Advertisement

ಮಂಗಳೂರು ಮಹಾನಗರ ಪಾಲಿಕೆ: ಕೋವಿಡ್‌ ನಿಯಂತ್ರಣಕ್ಕೆ ವಾರ್ಡ್‌ಗೊಂದು ತಂಡ

05:36 PM Jan 26, 2022 | Team Udayavani |

ಮಹಾನಗರ: ದ.ಕ. ಜಿಲ್ಲೆಯಲ್ಲಿ ಒಂದು ತಿಂಗಳಿನಿಂದೀಚೆಗೆ ಕೊರೊನಾ ದೈನಿಕ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜಿಲ್ಲೆಯ ಸಕ್ರಿಯ ಪ್ರಕರಣಗಳ ಪೈಕಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಈ ವಿಚಾರವನ್ನು ಪಾಲಿಕೆ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ವಾರ್ಡ್‌ಗೊಂದು ತಂಡ ರಚನೆ ಮಾಡಲು ಮುಂದಾಗಿದೆ.

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 60 ವಾರ್ಡ್‌ಗಳಿದ್ದು, ಕೋವಿಡ್‌ ನಿಯಂತ್ರಣ ಸಂಬಂಧ ಪ್ರತೀ ವಾರ್ಡ್‌ನಲ್ಲಿ ತಂಡವೊಂದು ಕಾರ್ಯನಿರ್ವಹಿಸಲಿವೆ. ಈ ತಂಡದಲ್ಲಿ ಪ್ರತೀ ವಾರ್ಡ್‌ಗೆ ಓರ್ವ ನೋಡಲ್‌ ಅಧಿಕಾರಿ, ಸೋಂಕಿತರ ಕ್ವಾರಂಟೈನ್‌ ನೋಡಿಕೊಳ್ಳಲು ಕ್ವಾರಂಟೈನ್‌ವಾಚ್‌ ಅಧಿಕಾರಿ, ಕೋವಿಡ್‌ ಸಂಪರ್ಕ ಪತ್ತೆ ಮಾಡಲು ಪ್ರತ್ಯೇಕ ಅಧಿಕಾರಿ, ಆರೋಗ್ಯ ಅಧಿಕಾರಿಗಳ ತಂಡ, ಆಶಾ/ ಅಂಗನವಾಡಿ ಕಾರ್ಯಕರ್ತೆಯರು, ಎಂಪಿಡಬ್ಲ್ಯು ಅಧಿಕಾರಿಗಳು ಇರುತ್ತಾರೆ. ಈ ಅಧಿಕಾರಿಗಳಿಗೆ/ಸಿಬಂದಿಗೆ ಪ್ರತ್ಯೇಕ ಜವಾಬ್ದಾರಿಯನ್ನು ನೀಡಲಾಗಿದೆ.

ವಾರ್ಡ್‌ನಲ್ಲಿರುವ ಸೋಂಕಿತರ ಮಾಹಿತಿ ಸಂಗ್ರಹ, ಅವರು ಚಿಕಿತ್ಸೆ ಪಡೆಯು ತ್ತಿರುವುದನ್ನು ಖಚಿತ ಪಡಿಸಿಕೊಳ್ಳುವುದು, ಸೋಂಕಿತರ ಪ್ರಾಥಮಿಕ ಸಂಪರ್ಕ ಕ್ವಾರಂ ಟೈನ್‌ಗೆ ಒಳಪಡಿಸುವುದು, ಹೆಚ್ಚಿನ ಕೇಸ್‌ ದಾಖಲಾದಲ್ಲಿ ಕ್ಲಸ್ಟರ್‌ ವಲಯವನ್ನಾಗಿ ಮಾಡುವುದು, ಮೆಡಿಕಲ್‌ ಕಿಟ್‌ ವಿತರಣೆ, ಅರ್ಹರು ಲಸಿಕೆ ಪಡೆದು ಕೊಳ್ಳಲು ಪ್ರೋತ್ಸಾಹಿಸುವುದು ಸಹಿತ ವಿವಿಧ ಜವಾಬ್ದಾರಿಯನ್ನು ಈ ತಂಡಕ್ಕೆ ವಹಿಸಲಾಗಿದೆ.

