Advertisement

ಮಂಗಳಾದೇವಿಯಲ್ಲಿ ಸಿಂಹ; ಮಾರ್ನಮಿಕಟ್ಟೆಗೆ ಹುಲಿ!

12:07 PM Jul 22, 2022 | Team Udayavani |

ಮಂಗಳಾದೇವಿ: ಮಂಗಳೂರಿನ ವಿವಿಧ ವೃತ್ತಗಳನ್ನು ಹೊಸ ಸ್ವರೂಪದೊಂದಿಗೆ ಅಭಿವೃದ್ಧಿಗೊಳಿಸುವ ಯೋಜನೆಯಡಿ ಮಂಗಳಾದೇವಿ ಹಾಗೂ ಮಾರ್ನಮಿಕಟ್ಟೆಯ ವೃತ್ತವನ್ನು ಆಕರ್ಷಕ ವಿನ್ಯಾಸದೊಂದಿಗೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

Advertisement

ಎರಡೂ ಪ್ರದೇಶಗಳು ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನ ಸಂಬಂಧ ಬೆಸೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮಂಗಳಾದೇವಿ ಮುಂಭಾಗ ರಥಬೀದಿಯಲ್ಲಿರುವ ಸರ್ಕಲ್‌ನಲ್ಲಿ ಸಿಂಹದ ಕಲಾಕೃತಿ, ಮಾರ್ನಮಿಕಟ್ಟೆಯಲ್ಲಿ ಹುಲಿಯ ಕಲಾಕೃತಿಯ ಸರ್ಕಲ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ಮಂಗಳಾದೇವಿ ಸರ್ಕಲ್‌ ಅನ್ನು ಈಗಾಗಲೇ ಸ್ಮಾರ್ಟ್‌ಸಿಟಿ ವತಿಯಿಂದ ರೂಪಿಸಲಾಗಿದೆ. ಆದರೆ ಇಲ್ಲಿ ವಿಭಿನ್ನ ಶೈಲಿಯ ಆಕರ್ಷಕ ಕಲಾಕೃತಿಯ ಸರ್ಕಲ್‌ ನಿರ್ಮಿಸುವ ಕಾರ್ಯ ಇನ್ನಷ್ಟೇ ಆಗಬೇಕಿದೆ. ಇದಕ್ಕಾಗಿ ಖಾಸಗಿ ಸಹಕಾರವನ್ನು ಪಾಲಿಕೆ ನಿರೀಕ್ಷಿಸಿತ್ತು. ಇದರಂತೆ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ವತಿಯಿಂದ ಇಲ್ಲಿನ ಸರ್ಕಲ್‌ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ.

ಶ್ರೀ ಮಂಗಳಾದೇವಿ ದೇವಸ್ಥಾನ ಹಾಗೂ ಸಿಂಹಕ್ಕೂ ಧಾರ್ಮಿಕವಾಗಿ ಐತಿಹ್ಯವಿರುವ ಹಿನ್ನೆಲೆಯಲ್ಲಿ ಸರ್ಕಲ್‌ ಅನ್ನು ಸಿಂಹದ ಕಲಾಕೃತಿಯೊಂದಿಗೆ ಮಾಡಬೇಕು ಎಂಬ ಭಕ್ತರ ಸಲಹೆಯ ಪ್ರಕಾರ ನಿರ್ಮಿಸಲು ನಿರ್ಧರಿಸಲಾಗಿದೆ. ಸದ್ಯ ಯೋಜನಾಪಟ್ಟಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಇದರ ಅಂತಿಮ ರೂಪರೇಖೆ ಆಗಲಿದೆ.

