Advertisement

ಪಾಲಿಕೆ ಚುನಾವಣೆಗೂ “ಸಿಂಗಲ್‌ ವಿಂಡೋ’ಸೇವೆ

12:41 AM Nov 04, 2019 | Team Udayavani |

ಮಹಾನಗರ: ಲೋಕಸಭೆ, ವಿಧಾನಸಭೆ ಚುನಾವಣೆಯಂತೆ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಯಲ್ಲಿಯೂ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಸುಗಮ ಚುನಾವಣೆಗೆ ಅನುಕೂಲವಾಗುವಂತೆ “ಸಿಂಗಲ್‌ ವಿಂಡೋ ಸಿಸ್ಟಂ'(ಏಕಗವಾಕ್ಷಿ ವ್ಯವಸ್ಥೆ) ಮಾಡಲಾಗಿದೆ.

Advertisement

ಚುನಾವಣೆ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಚುನಾವಣೆ ನಡೆಯುವ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪರವಾನಿಗೆ ಪಡೆಯುವುದನ್ನು ಕಡ್ಡಾಯ ಗೊಳಿಸಲಾಗಿದೆ. ಈ ಪರವಾನಿಗೆಗಳನ್ನು ಒಂದೇ ಕೇಂದ್ರದಲ್ಲಿ ಒದಗಿಸಿ ಸಾರ್ವಜನಿಕರಿಗೆ ಸಹಕರಿಸುವುದಕ್ಕಾಗಿ ಸಿಂಗಲ್‌ ವಿಂಡೋ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿಯೂ ಆರಂಭಿಸಲಾಗಿದೆ.

ರಾಜಕೀಯ, ರಾಜಕಿಯೇತರ
ರಾಜಕೀಯಕ್ಕೆ ಸಂಬಂಧಿಸಿದ ರ್ಯಾಲಿಗಳು, ಸಾರ್ವಜನಿಕ ಸಭೆ, ಜಾಥಾ ಮೊದಲಾದವುಗಳಿಗೆ ಹಾಗೂ ರಾಜಕೀಯೇತರವಾದ ಕಾರ್ಯಕ್ರಮಗಳಿಗೆ ಪರವಾನಿಗೆಯನ್ನು ಒಂದೇ ಕಡೆ ನೀಡಲಾಗುತ್ತಿದೆ. ರಾಜಕೀಯೇತರ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಮೆಹಂದಿ, ಇತರ ಸಂತೋಷ ಕೂಟಗಳು, ದೊಡ್ಡ ಮಟ್ಟದ ಮನೋರಂಜನ ಕಾರ್ಯಕ್ರಮಗಳು ಮೊದಲಾದವುಗಳಿಗೆ ಪರವಾನಿಗೆಯನ್ನು ನೀಡಲಾಗುತ್ತಿದೆ. ನ. 10ರ ವರೆಗೆ ಇಂತಹ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿಗಳ ಪರವಾನಿಗೆ ಬೇಕಾಗಿರುತ್ತದೆ. ಕಂದಾಯ, ಪೊಲೀಸ್‌, ಅಬಕಾರಿ, ಮಹಾನಗರ ಪಾಲಿಕೆ ಸಹಿತ ವಿವಿಧ ಇಲಾಖೆ-ವಿಭಾಗಗಳ ಅಧಿಕಾರಿಗಳು ಒಂದೇ ಕೇಂದ್ರದಲ್ಲಿ ಲಭ್ಯವಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅರ್ಜಿ ಸಲ್ಲಿಸಿದ ಅನಂತರ ಗರಿಷ್ಠ 24 ಗಂಟೆಯೊಳಗೆ ಪರವಾನಿಗೆ ನೀಡಲಾಗುತ್ತಿದೆ.