ಸಕ್ರಿಯ ಹೆಚ್ಚಳ, ಲಸಿಕೆ ಯಲ್ಲೂ ಹಿನ್ನಡೆ
ಆರೋಗ್ಯ ಇಲಾಖೆಯ ಮಾಹಿತಿಯಂತೆ ದ.ಕ. ಜಿಲ್ಲೆಯಲ್ಲಿ ಸದ್ಯ 5,455 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ. ಇದರ ಪೈಕಿ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ 2,644 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಹೆಚ್ಚಿನ ಕೋವಿಡ್‌ ಸೋಂಕಿತರು ಸೌಮ್ಯ ಗುಣಲಕ್ಷಣ ಹೊಂದಿದವರು. ಇನ್ನು, ಜಿಲ್ಲೆಗೆ ಹೋಲಿಕೆ ಮಾಡಿದರೆ ಲಸಿಕೆ ಪಡೆದುಕೊಳ್ಳಲು ಬಾಕಿ ಇರುವವರಲ್ಲಿ ಹೆಚ್ಚಿನ ಮಂದಿ ಪಾಲಿಕೆ ವ್ಯಾಪ್ತಿಗೊಳಪಟ್ಟವರು. ಸುಮಾರು 20,000ಕ್ಕೂ ಹೆಚ್ಚಿನ ಮಂದಿ ಇನ್ನೂ ಮೊದಲ ಡೋಸ್‌ ಲಸಿಕೆ ಪಡೆದುಕೊಂಡಿಲ್ಲ. ಇದೇ ಕಾರಣಕ್ಕೆ ವಾರದಲ್ಲಿ ಒಂದು ದಿನ ಮೆಗಾ ಲಸಿಕಾ ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ. ಮಂಗಳೂರಿನಲ್ಲಿ ಒಟ್ಟು 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರಕ್ಕೆ ತಲಾ 3,000 ಡೋಸ್‌ ಲಸಿಕೆಯ ಗುರಿ ನೀಡಲಾಗಿದೆ.

ಕೋವಿಡ್‌ ನಿಯಂತ್ರಣಕ್ಕೆ ವಿಶೇಷ ಒತ್ತು
ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಸದ್ಯ 2,644 ಸಕ್ರಿಯ ಪ್ರಕರಣಗಳಿದ್ದು, ಹೆಚ್ಚಿನ ಕೋವಿಡ್‌ ಸೋಂಕಿತರು ಸೌಮ್ಯ ಗುಣಲಕ್ಷಣವನ್ನು ಹೋಂದಿದವರು. ಕೋವಿಡ್‌ ನಿಯಂತ್ರಣಕ್ಕೆಂದು ವಾರ್ಡ್‌ ಮಟ್ಟದಲ್ಲಿ ನೋಡೆಲ್‌ ಅಧಿಕಾರಿಗಳ ತಂಡ ಕೆಲಸ ನಿರ್ವಹಿಸುತ್ತಿವೆ. ಕೋವಿಡ್‌ ಸೋಂಕಿತರ ಪತ್ತೆ, ಪ್ರಾಥಮಿಕ ಸಂಪರ್ಕ ಪತ್ತೆ ಸಹಿತ ಲಸಿಕಾಕರಣದ ವಿಷಯದಲ್ಲಿಯೂ ಈ ತಂಡ ಕೆಲಸ ಮಾಡುತ್ತಿದೆ.
-ಅಕ್ಷಯ್‌ ಶ್ರೀಧರ್‌, ಪಾಲಿಕೆ ಆಯುಕ್ತರು

Advertisement

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next