Advertisement

ಆಂಧ್ರಕ್ಕೆ ಮಂಗಳೂರು ಸಿಟಿ ಬಸ್‌ ಮಾದರಿ !

12:29 AM Mar 13, 2020 | mahesh |

ಮಹಾನಗರ: ನಗರದಲ್ಲಿ ಸಂಚರಿಸುವ ಸಿಟಿ ಬಸ್‌ ವ್ಯವಸ್ಥೆ ಹೊರ ರಾಜ್ಯದಲ್ಲಿಯೂ ಪ್ರಸಿದ್ಧಿ ಪಡೆಯುತ್ತಿದೆ. ಇದೀಗ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (ಎ.ಪಿ.ಎಸ್‌.ಆರ್‌.ಟಿ.ಸಿ.) ಅಧಿಕಾರಿಗಳು ಮಂಗಳೂರು ಸಿಟಿ ಬಸ್‌ ವ್ಯವಸ್ಥೆಯ ಅಧ್ಯಯನಕ್ಕೆಂದು ನಗರಕ್ಕೆ ಆಗಮಿಸಿದ್ದಾರೆ.

Advertisement

ನಗರದಲ್ಲಿ ದಿನಂಪ್ರತಿ ಸುಮಾರು 300ರಿಂದ 350ರಷ್ಟು ಸಿಟಿ ಬಸ್‌ಗಳು ಸಂಚರಿಸುತ್ತಿವೆ. ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಬಸ್‌ ಸೇವೆಯು ರಾತ್ರಿ ಸುಮಾರು 10 ಗಂಟೆಯವರೆಗೆ ಕಾರ್ಯಾ ಚರಣೆ ನಡೆಸುತ್ತವೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವ್ಯವಸ್ಥೆಯನ್ನು ಅರಿತು ಅದೇ ಮಾದರಿಯಲ್ಲಿ ಆಂಧ್ರಪ್ರದೇಶ ರಾಜ್ಯ ದಲ್ಲಿಯೂ ಬಸ್‌ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಎ.ಪಿ.ಎಸ್‌.ಆರ್‌. ಟಿ.ಸಿ.ಯ ತಂಡವೊಂದು ಮಂಗಳೂರಿಗೆ ಆಗಮಿಸಿದೆ.

ಆಂಧ್ರಪ್ರದೇಶದ ಕರಾವಳಿ ಭಾಗವಾದ ಕಾಕಿನಾಡ ಪ್ರದೇಶ ಮಂಗಳೂರಿನ ರೀತಿಯೇ ನಗರ ಪ್ರದೇಶವಾಗಿದೆ. ಸುಮಾರು 5ರಿಂದ 6 ಲಕ್ಷ ಮಂದಿ ಜನಸಂಖ್ಯೆ ಇಲ್ಲಿದ್ದು, ಈ ಪ್ರದೇಶದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಸಿಟಿ ಬಸ್‌ ವ್ಯವಸ್ಥೆ ಇಲ್ಲ. ಬದಲಾಗಿ ಸಾರ್ವಜನಿಕರು, ತಮ್ಮ ಸ್ವಂತ ವಾಹನ ಸಹಿತ ಇತರ ಬಾಡಿಗೆ ವಾಹನವನ್ನು ಅವಲಂಬಿಸಿದ್ದಾರೆ. ಇಲ್ಲಿ ಹೊಸತಾಗಿ ಸಿಟಿ ಬಸ್‌ ವ್ಯವಸ್ಥೆಯನ್ನು ಅಳವಡಿಸಬೇಕು ಎಂಬ ಉದ್ದೇಶದಿಂದ ಅಲ್ಲಿನ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ, ಮಾಹಿತಿ ಕಲೆ ಹಾಕಿದ್ದಾರೆ.

ಆಂಧ್ರದ ರಾಜ್ಯ ರಸ್ತೆ ಸಾರಿಗೆ ನಿಗಮದ ಐದು ಮಂದಿ ಬುಧವಾರ ನಗರಕ್ಕೆ ಆಗಮಿಸಿ, ಇಲ್ಲಿನ ಕೆಲವೊಂದು ಪ್ರದೇಶಗಳಿಗೆ ಸಿಟಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅದೇ ರೀತಿ ಉಡುಪಿ ಕಡೆಗೆ ತೆರಳುವ ಖಾಸಗಿ ಬಸ್‌ ನಲ್ಲೂ ಪ್ರಯಾಣಿ ಸಿದ್ದಾರೆ. ಬಸ್‌ನಲ್ಲಿ ನಿರ್ವಾ ಹಕರು ನಡೆದು ಕೊಳ್ಳುವ ರೀತಿ, ಇಲ್ಲಿನ ಟಿಕೆಟ್‌ ಚೆಕ್ಕಿಂಗ್‌ ವ್ಯವಸ್ಥೆ, ಸಮಯಪಾಲನೆ, ಇಟಿಎಂ ವ್ಯವಸ್ಥೆ, ಬಸ್‌ನ ಗುಣಮಟ್ಟದ ಬಗ್ಗೆ ಬಸ್‌ಗಳಲ್ಲಿ ಸಂಚರಿಸಿಯೇ ನಿರ್ವಾಹಕರಿಂದ, ಸಾರ್ವಜನಿಕರಿಂದ ಮಾಹಿತಿ ಪಡೆದು ಕೊಂಡಿದ್ದಾರೆ.

