Advertisement

ಮಂಗಳೂರು: ಆಟೋ ರಿಕ್ಷಾದಲ್ಲಿ ಸ್ಪೋಟ; ಇಬ್ಬರಿಗೆ ಗಾಯ

12:48 AM Nov 20, 2022 | Team Udayavani |

ಮಂಗಳೂರು: ಚಲಿಸುತ್ತಿದ್ದ ಆಟೋರಿಕ್ಷಾ ದೊಳಗೆ ಸ್ಫೋಟ ಉಂಟಾಗಿ ಪ್ರಯಾಣಿಕ ಮತ್ತು ಚಾಲಕ ಗಾಯಗೊಂಡಿರುವ ಘಟನೆ ನಗರದ ಕಂಕನಾಡಿ ಪೊಲೀಸ್‌ ಠಾಣೆ ಸಮೀಪದ ನಾಗುರಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

Advertisement

ರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್‌ ಪತ್ತೆ ಯಾಗಿದೆ. ಆಟೋರಿಕ್ಷಾದ ಒಳಗಿನ ಕೆಲವು ಭಾಗ ಗಳು ಸುಟ್ಟು ಹೋಗಿವೆ. ಪ್ರಯಾಣಿಕನ ಚೀಲದಲ್ಲಿದ್ದ ಪರಿಕರದಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ರಿಕ್ಷಾಕ್ಕೆ ಆಟೋ ಎಲ್‌ಪಿಜಿ ಕಿಟ್‌ ಅಳವಡಿಸಲಾಗಿತ್ತು. ಬೆಂಕಿಗೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ.

ಕಂನಾಡಿ ರೈಲು ನಿಲ್ದಾಣದ ಕಡೆಯಿಂದ ಸಂಜೆ 4.30ರ ಸುಮಾರಿಗೆ ಬರುತ್ತಿದ್ದ ಆಟೋರಿಕ್ಷಾಕ್ಕೆ ನಾಗುರಿ ಯಲ್ಲಿ ಓರ್ವ ಹತ್ತಿದ್ದು ಆತ ಪಂಪ್‌ವೆಲ್‌ ಕಡೆಗೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದ. ಅದರಂತೆ ರಿಕ್ಷಾ ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ.

ಆತಂಕ ಸೃಷ್ಟಿಸಿದ ಘಟನೆ
ಆಟೋರಿಕ್ಷಾದಲ್ಲಿ ಸ್ಫೋಟದ ಸದ್ದಿನ ಬಳಿಕ ದಟ್ಟ ಹೊಗೆ ಆವರಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತು. ಈ ವೇಳೆ ರಸ್ತೆಯಲ್ಲಿ ವಾಹನ ದಟ್ಟಣೆ ಇತ್ತು. ಅದೃಷ್ಟವಶಾತ್‌ ಪಕ್ಕದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನಗಳಿಗೆ ಆಟೋರಿಕ್ಷಾ ಢಿಕ್ಕಿಯಾಗಿಲ್ಲ. ಘಟನೆಯ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.

ಆತಂಕಗೊಳ್ಳುವ ಅಗತ್ಯವಿಲ್ಲ
ಪ್ರಯಾಣಿಕನ ಬ್ಯಾಗ್‌ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ಆಟೋ ಚಾಲಕ ಹೇಳಿದ್ದು ಬೆಂಕಿ ಹತ್ತಿಕೊಳ್ಳಲು ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಎಫ್ಎಸ್‌ಎಲ್‌ ತಂಡ ತಪಾಸಣೆ ನಡೆಸಲಿದೆ. ಪ್ರಯಾಣಿಕ ಮತ್ತು ಚಾಲಕ ಗೋರಿಗುಡ್ಡ ನಿವಾಸಿ ಪ್ರೇಮ್‌ರಾಜ್‌ ಕೊನಗಿ ಅವರಿಗೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರ್ವಜನಿಕರು ಆತಂಕ, ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ವದಂತಿಗಳನ್ನು ಹಬ್ಬಿಸಬಾರದು ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಹೇಳಿದ್ದಾರೆ.

Advertisement

ಪ್ರಯಾಣಿಕನ ಮೇಲೆ ಶಂಕೆ?
ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನನ್ನು ವಿಚಾರಿಸಿದಾಗ ಆತ ಅಸ್ಪಷ್ಟವಾಗಿ ಗೊಂದಲಕಾರಿ ಮಾಹಿತಿ ನೀಡಿದ್ದಾನೆ.

ಮೈಸೂರಿನಿಂದ ಬಂದಿರುವುದಾಗಿ ತಿಳಿಸಿದ್ದಾನೆ. ಸಹೋದರನ ಮೊಬೈಲ್‌ ಸಂಖ್ಯೆ ನೀಡಿದ್ದು ಅದಕ್ಕೆ ಪೊಲೀಸರು ಕರೆ ಮಾಡಿದಾಗ ನನ್ನ ಅಣ್ಣ ಬಾಬುರಾವ್‌ಗೆ ಕರೆ ಮಾಡಿ ಎಂದು ಹೇಳಿದ್ದಾನೆ. ಆತ ನೀಡಿದ ನಂಬರ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದಾತ “ಆತ ನನ್ನ ಸಂಬಂಧಿಕನಲ್ಲ, ಬಾಡಿಗೆ ರೂಂನಲ್ಲಿದ್ದ. ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ. ಬೇರೇನು ಗೊತ್ತಿಲ್ಲ ಎಂಬುದಾಗಿ ತಿಳಿಸಿದ್ದಾನೆ. ಆಟೋದಲ್ಲಿದ್ದ ಪ್ರಯಾಣಿಕ ಹಿಂದಿ ಭಾಷೆ ಮಾತನಾಡುತ್ತಿದ್ದ ಎಂದು ತಿಳಿದುಬಂದಿದೆ.

ರೈಲಿನಲ್ಲಿ ಬಂದಿದ್ದ?
ಆಟೋರಿಕ್ಷಾದಲ್ಲಿದ್ದಾತ ರೈಲಿನ ಮೂಲಕ ಮಂಗಳೂರಿಗೆ ಆಗಮಿಸಿ ನಿಲ್ದಾಣದಿಂದ ಸ್ವಲ್ಪ ಮುಂದೆ ಆಟೋ ಹತ್ತಿದ್ದ ಎಂದು ತಿಳಿದುಬಂದಿದೆ.

ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಶಾಸಕ ಯು.ಟಿ. ಖಾದರ್‌ ಒತ್ತಾಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next