Advertisement

ಮಹಾನಗರ ಪಾಲಿಕೆ; ಕಂದಾಯ ವಸೂಲಾತಿ ಭಾರೀ ಕುಸಿತ!

11:17 PM Jan 26, 2020 | Sriram |

ಮಹಾನಗರ: ಕಂದಾಯ ವಸೂಲಾತಿಯಲ್ಲಿ ಮಹಾನಗರ ಪಾಲಿಕೆಯು ಭಾರೀ ಕುಸಿತ ದಾಖಲಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆಯು ಕೇವಲ ಶೇ. 41ರಷ್ಟು ಮಾತ್ರ ಸಂಗ್ರಹವಾಗಿದೆ. ಹೀಗಾಗಿ, ನಿರೀಕ್ಷೆಯ ಅರ್ಧದಷ್ಟು ಕೂಡ ತೆರಿಗೆ ಸಂಗ್ರಹವಾಗದ ಕಾರಣ ಪಾಲಿಕೆಯು ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ನೋಟಿಸ್‌ ಜಾರಿಗೊಳಿಸಲು ಆರಂಭಿಸಿದೆ.

Advertisement

ಆಸ್ತಿ ತೆರಿಗೆ ಸಹಿತ ಪಾಲಿಕೆಗೆ ವಿವಿಧ ಮೂಲಗಳಿಂದ ಒಟ್ಟು 97.52 ಕೋ.ರೂ. ಕಂದಾಯ ಬರಬೇಕಿತ್ತು. ಆದರೆ ಇಲ್ಲಿಯವರೆಗೆ 42.18 ಕೋ.ರೂ. ಮಾತ್ರ ವಸೂಲಿಯಾಗಿದ್ದು, 54.78 ಕೋ.ರೂ. ಬರಲು ಬಾಕಿಯಾಗಿದೆ.

ಅಂದರೆ ಕಂದಾಯ ವಸೂಲಾತಿಯಲ್ಲಿ ಪಾಲಿಕೆಯು ಶೇ. 43.83ರಷ್ಟು ಶಕ್ತವಾಗಿರುವುದು ಆಡಳಿತ ವ್ಯವಸ್ಥೆಗೆ ಸವಾಲಾಗಿದೆ.

ಆದಾಯಕ್ಕೆ ಖೋತಾ ಆಗುತ್ತಿರುವ ಕಾರಣದಿಂದ ಕೊನೆಗೂ ಎಚ್ಚೆತ್ತುಕೊಂಡಿರುವ ಪಾಲಿಕೆಯು ತನ್ನ ವ್ಯಾಪ್ತಿಯೊಳಗಿನ ಪ್ರತೀ ಆಸ್ತಿಗಳ ಆಸ್ತಿ ತೆರಿಗೆ ಬಾಕಿ ವಿವರಗಳನ್ನು ಪರಿಶೀಲಿಸಿ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಅಭಿಯಾನ ಕೈಗೊಂಡಿದೆ. ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದಾಗ ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಪಾವತಿ ವಿವರಗಳನ್ನು ನೀಡುವಂತೆ ಸೂಚಿಸಿದೆ.

ಆಸ್ತಿ ತೆರಿಗೆ ಕಡಿಮೆ ಯಾಕೆ?
ಪಾಲಿಕೆ ವ್ಯಾಪ್ತಿಯಲ್ಲಿ 2008-09ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಈ ಪದ್ಧತಿಯಂತೆ ಸರಕಾರಿ, ಖಾಸಗಿ ಮಾಲಕತ್ವಕ್ಕೆ ಒಳಪಟ್ಟ ಎಲ್ಲ ನಿವೇಶನ, ನಿವೇಶನವನ್ನೊಳಗೊಂಡ ಕಟ್ಟಡಗಳು ಈ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಆದರೆ ಹಲವಾರು ಆಸ್ತಿಗಳಿಗೆ ಸಂಬಂಧಿಸಿದಂತೆ ಪಾವತಿಗಳಲ್ಲಿ ಬರುತ್ತಿರುವ ವ್ಯತ್ಯಾಸ, ವಿವರ ಪಟ್ಟಿಗಳಲ್ಲಿ ವಿವರ ಅಪೂರ್ಣ, ಅವಧಿ ಮೀರಿದ ಪಾವತಿಗಳಿಗೆ ಹಾಕಿದ ದಂಡನೆ ಪಾವತಿಸದಿರುವುದು, ಕಡಿಮೆ ಪಾವತಿಸಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ.