ಹೊಸದಿಲ್ಲಿ ಸಭೆಯಲ್ಲಿ ಮಂಗಳೂರು ಪ್ರಸ್ತಾವ
ಆಂಧ್ರಪ್ರದೇಶದ ಕರಾವಳಿ ಭಾಗವಾದ ಕಾಕಿನಾಡ ಪ್ರದೇಶದ ಸಿಟಿಗೆ ಬಸ್‌ ಸಂಪರ್ಕ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಯಾವ ರೀತಿಯಲ್ಲಿ ನೀಡಬೇಕು ಎಂಬ ಬಗ್ಗೆ ಹೊಸದಿಲ್ಲಿಯಲ್ಲಿ ನಡೆದ ಸಭೆಯೊಂದರಲ್ಲಿ ಚರ್ಚೆ ಮಾಡಲಾಗಿತ್ತು. ಮಂಗಳೂರು ಸಿಟಿ ಬಸ್‌ ವ್ಯವಸ್ಥೆ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವ ಬಂತು. ಇಲ್ಲಿನ ವ್ಯವಸ್ಥೆಯನ್ನು ಮಾದರಿಯನ್ನಾಗಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಅದರಂತೆಯೇ ಇದೀಗ ಆಂಧ್ರಪ್ರದೇಶ ಸಾರಿಗೆ ನಿಗಮದ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದ್ದಾರೆ.

Advertisement

ಅಧಿಕಾರಿಗಳೊಂದಿಗೆ ಸಭೆ
ಮಂಗಳೂರಿನ ಸಿಟಿ ಬಸ್‌ ಮಾದರಿಯನ್ನು ಆಂಧ್ರ ಪ್ರದೇಶದಲ್ಲಿ ಯಾವ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಎ.ಪಿ.ಎಸ್‌.ಆರ್‌.ಟಿ.ಸಿ. ವ್ಯವ ಸ್ಥಾಪಕ ನಿರ್ದೇಶಕ ಪ್ರತಾಪ್‌ ಮಾದಿರೆಡ್ಡಿ ಅವರು ಗುರುವಾರ ಸಿಟಿ ಬಸ್‌, ಖಾಸಗಿ ಬಸ್‌ ಮಾಲಕರ ಸಂಘದ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಮುಖ್ಯವಾಗಿ, ನಿರ್ವಾಹಕ ರಹಿತ ಬಸ್‌ ಸೇವೆಯನ್ನು ಕಾಕಿನಾಡ ಪ್ರದೇಶದಲ್ಲಿ ಅನುಷ್ಠಾನಗೊಳಿಸುವ ಯೋಜನೆ ಅಲ್ಲಿನ ಸಾರಿಗೆ ನಿಗಮದ್ದಿದೆ.

ಇಲ್ಲಿನ ಮಾದರಿ ಅಳವಡಿಸುವ ಚಿಂತನೆ
ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿನ ಸಿಟಿ ಬಸ್‌ಗಳನ್ನು ಯಾವ ರೀತಿ ಕಾರ್ಯಾಚರಣೆ ಮಾಡಲಾಗುತ್ತದೆ. ನಿರ್ವಹಣೆಯು ಯಾವ ರೀತಿ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದಾರೆ. ಈ ಮಾಹಿತಿ ಸಂಗ್ರಹಿಸಿ ಆಂಧ್ರಪ್ರದೇಶದಲ್ಲಿಯೂ ಇದೇ ಮಾದರಿ ಅಳವಡಿಸುವ ಚಿಂತನೆ ಅವರದ್ದು.
– ದಿಲ್‌ರಾಜ್‌ ಆಳ್ವ, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

ಮಾಹಿತಿ ಸಂಗ್ರಹಿಸಿದ್ದಾರೆ
ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಆರ್‌ಟಿಒಗೆ ಭೇಟಿ ನೀಡಿದ್ದಾರೆ. ಮಂಗಳೂರಿನಲ್ಲಿ ಹೊಸ ಬಸ್‌ಗೆ ಯಾವ ರೀತಿ ಪರವಾನಗಿ ನೀಡಲಾಗುತ್ತದೆ ಎಂಬುವುದರ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ.
– ರಾಮಕೃಷ್ಣ ರೈ, ಮಂಗಳೂರು ಆರ್‌ಟಿಒ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next