ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಪಾಲಿಕೆ ಚುನಾವಣೆಯ ಸದಾಚಾರ ಸಂಹಿತೆಯ ಮೇಲ್ವಿಚಾರಣೆಯ ನೋಡಲ್ ಅಧಿಕಾರಿಯಾಗಿ ದಕ್ಷಿಣಕನ್ನಡ ಜಿಲ್ಲೆಯ ಪರೀಕ್ಷಾರ್ಥ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ಅವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಅವಧಿ ಮುಗಿದಿರುವ ಮಂಗಳೂರು ಮಹಾನಗರ ಪಾಲಿಕೆ ಪರಿಷತ್‌ಗೆ ಚುನಾವಣೆ ನಡೆಸುವ ಬಗ್ಗೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುವಂತೆ ಚುನಾವಣೆ ಆಯೋಗ ನೀಡಿರುವ ನಿರ್ದೇಶನದಂತೆ ಚುನಾವಣೆಗೆ ಪೂರ್ವಭಾವಿ ಸಿದ್ಧತೆಗಳು ಆರಂಭಗೊಂಡಿವೆ.
Advertisement
ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಿರುವ ಹಾಗೂ 2019ರ ಡಿಸೆಂಬರ್‌ನಲ್ಲಿ ಅಧಿಕಾರ ಅವಧಿ ಮುಕ್ತಾಯವಾಗುತ್ತಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಿದೆ. ಮತದಾರರ ಪಟ್ಟಿ, ಮತದಾನ ಕೇಂದ್ರಗಳ ಪಟ್ಟಿ ಸಿದ್ಧಪಡಿಸುವುದು. ಮತದಾನ ಸಿಬಂದಿ ನೇಮಕ,ಇವಿಎಂಗಳ ಸಂಗ್ರಹ ಮಾಡಿ ಸಿದ್ಧಪಡಿಸಿಕೊಳ್ಳುವುದು ಚುನಾವಣಾಧಿಕಾರಿಗಳ ನೇಮಕ ಮಾಡಲು ಪಟ್ಟಿ ತಯಾರಿಸಿ ಸಲ್ಲಿಸುವಂತೆ ನಿರ್ದೇಶಿಸಿರುವ ರಾಜ್ಯ ಚುನಾವಣೆ ಆಯೋಗ ಮಹಾನಗರ ಪಾಲಿಕೆಯ ಪ್ರತಿ 5 ವಾರ್ಡ್‌ಗೆ ಉಪವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಓರ್ವ ಅಧಿಕಾರಿಯನ್ನು ನೇಮಕ ಮಾಡಲು ಪಟ್ಟಿ ತಯಾರಿಸಿ ಸಲ್ಲಿಸುವಂತೆ ಸೂಚಿಸಿತ್ತು.
ಮನಪಾ ಅಧಿಕಾರಾವಧಿ ಮಾರ್ಚ್ 7ಕ್ಕೆ ಅಂತ್ಯಗೊಂಡಿತ್ತು. ಆದರೆ ವಾರ್ಡ್ ಮೀಸಲಾತಿ ಪ್ರಶ್ನಿಸಿ ಕೆಲವು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಚುನಾವಣೆ ನಡೆದಿರಲಿಲ್ಲ. ಮೀಸಲಾತಿ ವಿವಾದವನ್ನು ನ್ಯಾಯಾಲಯ ಬಗೆಹರಿಸಿದ್ದು ಚುನಾವಣೆ ಪ್ರಕ್ರಿಯೆಯನ್ನು ಅ. 31ರೊಳಗೆ ಪೂರ್ಣಗೊಳಿಸಿ, ನ. 15ರೊಳಗೆ ಹೊಸ ಆಡಳಿತ ವ್ಯವಸ್ಥೆ ಸ್ಥಾಪನೆಯಾಗಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆ. 27ರಂದು ನಿರ್ದೇಶನ ನೀಡಿದೆ. ಮನಪಾ ಮೀಸಲಾತಿಯ ಕುರಿತಂತೆ ಹೈಕೋರ್ಟ್ ನ ದ್ವಿಸದಸ್ಯ ಪೀಠದಲ್ಲಿ ಸಲ್ಲಿಕೆಯಾಗಿದ್ದ ಪುನರ್ ಪರಿಶೀಲನ ಅರ್ಜಿ ಕೂಡ ನ್ಯಾಯಾಲಯವು ಅ.11 ರಂದು ವಜಾಗೊಳಿಸಿ ಚುನಾವಣೆಗೆ ಎದುರಾಗಿದ್ದ ಕಾನೂನು ಅಡಚಣೆ ನಿವಾರಣೆಯಾಗಿದೆ.