50 ಪರವಾನಿಗೆ
ಪಾಲಿಕೆ ವ್ಯಾಪ್ತಿಯಲ್ಲಿ ಅ. 24ರಿಂದ ನ. 3ರ ವರೆಗೆ 15 ರಾಜಕೀಯ, 35 ರಾಜಕೀಯೇತರ ಪರವಾನಿಗೆಗಳನ್ನು ನೀಡಲಾಗಿದೆ. ಇದರಲ್ಲಿ 4 ಮೆಹಂದಿ ಕಾರ್ಯಕ್ರಮಗಳ ಪರವಾನಿಗೆಗಳೂ ಸೇರಿವೆ. “ಪರವಾನಿಗೆ ಪಡೆಯುವ ವ್ಯವಸ್ಥೆಯನ್ನು ಮಾಡಿರುವುದು ಸಾರ್ವಜನಿಕರಿಗೆ ತೊಂದರೆ ನೀಡುವುದಕ್ಕಲ್ಲ. ಬದಲಾಗಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಅಕ್ರಮಗಳಿಗೆ ಅವಕಾಶವಾಗಬಾರದು, ಕಾರ್ಯಕ್ರಮ ಆಯೋಜಕರು ಪರವಾನಿಗೆ ಪಡೆಯದೆ ಅನಂತರ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಾಡಲಾಗಿದೆ’ ಎಂದು ಪಾಲಿಕೆ ಚುನಾವಣಾಧಿಕಾರಿಯವರು ತಿಳಿಸಿದ್ದಾರೆ.

ಸಿಂಗಲ್‌ ವಿಂಡೋ ಕೇಂದ್ರದಲ್ಲಿರುವ ಕಂದಾಯ ಅಧಿಕಾರಿಗಳು ಕಾರ್ಯಕ್ರಮದ ಸ್ಥಳದ ಬಗ್ಗೆ ನಿರಾಕ್ಷೇಪಣಾ ಪತ್ರ, ಪೊಲೀಸರು ಮೈಕ್‌ ಪರವಾನಿಗೆ, ಆರ್‌ಟಿಒ ಅವರು ವಾಹನ ಪಾಸ್‌(ರಾಜಕೀಯ ಕಾರ್ಯಕ್ರಮಗಳಿಗೆ) ನೀಡುತ್ತಾರೆ. ಇತರೆ ಪರವಾನಿಗೆ ಅಗತ್ಯವಿದ್ದರೂ ಅಧಿಕಾರಿಗಳು ಪರಿಶೀಲಿಸಿ ನೀಡುತ್ತಾರೆ. ರಜಾದಿನ ಸಹಿತ ಬೆಳಗ್ಗೆ 10ರಿಂದ ಸಂಜೆ 10.30ರ ವರೆಗೆ ಕೇಂದ್ರ ತೆರೆದಿರುತ್ತದೆ.

Advertisement

ಅಕ್ರಮ ದೂರಿಗೆ ಆಯೋಜಕರು ಹೊಣೆ
ಲೋಕಸಭೆ, ವಿಧಾನಸಭೆ ಚುನಾವಣೆಯಂತೆಯೇ ನೀತಿ ಸಂಹಿತೆ ಪಾಲಿಸಲಾಗುತ್ತದೆ. ಸಾರ್ವಜನಿಕರು ಸೇರುವ ಯಾವುದೇ ಕಾರ್ಯಕ್ರಮಗಳ ಬಗ್ಗೆ ಚುನಾವಣಾಧಿಕಾರಿಯವರ ಗಮನಕ್ಕೆ ತರುವುದು ಅಗತ್ಯ. ಇದನ್ನು ಕಡ್ಡಾಯ ಎನ್ನುವುದಕ್ಕಿಂತಲೂ ಚುನಾವಣಾ ವಿಭಾಗಕ್ಕೆ ಮಾಹಿತಿ ನೀಡುವುದು ಎನ್ನಲಾಗುತ್ತದೆ. ಇಲ್ಲವಾದರೆ ಏನಾದರೂ ಅಕ್ರಮಗಳ ದೂರು ಬಂದರೆ ಆಯೋಜಕರು ಹೊಣೆಯಾಗುತ್ತಾರೆ. ಪರವಾನಿಗೆ ಸುಲಭವಾಗಿ ದೊರೆಯಬೇಕೆಂಬ ಉದ್ದೇಶದಿಂದ ಸಿಂಗಲ್‌ ವಿಂಡೋ ಕೇಂದ್ರ ತೆರೆಯಲಾಗಿದೆ. 24 ಗಂಟೆಯೊಳಗೆ ಪರವಾನಿಗೆ ನೀಡಲು ಗರಿಷ್ಠ ಪ್ರಯತ್ನ ಮಾಡುತ್ತೇವೆ.
 - ಗಾಯತ್ರಿ, ಚುನಾವಣಾಧಿಕಾರಿ, ಮಹಾನಗರ ಪಾಲಿಕೆ

–  ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next