ಹಲವು ಕಾಲದಿಂದ ಅಭಿವೃದ್ಧಿಯಾಗಿಲ್ಲ

Advertisement

ಮಾರ್ನಮಿಕಟ್ಟೆಯಲ್ಲಿರುವ ಬೃಹತ್‌ ಸರ್ಕಲ್‌ ಹಲವು ಕಾಲದಿಂದ ಅಭಿವೃದ್ಧಿ ಕಾಣದೆ ಹಾಗೆಯೇ ಬಾಕಿಯಾಗಿದೆ. ಖಾಸಗಿ ಸಂಘ ಸಂಸ್ಥೆಗಳು ಇದರ ಅಭಿವೃದ್ಧಿಗೆ ಮುಂದೆ ಬಂದರೂ ಕೂಡ ನಿರ್ವಹಣೆ ಸಮಸ್ಯೆಯಿಂದ ಇದು ಈಡೇರಿರಲಿಲ್ಲ. ಇದೀಗ ಆಸಕ್ತ ಸಂಸ್ಥೆಯೊಂದನ್ನು ಪರಿಗಣಿಸಿ ನಿರ್ವಹಣೆಯ ಹೊಣೆಯೊಂದಿಗೆ ಇಲ್ಲಿನ ಸರ್ಕಲ್‌ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಮಾರ್ನಮಿಕಟ್ಟೆಯ ಸರ್ಕಲ್‌ ಅನ್ನು ಮಾರ್ನೆಮಿಯ ನೆನಪಿನಲ್ಲಿ ಹುಲಿಯ ಕಲಾಕೃತಿಯೊಂದಿಗೆ ನಿರ್ಮಿಸಲು ಉದ್ದೇಶಿಸಲಾಗಿದೆ.

ಶೀಘ್ರ ಕೆಲಸ ಆರಂಭ

‘ಮಾರ್ನಮಿಯ ಹೆಸರಿನಲ್ಲಿ ಹುಲಿ ವೇಷದ ಭಂಗಿಯಲ್ಲಿ ಮಾರ್ನಮಿಕಟ್ಟೆಯ ಸರ್ಕಲ್‌ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಶೀಘ್ರ ಕೆಲಸ ಶುರು ಮಾಡಲಾಗುವುದು’ ಎಂದು ಶಾಸಕ ವೇದವ್ಯಾಸ ಕಾಮತ್‌ ಅವರು “ಸುದಿನ’ಕ್ಕೆ ತಿಳಿಸಿದ್ದಾರೆ.

ನಗರದ ಹಲವು ವೃತ್ತಗಳ ಅಭಿವೃದ್ಧಿ

ನಗರದ ವಿವಿಧ ವೃತ್ತಗಳನ್ನು ಮಂಗಳೂರು ಪಾಲಿಕೆ, ಸ್ಮಾರ್ಟ್‌ಸಿಟಿ, ಮುಡಾ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಇದರಂತೆ, ಸ್ಟೇಟ್‌ಬ್ಯಾಂಕ್‌ನ ಎ.ಬಿ. ಶೆಟ್ಟಿ ವೃತ್ತವನ್ನು ಬ್ಯಾಂಕ್‌ ಆಫ್‌ ಬರೋಡಾ ವತಿಯಿಂದ ವಿಶೇಷ ವಿನ್ಯಾಸದಲ್ಲಿ, ಬಲ್ಮಠದಲ್ಲಿರುವ ಅಂಬೇಡ್ಕರ್‌ ಜಂಕ್ಷನ್‌ನಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತವನ್ನು ಪಾಲಿಕೆ ವತಿಯಿಂದ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಲೇಡಿಹಿಲ್‌ನಲ್ಲಿ ‘ಬ್ರಹ್ಮಶ್ರೀ ನಾರಾಯಣ ಗುರು ವೃತ್ತ’ವನ್ನು ಮುಡಾ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ. ಇನ್ನೂ ಹಲವು ಸರ್ಕಲ್‌ಗ‌ಳು ಅಭಿವೃದ್ಧಿಯಾಗುವ ನಿರೀಕ್ಷೆಯಲ್ಲಿವೆ.

ಧಾರ್ಮಿಕ, ಸಾಂಸ್ಕೃತಿಕ ಪ್ರತೀಕ: ಮಂಗಳಾದೇವಿ, ಮಾರ್ನಮಿಕಟ್ಟೆ ಪ್ರದೇಶವು ತುಳುನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರತೀಕವಾಗಿ ಗುರುತಿಸಿಕೊಂಡಿದೆ. ಹೀಗಾಗಿ ಎರಡೂ ಪ್ರದೇಶಗಳಲ್ಲಿರುವ ಸರ್ಕಲ್‌ಗ‌ಳನ್ನು ಇದೇ ಆಶಯದೊಂದಿಗೆ ಸಿಂಹ, ಹುಲಿಯ ಕಲಾಕೃತಿಯೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. – ಪ್ರೇಮಾನಂದ ಶೆಟ್ಟಿ, ಮೇಯರ್‌, ಮಂಗಳೂರು ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next