ಮಂಗಳೂರು: ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ (55) ಅವರು ವೃತ್ತಿಯಲ್ಲಿ ದೈವ-ದೇವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದಾರೆ. ಉಜ್ಜೋಡಿ ಮಹಾಕಾಳಿ ಕೊರಗಜ್ಜ ಕ್ಷೇತ್ರದಲ್ಲಿ ವಿಶೇಷ ದಿನಗಳು, ಸಂಕ್ರಾಂತಿ, ವಾರ್ಷಿಕ ಉತ್ಸವಗಳ ಸಂದರ್ಭ ದೈವದ ಚಾಕರಿ ಮಾಡುತ್ತಾರೆ. ತನ್ನ ರಿಕ್ಷಾದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದರೂ ದೈವಭಕ್ತಿಯೇ ತನ್ನನ್ನು ಕಾಪಾಡಿದೆ ಎಂದು ನಂಬಿದ್ದಾರೆ ಅವರು ಮತ್ತು ಕುಟುಂಬಿಕರು, ಸ್ನೇಹಿತರು.
ದೈವಕ್ಕೆ ಬೂಳ್ಯ ಕೊಡುವ ಸಂಪ್ರದಾಯವನ್ನು ಅವರು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ. ಇದೇ ಅವರ ಜೀವ ಉಳಿಸಿದೆ ಎನ್ನವುದು ಸ್ನೇಹಿತ ವಲಯದಲ್ಲಿ ಕೇಳಿ ಬರುವ ಮಾತು.
ಆಟೋದಿಂದಲೇ ಜೀವನ:
25 ವರ್ಷಗಳಿಂದ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿರುವ ಪುರುಷೋತ್ತಮ ಪೂಜಾರಿ ಅವರು ಮಂಗಳೂರಿನ ಗೋರಿಗುಡ್ಡದಲ್ಲಿ ಪತ್ನಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಹಿರಿಯ ಮಗಳು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಕಿರಿಯ ಮಗಳು ಸಿಎ ಪರೀಕ್ಷೆ ಬರೆದಿದ್ದಾರೆ. ಪತ್ನಿ ಮನೆ ನಿರ್ವಹಣೆ ಮಾಡುತ್ತಿದ್ದಾರೆ.
Related Articles
ಕುಟುಂಬಕ್ಕೆ ಆಟೋ ರಿಕ್ಷಾವೇ ಪ್ರಮುಖ ಆಧಾರವಾಗಿತ್ತು. ರಿಕ್ಷಾದಲ್ಲಿ ದುಡಿದೇ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ಘಟನೆಯಿಂದ ಆಟೋಗೆ ಹಾನಿಯಾಗಿರುವುದು ಮಾತ್ರವಲ್ಲದೆ, ತನಿಖೆ ಕಾರಣಕ್ಕಾಗಿ ಸದ್ಯ ಪೊಲೀಸರು ವಾಪಾಸು ನೀಡುವ ಸಾಧ್ಯತೆ ಕಡಿಮೆ. ಹಿರಿಯ ಮಗಳಿಗೆ ಮದುವೆ ಕೂಡ ಫಿಕ್ಸ್ ಆಗಿದ್ದು ಇಂತಹ ಸಂದರ್ಭದಲ್ಲೇ ಘಟನೆ ನಡೆದಿರುವುದು ಕುಟುಂಬವನ್ನು ಕಂಗೆಡುವಂತೆ ಮಾಡಿದೆ.
ನೆರವಿನ ಭರವಸೆ:
ಪುರುಷೋತ್ತಮ ಪೂಜಾರಿ ಅವರನ್ನು ಸೋಮವಾರ ಕುದೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಬಿಲ್ಲವ ಬ್ರಿಗೇಡ್ ಸ್ಥಾಪಕ ಅಧ್ಯಕ್ಷ ಅವಿನಾಶ್ ಸುವರ್ಣ, ಕೃತಿನ್, ಗೆಜ್ಜೆಗಿರಿ ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ ಭೇಟಿಯಾಗಿ ಎಲ್ಲ ರೀತಿಯ ಸಹಾಯ ನೀಡುವುದದಾಗಿ ಭರವಸೆ ನೀಡಿದ್ದಾರೆ. ಬಳಿಕ ಪತ್ನಿ, ಮಕ್ಕಳ ಜತೆ ಸಮಾಲೋಚನೆ ನಡೆಸಿ ಅವರಿಗೂ ಧೈರ್ಯ ತುಂಬಿದರು.