Advertisement

ಕಟ್ಟಡ ನಂಬರ್‌ನ್ನು ತಪ್ಪಾಗಿ ನಮೂದಿಸಿರುವುದು, ಹೊಸ ಕಟ್ಟಡಗಳನ್ನು ನಿರ್ಮಿಸಿದ್ದರೂ ಹಳೆ ಕಟ್ಟಡ ನಂಬರ್‌ನ್ನು ಮುಂದುವರಿಸಿ ಹಳೆ ವಿಸ್ತೀರ್ಣವನ್ನು ಲೆಕ್ಕಾಚಾರ ಮಾಡಿ ಪಾವತಿಸಿರುವ ಹಲವು ಪ್ರಕರಣಗಳು ಕೂಡ ಸದ್ಯ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಜತೆಗೆ, ವಿನಾಯಿತಿ ವ್ಯಾಪ್ತಿಗೆ ಒಳಪಡದ ವಾಣಿಜ್ಯ/ವಾಸ್ತವ್ಯೇತರ ಉದ್ದೇಶದ ಕಟ್ಟಡಗಳಿಗೆ ಸೇವಾ ಶುಲ್ಕವನ್ನು ಪಾವತಿಸಿರುವುದು ಕೂಡ ಪಾಲಿಕೆ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಸ್ತುತ ಸಾಲಿನ ತೆರಿಗೆ ಪಾವತಿ ಪ್ರಗತಿಯು ಕುಂಠಿತವಾಗಿದೆ. ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಹಾಗೂ ವಾಣಿಜ್ಯ ಮಳಿಗೆ/ಸಂಕೀರ್ಣಗಳಲ್ಲಿ ಮಾಲಕತ್ವ ಪಡೆದವರು, ಬಿಲ್ಡರ್‌ಗಳು ಹಲವು ವರ್ಷಗಳಿಂದ ಆಸ್ತಿ ತೆರಿಗೆಯನ್ನೇ ಪಾವತಿಸದೆ ಬಾಕಿ ಇರಿಸಿಕೊಂಡಿದ್ದಾರೆ ಎಂಬುದು ಪಾಲಿಕೆ ಅಭಿಪ್ರಾಯ.

ಎಪ್ರಿಲ್‌ನಿಂದ ಆಸ್ತಿ ತೆರಿಗೆ ಹೆಚ್ಚಳ?
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನು ಪ್ರಕಾರ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳದ ಅನಿವಾರ್ಯತೆ ಇದ್ದು, ಕನಿಷ್ಠ ಶೇ.15ರಷ್ಟು ತೆರಿಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಕರ್ನಾಟಕ ಮುನ್ಸಿಪಲ್‌ ಕಾಯ್ದೆ ಪ್ರಕಾರ ಪ್ರತಿ 3 ವರ್ಷಕ್ಕೊಮ್ಮೆ ಸ್ಥಳೀಯ ನಗರಾಡಳಿತ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಬೇಕಿದೆ. ನಿಯಮದಂತೆ 2017ರಲ್ಲಿ ಶೇ. 15 ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿತ್ತು. ಇದಾಗಿ ಮೂರು ವರ್ಷಗಳು ಕಳೆದಿದ್ದು, ಈಗ 2020ರ ಎ. 1ರಿಂದ ಅನ್ವಯವಾಗುವಂತೆ ಮತ್ತೆ ಆಸ್ತಿ ತೆರಿಗೆ ಹೆಚ್ಚಳವಾಗುವ ಸಾಧ್ಯತೆಯಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ಬಂದ ಬಳಿಕ 2008, 2011, 2014, 2017 ಸೇರಿ ಒಟ್ಟು ನಾಲ್ಕು ಬಾರಿ ಹೆಚ್ಚಳ ಮಾಡಲಾಗಿತ್ತು.

ಆಸ್ತಿ ತೆರಿಗೆ ಬಾಕಿ ಇರಿಸಿದವರ ವಿರುದ್ಧ ಕ್ರಮ
ಪಾಲಿಕೆಯಲ್ಲಿ ಆಸ್ತಿ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ಆಸ್ತಿ ತೆರಿಗೆ ಬಾಕಿ ಇರಿಸಿಕೊಂಡವರ ವಿರುದ್ಧ ಕ್ರಮಕ್ಕೆ ಈಗ ಪಾಲಿಕೆ ಮುಂದಾಗಿದೆ. ಕಾನೂನು ಪ್ರಕಾರ ನೋಟಿಸ್‌ ಕಳುಹಿಸಲಾಗುತ್ತಿದೆ. ಜತೆಗೆ ಬಾಕಿ ಇರಿಸಿದವರ ಆಸ್ತಿಗಳಿಗೆ ಸಂಬಂಧಿಸಿ ಪಾಲಿಕೆ ಅಧಿಕಾರಿಗಳ ತಂಡ ದಿಢೀರ್‌ ಭೇಟಿ ನೀಡಿ ದಾಖಲೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತಿದೆ.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ,
ಆಯುಕ್ತರು. ಮನಪಾ

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next