್ಯಮ ಉತ್ತೇಜಕ್ಕೆ ಅನುಕೂಲಕರವಾಗಲಿದೆ ಎಂದರು.

ಮೇಯರ್‌ ಜಯಾನಂದ ಅಂಚನ್‌, ಜಿ.ಪಂ. ಸಿಇಒ ಡಾ| ಕುಮಾರ್‌, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅನ್ಬು ಕುಮಾರ್‌, ಎಡಿಸಿ ಕೃಷ್ಣಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್‌ ಉಪಸ್ಥಿತರಿದ್ದರು.

ಮಾಜಿ ಸಚಿವ ಬಿ. ನಾಗರಾಜ್‌ ಶೆಟ್ಟಿ ಸಹಿತ ಹಲವು ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

1 ಲಕ್ಷ ಮಂದಿ  ಆಗಮನ ನಿರೀಕ್ಷೆ:

ಭಾರತ್‌ ಸ್ಕೌಟ್ಸ್‌-ಗೈಡ್ಸ್‌ನ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಆಯುಕ್ತ ಹಾಗೂ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಈ ಸಂದರ್ಭ ಕೃಷಿ ಮೇಳ, ಫಲಪುಷ್ಪ ಪ್ರದರ್ಶನ, ವಿಜ್ಞಾನ ಮೇಳ, ಪುಸ್ತಕ ಮೇಳ, ಕಲಾಮೇಳ, ಆಹಾರ ಮೇಳ ಆಯೋಜಿಸಲಾಗುವುದು. ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗ, ಪಥ ಸಂಚಲನ ನಡೆಯಲಿದೆ ಎಂದರು. ಈ ಹಿಂದೆ ಮೈಸೂರಿನಲ್ಲಿ 2 ಹಾಗೂ ಬೆಂಗಳೂರಿನಲ್ಲಿ 1 ರಾಜ್ಯ ಮಟ್ಟದ ಸಾಂಸ್ಕೃತಿಕ ಜಾಂಬೂರಿಯನ್ನು ಆಯೋಜಿಸಲಾಗಿತ್ತು. ದೇಶದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. 35,000 ಶಿಬಿರಾರ್ಥಿಗಳು, 10,000 ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕನಿಷ್ಠ 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು.

ಪ್ರಧಾನಿಗೆ ಆಹ್ವಾನ :

ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ಜಾಂಬೂರಿಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರದ ಸಚಿವರು ಸಹಿತ ಹಲವು ಮಂದಿ ಗಣ್ಯರನ್ನು ಆಮಂತ್ರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next