ಮಂಗಳೂರು: ಕುಕ್ಕರ್ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಇಸ್ಲಾಮಿಕ್ ಪ್ರವಚನಕಾರ ಝಕೀರ್ ನಾಯ್ಕನಿಂದ ಪ್ರಭಾವಿತನಾಗಿದ್ದ ಎಂಬ ಅಂಶ ಬಯಲಾಗಿದೆ.
ಶಾರೀಕ್ ಮೊಬೈಲ್ ಮೂಲಕ ಝಕೀರ್ ನಾಯ್ಕನ ಭಾಷಣಗಳನ್ನು ನಿರಂತರವಾಗಿ ಆಲಿಸುತ್ತಿದ್ದ ಮತ್ತು ಅವುಗಳನ್ನು ಆಯ್ದ ವ್ಯಕ್ತಿಗಳಿಗೆ ಶೇರ್ ಮಾಡಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಟೆಲಿಗ್ರಾಂ, ಸಿಗ್ನಲ್, ವೈರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಅವುಗಳನ್ನು ಶೇರ್ ಮಾಡಿ, ಇತರರನ್ನು ಪ್ರಚೋದಿಸು ತ್ತಿದ್ದ ಎನ್ನಲಾಗಿದೆ.
ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಅರಾಫತ್ ಎಂಬಾತನೇ ಶಾರೀಕ್‌ಗೆ ನಿರ್ದೇಶನ ನೀಡುತ್ತಿದ್ದ ಎನ್ನುವ ಮಾಹಿತಿಯೂ ಈಗ ಹೊರಬಿದ್ದಿದೆ.
ಮೂಲತಃ ತೀರ್ಥಹಳ್ಳಿಯವನೇ ಆಗಿರುವ ಅರಾಫತ್‌ನ ನಿರ್ದೇಶನದ ಮೇರೆಗೆ ಹಿಂದೆ ಶಾರೀಕ್ ಹಾಗೂ ಮುನೀರ್ ಮಾಝ್ ಮಂಗಳೂರಿನಲ್ಲಿ ಉಗ್ರ ಪರ ಗೋಡೆ ಬರಹ ಬರೆದಿದ್ದರು. ಆ ಪ್ರಕರಣದ ಎಫ್‌ಐಆರ್‌ನಲ್ಲಿ ಮೂರನೇ ಆರೋಪಿಯಾಗಿ ಅರಾಫತ್ ಹೆಸರೂ ಇತ್ತು. ಕುಕ್ಕರ್ ಪ್ರಕರಣದಲ್ಲೂ ಆತನ ನೇರ ಮಾರ್ಗದರ್ಶನವಿತ್ತು ಎಂದು ತಿಳಿದುಬಂದಿದೆ.
Related Articles
ಅರಾಫತ್ ಅಲಿಯ ಹ್ಯಾಂಡ್ಲರ್ ಆಗಿ ಜಾಫರ್ ನವಾಜ್ ಕಾರ್ಯ ನಿರ್ವಹಿಸುತ್ತಿದ್ದ. ಭಾರತದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ಅರಾಫತ್ ಅಲಿ ನೋಡಿಕೊಳ್ಳುತ್ತಿದ್ದ. ಅರಾಫತ್ ಆಲಿಯೇ ಶಾರೀಕ್ ಮತ್ತು ಮುನೀರ್ ಮಾಝ್ನ ಬ್ರೈನ್ ವಾಶ್ ಮಾಡಿದ್ದ. ಅಲ್ಲದೆ ಇವರಿಬ್ಬರಿಗೆ ಹಣಕಾಸಿನ ವ್ಯವಸ್ಥೆಯನ್ನೂ ಅರಾಫತ್ ಅಲಿ ಮಾಡುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ನ್ಯಾಯಾಲಯವೂ ಈಗಾಗಲೇ ಲುಕ್‌ಔಟ್ ನೊಟೀಸ್ ಕೂಡ ಜಾರಿಗೊಳಿಸಲಾಗಿದೆ.
ಐಆರ್‌ಸಿ ಬಗ್ಗೆ “ರಾ’ ತನಿಖೆ
ಮಂಗಳೂರು ಕುಕ್ಕರ್ ಪ್ರಕರಣದ ಹೊಣೆ ಹೊತ್ತಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಐಆರ್‌ಸಿ)ನ ಕುರಿತು ತನಿಖೆ ನಡೆಸುವುದಕ್ಕೆ ಭಾರತೀಯ ಗೂಢಚರ ಸಂಸ್ಥೆ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಕೂಡ ಮುಂದಾಗಿದೆ. ಕದ್ರಿ ಪ್ರದೇಶವನ್ನು ವಿಧ್ವಂಸಕ ಕೃತ್ಯ ನಡೆಸಲು ಆಯ್ಕೆ ಮಾಡಿಕೊಂಡಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಐಆರ್‌ಸಿ ನೀಡಿದ್ದು ಎನ್ನಲಾದ ಹೇಳಿಕೆ ಹರಿದಾಡಿತ್ತು. ಇದರಲ್ಲಿ ಎಡಿಜಿಪಿ ಆಲೋಕ್ ಕುಮಾರ್ ಅವರಿಗೂ ಜೀವಬೆದರಿಕೆ ಒಡ್ಡಲಾಗಿತ್ತು.
