Advertisement

Train ಮಂಗಳೂರು-ಬೆಂಗಳೂರು ರೈಲು ಮಾರ್ಗ: ಮಣ್ಣು ತೆರವು ನಡುವೆಯೇ ಮತ್ತೆ ಕುಸಿತ ಭೀತಿ

12:52 AM Aug 12, 2024 | Team Udayavani |

ಸುಬ್ರಹ್ಮಣ್ಯ: ಮಂಗಳೂರು -ಬೆಂಗಳೂರುರೈಲು ಮಾರ್ಗದ ಸಕಲೇಶಪುರ- ಬಲ್ಲುಪೇಟೆ ನಡುವಿನ ಸಕಲೇಶಪುರ ಸಮೀಪದ ಆಚಂಗಿ ವ್ಯಾಪ್ತಿಯಲ್ಲಿ ರೈಲು ಮಾರ್ಗಕ್ಕೆ ಗುಡ್ಡ ಕುಸಿದು ರೈಲು ಸಂಚಾರ ಸ್ಥಗಿತಗೊಂಡಿದ್ದು, ಮಣ್ಣು ತೆರವು ಕಾರ್ಯ ರವಿವಾರವೂ ಮುಂದುವರಿಯಿತು.

Advertisement

ಆ.10ರ ಮುಂಜಾನೆ ವೇಳೆ ಗುಡ್ಡ ಕುಸಿದ ಕಾರಣ ಈ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ಎಲ್ಲ ರೈಲುಗಳನ್ನು ಸ್ಥಗಿತ ಮಾಡಿ ಮಣ್ಣು ತೆರವು ಕಾರ್ಯ ಕಾಮಗಾರಿ ಆರಂಭಿಸಲಾಗಿದೆ.

ಶನಿವಾರ ಕಾಮಗಾರಿ ನಡೆಯುತ್ತಿದ್ದ ವೇಳೆಯೇ ಮತ್ತೆ ಮಣ್ಣು ಕುಸಿದಿದ್ದು, ಅದರಡಿಯಲ್ಲಿ ಹಿಟಾಚಿ ಸಿಲುಕಿಕೊಂಡಿತ್ತು. ಅದೃಷ್ಟವಶಾತ್‌ ಹಿಟಾಚಿಯಲ್ಲಿದ್ದವರು ಪಾರಾಗಿದ್ದರು. ಮಣ್ಣು ತೆರವು ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಎರಡೂ ಭಾಗದಿಂದ ಮತ್ತೆ ಮಣ್ಣು ಕುಸಿಯುವ ಭೀತಿ ಎದುರಾಗಿದೆ.

ಆದ್ದರಿಂದ ಕುಸಿತದ ಭೀತಿಯಲ್ಲಿರುವ ಮಣ್ಣನ್ನು ತೆರವು ಮಾಡಬೇಕಾಗಿದೆ.

ಮಣ್ಣು ತೆರವು ಮುಗಿದು, ಹಳಿ ದುರಸ್ತಿಪಡಿಸಿ, ಸಂಚಾರಕ್ಕೆ ಯೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ರೈಲು ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏನಿದ್ದರೂ ಇನ್ನೆರಡು ದಿನಗಳ ರೈಲು ಸಂಚಾರ ಸ್ಥಗಿತವಾಗಿರುವ ಸಾಧ್ಯತೆಯೇ ಹೆಚ್ಚು.

Advertisement

ಈಗ ಮಣ್ಣು ತೆರವು ಮಾಡುತ್ತಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮತ್ತೆ ಗುಡ್ಡ ಕುಸಿತಗೊಂಡಿದ್ದು, ಇದರಿಂದ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ. ಬೃಹತ್‌ ಗಾತ್ರದ ಬಂಡೆಗಳೂ ಹಳಿಗೆ ಬಿದ್ದಿದ್ದು, ಅವುಗಳನ್ನು ತಂಡು ಮಾಡಿ ಸಾಗಿಸಬೇಕಾಗಿದೆ. ಹಳಿಯಲ್ಲೇ ಬಂಡೆಯನ್ನು ಕತ್ತರಿಸುವ ಕೆಲಸ ಕಠಿನವಾಗಿದೆ ಎನ್ನಲಾಗಿದೆ.

ಭೂಕುಸಿತ ಸಹಿತ ಕೆಲವು ಕಾರಣಗಳಿಂದ ಎರಡು ವಾರಗಳಿಂದ ಸಮರ್ಪಕ ರೈಲು ಸೇವೆ ಇಲ್ಲದ ಕಾರಣ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.