Advertisement
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಲ್ಲಿ ಸೆಪ್ಟಂಬರ್ 29ರಿಂದ ನವರಾತ್ರಿ ಸಂಭ್ರಮ ಆರಂಭವಾಗಲಿದ್ದು, 10 ದಿನಗಳ ಕಾಲ ವಿಶೇಷ ಹಾಗೂ ವಿಭಿನ್ನ ಕಾರ್ಯ ಕಲಾಪಗಳ ಮೂಲಕವಾಗಿ ಕ್ಷೇತ್ರವು ಎಲ್ಲರ ಗಮನಸೆಳೆಯಲಿದೆ. ಆಕರ್ಷಕ ವಿದ್ಯುದೀಪಗಳ ಬೆಳಕಿನಲ್ಲಿ ಕುದ್ರೋಳಿ ಹಾಗೂ ಮಂಗಳೂರು ಜಗಮಗಿಸಲಿದೆ. ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಮಂಗಳೂರು ದಸರಾ ನಡೆಯುತ್ತಿದೆ.
ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳ ರಚನೆ ಕೆಲಸಗಳು ಈಗಾಗಲೇ ಕ್ಷೇತ್ರದಲ್ಲಿ ನಡೆಯುತ್ತಿದೆ. ಶ್ರೀ ಶಾರದಾ ಮಾತೆ ಯೊಂದಿಗೆ ನವದುರ್ಗೆಯರ ಆರಾಧನೆ ಇಲ್ಲಿನ ವೈಶಿಷ್ಟ . ಶ್ರೀ ಶಾರದಾ ಮಾತೆ, ಆದಿ ಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿಯರನ್ನು ವಿಗ್ರಹ ರೂಪದಲ್ಲಿ ಆರಾಧಿಸಲಾಗುತ್ತದೆ. ಜತೆಗೆ ಮಹಾಗಣಪತಿಯನ್ನು ಪ್ರತಿಷ್ಠಾಪಿ ಸಲಾಗುತ್ತದೆ. ಮೂರ್ತಿ ರಚನೆ ಕಾರ್ಯ ಶಿವಮೊಗ್ಗ ಕಲಾವಿದ ಕುಬೇರ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಪಶ್ಚಿಮ ಬಂಗಾಲ ಸಹಿತ ನಾನಾ ರಾಜ್ಯಗಳ 20ಕ್ಕೂ ಅಧಿಕ ಕಲಾವಿದರು ಮೂರ್ತಿ ರಚನೆಯಲ್ಲಿ ತೊಡಗಿದ್ದಾರೆ. ಮಂಗಳೂರಿನ ದಸರಾದಲ್ಲಿ ಶಾರದಾಂಬೆಯ ಉತ್ಸವ ಮೂರ್ತಿಯೊಂದಿಗೆ ನವ ದುರ್ಗೆಯರು, ಗಣಪತಿ ವಿಗ್ರಹವನ್ನು ವಾಹನದ ಮೂಲಕ ಶೋಭಾಯಾತ್ರೆ ನಡೆಸಲಾಗುತ್ತದೆ. ಈ ಬಾರಿಯ ವರ್ಣಮಯ ದಸರಾ ಮೆರವಣಿಗೆ ಲಕ್ಷಾಂತರ ಜನಸಾಗರದ ಮಧ್ಯೆ ಅಕ್ಟೋಬರ್ 8ರಂದು ಸಂಜೆ ಕುದ್ರೋಳಿ ಕ್ಷೇತ್ರದಿಂದ ಹೊರಟು ನಗರದ ವಿವಿಧ ಭಾಗಗಳಲ್ಲಿ ಸಾಗಿ ಬೆಳಗ್ಗಿನ ಹೊತ್ತಿಗೆ ಶ್ರೀಕ್ಷೇತ್ರಕ್ಕೆ ತಲುಪಿ ಶಾರದಾ ವಿಸರ್ಜನೆ ಮಾಡಲಾಗುತ್ತದೆ.