ಕದ್ರಿ ದೇವಸ್ಥಾನದಿಂದ ದೂರು
ಮಂಗಳೂರು ಕುಕ್ಕರ್ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಮಂಜುನಾಥ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಅವರು ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಐಆರ್‌ಸಿ ಸಂಘಟನೆಯು ಕದ್ರಿ ದೇವಸ್ಥಾನ ವನ್ನು ಗುರಿ ಮಾಡಿಕೊಂಡಿದ್ದಾಗಿ ಬರೆದು ಕೊಂಡಿರುವುದರಿಂದ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ದೂರಿನಲ್ಲಿ ಕೋರಲಾಗಿದೆ. ಕದ್ರಿ ದೇವಸ್ಥಾನಕ್ಕೆ ಉಗ್ರ ಬೆದರಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿರುವುದು ಕಂಡುಬಂದಿದೆ. ಈ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಕದ್ರಿ ದೇವಸ್ಥಾನಕ್ಕೆ ಐಆರ್‌ಸಿ ಬಾಂಬ್ ದಾಳಿಯ ಬೆದರಿಕೆ ಹಾಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ದೇವಸ್ಥಾನಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ದೂರು ಸ್ವೀಕರಿಸಿದ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಾಂಬ್ ತಯಾರಿ ವೀಡಿಯೋ ಪತ್ತೆ
ಮೊಹಮ್ಮದ್ ಶಾರೀಕ್‌ಗೆ ಸೇರಿದ ಮೊಬೈಲ್ ತಪಾಸಣೆ ವೇಳೆ ಕೆಲವು ಸೆಲ್ಫಿ ಫೋಟೋಗಳು, ಬಾಂಬ್ ತಯಾರಿಯ ವೀಡಿಯೋಗಳು ಹಾಗೂ ಅಶ್ಲೀಲ ವೀಡಿಯೋಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಡಾರ್ಕ್‌ವೆಬ್ ಬಳಕೆ ಮಾಡಿಕೊಂಡು ಕುಕ್ಕರ್ ಬಾಂಬ್, ಟಿಫಿನ್ ಬಾಂಬ್ ಇತ್ಯಾದಿ ಸುಧಾರಿತ ಸ್ಫೋಟಕಗಳನ್ನು ತಯಾರಿಸುವ ಬಗೆಯನ್ನು ಶಾರೀಕ್ ಅರಿತುಕೊಂಡಿದ್ದ.
ಶಾರೀಕ್ 40ಕ್ಕೂ ಅಧಿಕ ಮಂದಿಗೆ ಐಸಿಸ್ ಮೂಲಕ ಉಗ್ರ ತರಬೇತಿ ಕೊಡಿಸಿದ್ದ ಬಗ್ಗೆ ಮಾಹಿತಿ ಇದೆ. ಆತನಿಗೆ ಕೂಡ ಅದೇ ಮಾದರಿಯ ತರಬೇತಿ ಸಿಕ್ಕಿತ್ತು. ಕರಾವಳಿಯಲ್ಲಿ ದೇವಸ್ಥಾನ ಸ್ಫೋಟ, ಕೋಮುಗಲಭೆ ಸೃಷ್ಟಿ ಮಾಡುವುದು ಅವನ ಉದ್ದೇಶ ಆಗಿತ್ತು.
– ಶೋಭಾ ಕರಂದ್ಲಾಜೆ,ಕೇಂದ್ರ ಸಚಿವೆ
ಪೊಲೀಸರು ಒಪ್ಪಿದರೆ ಮಾತ್ರ ಮೈಸೂರಿನಲ್ಲಿ ಮನೆ!
ಮೈಸೂರು: ನಗರದಲ್ಲಿ ಮನೆ ಅಥವಾ ರೂಮ್ ಗಳು ಬಾಡಿಗೆಗೆ ಬೇಕೇ? ಹಾಗಿದ್ದರೆ ಮೂಲ ದಾಖಲಾತಿಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪಡೆದ ಕ್ಲಿಯರೆನ್ಸ್ ಸರ್ಟಿಫಿಕೆಟ್ ಪಡೆಯುವುದು ಕಡ್ಡಾಯ. ನಗರದಲ್ಲಿ ಮನೆಗಳ ಮಾಲಕರೇ ಸ್ವಯಂ ಪ್ರೇರಿತವಾಗಿ ಅಳವಡಿಸಿಕೊಂಡಿರುವ ಈ ಸುರಕ್ಷ ಕ್ರಮಕ್ಕೆ ಪೊಲೀಸರೂ ಸಾಥ್ ನೀಡಿದ್ದಾರೆ.