Advertisement

ಮಂಗಳೂರು: ಎರಡು ದಿನಗಳ ಬೃಹತ್ ಗೋಮಂಡಲ ಕಾರ್ಯಕ್ರಮ

05:07 PM Dec 07, 2019 | Naveen |

ಮಂಗಳೂರು: ಮೈದಾನದ ಸುತ್ತಲೂ ಹಸುಕರುಗಳ ಹೊಸ ಲೋಕ..ಶಿವಲಿಂಗದೊಂದಿಗೆ 6 ಅಡಿ ಉದ್ದದ ನಂದಿಯ ಆಕರ್ಷಣೆ..ಸೌತಡ್ಕ ಮಹಾಗಣಪತಿ ದೇವಸ್ಥಾನದ ಮಾದರಿಯಲ್ಲಿ ಪೂಜಿತ ಗೋಪಾಲಕೃಷ್ಣ..ಆಕರ್ಷಣೀಯ ಅಯೋಧ್ಯೆ ರಾಮ ಮಂದಿರದ ಮಾದರಿ..

Advertisement

ನೆಹರೂ ಮೈದಾನದಲ್ಲಿ ಎರಡು ದಿನ ಕಾಲ ನಡೆಯುವ ಬೃಹತ್ ಗೋಮಂಡಲ ಕಾರ್ಯಕ್ರಮದಲ್ಲಿ ಶನಿವಾರ ಕಂಡು ಬಂದ ಚಿತ್ರಣಗಳಿವು.

ಪಜೀರು ಬೀಜಗುರಿ ಗೋವನಿತಾಶ್ರಯ ಟ್ರಸ್ಟ್ ನ ಸಾರ್ಥಕ ಗೋಸೇವೆಗೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗೋ ಸಂರಕ್ಷಣೆ ಮತ್ತು ಗೋ ಸಂವರ್ಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಗೋಮಂಡಲ ಎಂಬ ವಿಶೇಷ ಕಾರ್ಯಕ್ರಮ ರವಿವಾರದವರೆಗೆ ನಡೆಯುತ್ತಿದೆ. ಟ್ರಸ್ಟ್ ಆಶ್ರಯದ ಕಪಿಲಾ, ಅಮೃತಾ, ಗಂಗಾ ಮತ್ತು ಗೌರಿ ಹಟ್ಟಿಗಳಲ್ಲಿರುವ 100 ದನಕರುಗಳನ್ನು ಗೋಮಂಡಲದ ಸುತ್ತ ಕಟ್ಟಿ ಹಾಕಲಾಗಿದ್ದು, ನೆಹರೂ ಮೈದಾನದ ತುಂಬೆಲ್ಲ ನಂದಗೋಕುಲವೇ ಸೃಷ್ಟಿಯಾಗಿದೆ. ಈ ಎಲ್ಲ ಗೋವುಗಳಿಗೆ ಗೋಪೂಜೆ ನೆರವೇರಿಸಲಾಯಿತು. ರವಿವಾರವೂ ಗೋವುಗಳು ಪೂಜಿಸಲ್ಪಡಲಿವೆ.

Advertisement

ಅಯೋಧ್ಯೆ ರಾಮ ಮಂದಿರ
ಶಾರದಾ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ರೋಹಿತ್ ರಚಿಸಿದ ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಅಯೋಧ್ಯೆಯ ರಾಮ ಮಂದಿರವೇ ನೆಹರೂ ಮೈದಾನದಲ್ಲಿ ಸೃಷ್ಟಿಯಾದಂತೆ ಭಾಸವಾಗುವಂತಿದೆ ಈ ಮಾದರಿ. ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಮಾದರಿ ಗೋಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಅಲ್ಲದೆ, ಬೃಹತ್ ಗಾತ್ರದ ಶಿವಲಿಂಗ, ಪಕ್ಕದಲ್ಲಿರುವ ೬ ಅಡಿ ಉದ್ದದ ನಂದಿ (ಹೋರಿ) ಇದ್ದು, ನೋಡುಗರನ್ನು ಆಕರ್ಷಿಸುತ್ತಿದೆ. ಈ ನಂದಿಯು ಗೋವನಿತಾಶ್ರಯ ಟ್ರಸ್ಟ್ನ ಹಟ್ಟಿಯಲ್ಲಿರುವ ಬೃಹತ್ ಗಾತ್ರದ ಹೋರಿಯಾಗಿದೆ.