Related Articles
Advertisement
ನಗರವಿಡೀ ವಿದ್ಯುದ್ದೀಪಾಲಂಕಾರಹತ್ತು ದಿನಗಳ ಕಾಲ ಶ್ರೀ ಕ್ಷೇತ್ರ ಸಹಿತ ನಗರ ವಿದ್ಯುದ್ದೀಪಾಲಂಕೃತವಾಗಿ ಕಂಗೊಳಿಸಲಿದೆ. ವಿವಿಧ ಮಾದರಿಯ ವಿನ್ಯಾಸದ ಮಿನಿಯೇಚರ್‌ಗಳಿಂದ ಅಲಂಕೃತಗೊಂಡ ದೇಗುಲದ ಗೋಪುರ, ಪೌಳಿಗಳನ್ನು ರಾತ್ರಿ ವೇಳೆ ವೀಕ್ಷಿಸುವುದು ಆನಂದಮಯ. ಮೆರವಣಿಗೆ ಸಾಗಿ ಬರುವ ರಸ್ತೆಯ ಇಕ್ಕೆಲಗಳಲ್ಲಿರುವ ಕಟ್ಟಡದವರು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುತ್ತದೆ. ಶೋಭಾಯಾತ್ರೆ ಅವಧಿ ಕಡಿತ
ಅಕ್ಟೋಬರ್ 8ರಂದು ನಡೆಯುವ ಮಂಗಳೂರು ದಸರಾ ಮೆರವಣಿಗೆ ಸಾಗುವ ಸ್ವರೂಪದಲ್ಲಿ ಕೆಲವೊಂದು ಬದಲಾವಣೆಗೆ ಉದ್ದೇಶಿಸಲಾಗಿದೆ. ಇಲ್ಲಿಯವರೆಗೆ ದಸರಾ ಮೆರವಣಿಗೆ ಸಾಗುವಾಗ ಸ್ತಬ್ಧಚಿತ್ರಗಳು ಮೆರವಣಿಗೆ ಮುಂಭಾಗದಲ್ಲಿ ಸಾಗಿ, ಕೊನೆಯಲ್ಲಿ ನವದುರ್ಗೆಯರ ಸಹಿತ ಶ್ರೀ ಶಾರದೆ ದೇವರ ಮೂರ್ತಿ ಸಾಗುತ್ತಿತ್ತು. ಈ ಬಾರಿ ದೇವರ ಮೂರ್ತಿ ಮೊದಲಿಗೆ ಸಾಗಲಿದ್ದು, ಆ ಬಳಿಕ ಹಿಂಭಾಗದಲ್ಲಿ ಟ್ಯಾಬ್ಲೋಗಳಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಹೀಗಾಗಿ ಮೆರವಣಿಗೆ ಸಾಗುವ ಒಟ್ಟು ಅವಧಿಯನ್ನು ಸುಮಾರು 4 ತಾಸು ಕಡಿತಗೊಳಿಸಲು ಯೋಚಿಸಲಾಗಿದೆ. ಸೆ. 20ರಂದು ದೇವಸ್ಥಾನದಲ್ಲಿ ಮೆರವಣಿಗೆ ಸಹಿತ ದಸರಾ ಸಂಭ್ರಮದ ಪೂರ್ವಭಾವಿ ಸಭೆ ನಡೆಯಲಿದೆ. ಸಿದ್ಧತೆ ನಡೆಯುತ್ತಿದೆ
ಸೆ. 29ರಿಂದ ನವರಾತ್ರಿ ಸಡಗರ ಆರಂಭಗೊಂಡು ಸೆ. 8ರಂದು ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ. ಇದಕ್ಕಾಗಿ ಶ್ರೀ ಕ್ಷೇತ್ರದಲ್ಲಿ ಹಾಗೂ ದಸರಾ ಮೆರವಣಿಗೆ ಸಾಗುವ ಹಾದಿಗಳಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಜತೆಗೆ ಈ ಬಾರಿಯ ಮೆರವಣಿಗೆ ಸ್ವರೂಪದಲ್ಲೂ ಬದಲಾವಣೆಗೆ ಉದ್ದೇಶಿಸಲಾಗಿದೆ.
- ಪದ್ಮರಾಜ್ ಆರ್.,
ಕೋಶಾಧಿಕಾರಿ ಕುದ್ರೋಳಿ
ಶ್ರೀ ಗೋಕರ್ಣನಾಥ ದೇವಸ್ಥಾನ