Advertisement

ಮಂಗಳೂರು: ವರ್ಣರಂಜಿತ ಕರಾವಳಿ ಉತ್ಸವ ಮೆರವಣಿಗೆ

10:23 AM Jan 11, 2020 | Naveen |

ಮಂಗಳೂರು: ತುಳುನಾಡು-ಹೊರ ಜಿಲ್ಲೆಗಳ ಸಾಂಸ್ಕೃತಿಕ ಕಲಾ ಲೋಕದ ಸಂಗಮ..ತುಳುನಾಡಿನ ಸಂಸ್ಕೃತಿ ಬಿಂಬಿಸುವ ಮುಟ್ಟಾಳೆ ತೊಡಿಸುವುದರ ಮೂಲಕ ಸ್ವಾಗತ..ಕರಾವಳಿ ಉತ್ಸವಕ್ಕೆ ರಾಜ್ಯದ ಸಾಂಸ್ಕೃತಿಕ ಕಲಾ ರಂಗದ ಹೊಸ ಕಳೆ.. ಇವು ಶುಕ್ರವಾರದಿಂದ 10 ದಿನಗಳ ಕಾಲ ಲಾಲ್‌ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಕರಾವಳಿ ಉತ್ಸವದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.

Advertisement

ನಗರದ ನೆಹರೂ ಮೈದಾನದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವರ್ಣರಂಜಿತ ಜಾನಪದ-ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕರಾವಳಿ ಉತ್ಸವವನ್ನು ಇಡೀ ರಾಜ್ಯವೇ ಗಮನಿಸುತ್ತಿದೆ. ಇಲ್ಲಿನ ಸಾಂಸ್ಕೃತಿಕ-ಜಾನಪದ ಸೊಗಡನ್ನು ಆಸ್ವಾದಿಸಲು ಹೊರ ಜಿಲ್ಲೆಗಳಿಂದಲೂ ಜನ ಕರಾವಳಿ ಉತ್ಸವಕ್ಕೆ ಆಗಮಿಸುತ್ತಾರೆ. ತುಳುನಾಡಿನ ಸಂಸ್ಕೃತಿಯೊಂದಿಗೆ ಹೊರ ಜಿಲ್ಲೆಗಳ ಕಲಾ ಸಂಸ್ಕೃತಿಯನ್ನೂ ಬೆಸೆಯುವ ಮೂಲಕ ಕಲಾ ಸಿರಿವಂತಿಕೆ ಅಭಿವ್ಯಕ್ತಿಯಾಗಿದೆ ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ. ಜೆ. ರೂಪಾ, ಮನಪಾ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

Advertisement

ಮುಟ್ಟಾಳೆ ತೊಡಿಸಿ ಸ್ವಾಗತ
ತುಳುನಾಡಿನ ಸಂಪ್ರದಾಯದಂತೆ ಅತಿಥಿಗಳಿಗೆ ಮುಟ್ಟಾಳೆ ತೊಡಿಸಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಬಳಿಕ ಕಲ್ಲಿಗೆ ತೆಂಗಿನ ಕಾಯಿ ಒಡೆದು ದೀಪ ಬೆಳಗಿ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಲಾಯಿತು. ಮೆರವಣಿಗೆಯು ನೆಹರೂ ಮೈದಾನದಿಂದ ಆರಂಭಗೊಂಡು ಕೆ. ಎಸ್. ರಾವ್ ರಸ್ತೆ, ನವಭಾರತ್ ವೃತ್ತ, ಪಿವಿಎಸ್, ಲಾಲ್‌ಭಾಗ್ ಮೂಲಕ ಕರಾವಳಿ ಉತ್ಸವ ಮೈದಾನ ತಲುಪಿತು.