ಸೌತಡ್ಕ ದೇವಳ ಮಾದರಿ
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ದೇವರನ್ನು ಪೂಜಿಸುವ ರೀತಿಯ ಮಾದರಿಯೊಂದನ್ನು ಮೈದಾನದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ಗೋಪಾಲಕೃಷ್ಣ ದೇವರ ಪ್ರತಿಮೆಯನ್ನಿಟ್ಟು ಪೂಜೆ ನೆರವೇರಿಸಲಾಗುತ್ತಿದೆ. ದೇವರ ದರ್ಶನದೊಂದಿಗೆ ಪ್ರಸಾದ ಸ್ವೀಕರಿಸುವ ಅವಕಾಶವನ್ನು ಇಲ್ಲಿ ಭಕ್ತರಿಗೆ ನೀಡಲಾಗಿದೆ. ಇದರ ಮುಂಭಾಗದಲ್ಲಿ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು.

74 ದೇಶಗಳ ಅಂಚೆಚೀಟಿ
72900 ಚ.ಅಡಿ ಜಾಗದಲ್ಲಿ ಗೋ ಮಂಡಲ ನಡೆಯುತ್ತಿದೆ. ಹೊರ ಭಾಗದಲ್ಲಿ ವಿವಿಧ ಸ್ಟಾಲ್‌ಗಳನ್ನು ಇರಿಸಲಾಗಿದ್ದು, ಪ್ರಶಾಂತ್ ಶೇಟ್ ಅವರು ಸಂಗ್ರಹಿಸಿದ 74 ದೇಶಗಳ ಗೋವಿನ ಚಿತ್ರವುಳ್ಳ ಅಂಚೆಚೀಟಿ ಪ್ರದರ್ಶನ ಗಮನ ಸೆಳೆಯಿತು. ಸಾವಯವ ವಸ್ತುಗಳ ಮಳಿಗೆ, ದೇಸೀಯ ಉತ್ಪನ್ನಗಳ ಮಳಿಗೆಗಳು ಸಹಿತ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಿದ್ದವು. ಆಗಮಿಸಿದ ಗೋಭಕ್ತರು, ಮಕ್ಕಳು ದನಕರುಗಳ ನಡುವೆ ಸೆಲೀ ತೆಗೆದು ಸಂಭ್ರಮಿಸಿದರು.

ಕರುಗಳ ಮಧ್ಯೆ ಮುದ್ದು ಕೃಷ್ಣರು
ಕಾರ್ಯಕ್ರಮದ ಭಾಗವಾಗಿ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಸ್ಪರ್ಧಾಳು ಮಕ್ಕಳು ಮುದ್ದುಕರುಗಳ ಮಧ್ಯೆ ವೇಷ ಹಾಕಿ ಸಂಭ್ರಮಿಸಿದರು.

ಶ್ರೀ ಮೂಕಪ್ಪ ಸ್ವಾಮಿ ದರ್ಶನ
ಹಾವೇರಿಯ ಅಪರೂಪದ ಶ್ರೀ ಮೂಕಪ್ಪ ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಸವರೂಪಿಯಾದ ಮೂಕಪ್ಪ ಸ್ವಾಮಿಯನ್ನು ಬೆಳಗ್ಗೆ ಶಾರದಾ ವಿದ್ಯಾಲಯದಲ್ಲಿ ಸ್ವಾಗತ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆ ವೇಳೆ ವೇದಿಕೆಗೆ ಕರೆದೊಯ್ಯಲಾಯಿತಾದರೂ, ವೇದಿಕೆ ಏರದೇ, ಕೆಳಗಡೆ ನಿಂತ ಮೂಕಪ್ಪ ಸ್ವಾಮಿಯನ್ನು ಸ್ವಲ್ಪ ಹೊತ್ತಿನ ಬಳಿಕ ಸ್ವಾಗತ ಮಾಡಿ ವೇದಿಕೆಗೆ ಏರಿಸಲಾಯಿತು. ವೇದಿಕೆಯಲ್ಲೇ ಗೋಗ್ರಾಸ ನೀಡಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next