ಉತ್ಸವದ ಕಲಾ ಸಿರಿವಂತಿಕೆ
ಜಿಲ್ಲೆ ಮತ್ತು ಹೊರ ಜಿಲ್ಲೆಗಳ ವಿವಿಧ ಕಲಾ ತಂಡಗಳು ಭಾಗವಹಿಸಿ ಕರಾವಳಿ ಉತ್ಸವ ಮೆರವಣಿಗೆಗೆ ಮೆರುಗು ನೀಡಿದವು. ಬಂಟ್ವಾಳ ತಾಲೂಕಿನ ಕನ್ಯಾನ ಗಿರಿ- ಸಿರಿ ಜಾನಪದ ಕಲಾ ತಂಡದ ಕೊರಗರ ಡೋಲು- ಕೋಲು ಕುಣಿತ, ಕನ್ಯಾನ ಶಿವಗಿರಿ ಹೊಯಿಗೆಗದ್ದೆಯ ಕರಡಿ- ಸಿಂಹ ನೃತ್ಯ, ರಾಮನಗರದ ಪೂಜಾ ಕುಣಿತ, ಕಾರವಾರದ ಸುಗ್ಗಿ ಕುಣಿತ, ಹಾವೇರಿ ಬೇಡರ ಕುಣಿತ, ಚಿಕ್ಕಮಗಳೂರು ಮಹಿಳಾ ವೀರಗಾಸೆ, ಮಾಗಡಿ ನಂದಿ ಧ್ವಜ, ಗದಗ ಕೋಲಾಟ, ಮೈಸೂರಿನ ವೀರಗಾಸೆ ಕುಣಿತ, ಶಿವಮೊಗ್ಗ ಮಹಿಳಾ ಡೊಳ್ಳು, ಚಾಮರಾಜನಗರ ಗೊರವರ ಕುಣಿತ, ತುಮಕೂರು ಸೋಮನ ಕುಣಿತ, ಧಾರವಾಡದ ಜಗ್ಗಲಿಗೆ, ಬಜಪೆ ಶ್ರೀ ಗುರು ವಿಜಯ ವಿಠಲ ಯಕ್ಷ ಕಲಾ ಕೇಂದ್ರ, ಬಿ.ಸಿ.ರೋಡು ಚಿಲಿಪಿಲಿ ಗೊಂಬೆ ಬಳಗ, ಪಾಣೆಮಂಗಳೂರು ಹಾಸ್ಯಗಾರ ಗೊಂಬೆ ತಂಡ, ಮಂಗಳೂರು ಮೂಕಾಂಬಿಕಾ ಚಂಡೆ ಬಳಗ, ಹಾವೇರಿ ಪುರವಂತಿಕೆ, ಮೊಂಟೆಪದವಿನ ಕಂಸಾಳೆ ಜಾನಪದ ನೃತ್ಯ, ತೊಕ್ಕೊಟ್ಟು ನಲಿಪು ಜನಪದ ಕೂಟದ ಕಂಗೀಲು ಜಾನಪದ ನೃತ್ಯ, ಉಡುಪಿ ಬಂಟಕಲ್ಲು ದುರ್ಗಾ ಮಹಿಳಾ ಚೆಂಡೆ ಬಳಗ, ತುಳುನಾಡಿನ ಪಂಚವಾದ್ಯ ವೈವಿಧ್ಯಮಯ, ತುಳು ಮಾತೆ ಪ್ರದರ್ಶನ ಟ್ಯಾಬ್ಲೊ, ಸುಳ್ಯ ರಮೇಶ್ ಮತ್ತು ಬಳಗದ ಆಟಿ ಕಳಂಜ, ಇಬ್ರಾಹಿಂ ಬಾತಿಷಾ ಅವರ ಒಪ್ಪನ ನೃತ್ಯ ಮೊದಲಾದವುಗಳು ಈ ಬಾರಿಯ ಉತ್ಸವ ಮೆರವಣಿಗೆಯ ಪ್ರಮುಖ ವಿಶೇಷ ಆಕರ್ಷಣೆಗಳು.

Advertisement

Udayavani is now on Telegram. Click here to join our channel and stay updated with the latest news.

Next