Advertisement

ಐಸಿಸ್‌ ಪ್ರಾಂತ್ಯ ತೆರೆಯಲು ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಶಾರೀಕ್‌ ಸುತ್ತಾಟ

09:25 PM Nov 24, 2022 | Team Udayavani |

ಬೆಂಗಳೂರು: ಮಂಗಳೂರು ಕುಕ್ಕರ್‌ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೀರ್ಥಹಳ್ಳಿಯ ಮೊಹಮ್ಮದ್‌ ಶಾರೀಕ್‌ ಕಳೆದ ಕೆಲ ತಿಂಗಳಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ರಾಜ್ಯಗಳ ಗಡಿ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದು, ಈ ಮೂಲಕ ಐಸಿಸ್‌ ಉಗ್ರ ಸಂಘಟನೆ ದಕ್ಷಿಣ ಭಾರತದ ಕಾಡಿನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಪ್ರಾಂತ್ಯ ಸ್ಥಾಪಿಸಲು ಸಿದ್ಧತೆ ನಡೆಸಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

Advertisement

ಈ ಹಿಂದೆ ಅಲ್‌-ಹಿಂದ್‌ ಸಂಘಟನೆ ತೀರ್ಥಹಳ್ಳಿಯ ಮೊಹಮ್ಮದ್‌ ಮತೀನ್‌ ತಾಹಾ ಕೂಡ ಕೆಲ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದ. ಆ ವೇಳೆ ಶಾರೀಕ್‌ ಕೂಡ ಜತೆಗೆ ಹೋಗಿದ್ದ. ಆದರೆ. ಮತೀನ್‌ ವಿರುದ್ಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು, ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಶೋಧಿಸಲು ಆರಂಭಿಸಿದಾಗ ತಲೆಮರೆಸಿಕೊಂಡಿದ್ದ. ಆಗ ಆತನ ಕೆಲ ಯೋಜನೆಗಳು ಅರ್ಧಕ್ಕೆ ನಿಂತಿತ್ತು. ಜತೆಗೆ ಈಗಾಗಲೇ ಕೇರಳ ಮತ್ತು ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ಪ್ರಾಂತ್ಯ ಸ್ಥಾಪಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಪೂರ್ಣಗೊಂಡಿರಲಿಲ್ಲ,. ಹೀಗಾಗಿ ಮತ್ತೂಮ್ಮೆ ಶಾರೀಕ್‌ಗೆ ನಾಲ್ಕು ರಾಜ್ಯಗಳಲ್ಲಿ ಓಡಾಟ ನಡೆಸಲು ಸೂಚಿಸಿದ್ದ ಎಂಬುದು ಗೊತ್ತಾಗಿದೆ.

ಶಿವಮೊಗ್ಗದ ತುಂಗಾ ನದಿ ತಟದಲ್ಲಿ ಸುಧಾರಿತಾ ಸ್ಫೋಟಕ ಸಾಧನ(ಐಇಡಿ) ತಯಾರಿಕಾ ಪ್ರಕರಣದಲ್ಲಿ ತಲೆಮರೆಸಿಕೊಂಡ ಬಳಿಕ ಮತೀನ್‌ ಸೂಚನೆ ಮೇರೆಗೆ ಕರ್ನಾಟಕದ ಬಂಡೀಪುರ, ಕೋಲಾರ, ಕೊಡಗು, ಕೇರಳದ ಕಣ್ಣೂರು, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿರುವ ಒಟ್ಟು ಐದಾರು ಅರಣ್ಯ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮತೀನ್‌ಗೆ ಟೆಲಿಗ್ರಾಂ ಮೂಲಕ ಕಳುಹಿಸಿದ್ದ. ಎಂದು ಮೂಲಗಳು ತಿಳಿಸಿವೆ.

ಒಂದೊಂದು ಪ್ರಾಂತ್ಯದಲ್ಲಿ 50ರಿಂದ 100 ಮಂದಿ ಉಗ್ರರು ಕಾರ್ಯನಿರ್ವಹಿಸುವಂತೆ ಮಾಡುವುದು ಸಂಘಟನೆ ಉದ್ದೇಶವಾಗಿತ್ತು. ಇಲ್ಲಿಯೇ ತರಬೇತಿ ನೀಡಿ ವಿಧ್ವಂಸಕ  ಕೃತ್ಯಗಳು ಮತ್ತು ಹಿಂದೂ ಮುಖಂಡರು ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿಗೆ ಸಂಚು ರೂಪಿಸಲಾಗಿತ್ತು. ಹೀಗಾಗಿ ಶಾರೀಕ್‌ ಧಾರ್ಮಿಕ ಕೇಂದ್ರಗಳು ಮತ್ತು ಹಿಂದೂ ಮುಖಂಡರು ಹೆಚ್ಚು ಸಕ್ರಿಯವಾಗಿರುವ ಪ್ರದೇಶಗಳ ಸಮೀಪದಲ್ಲಿರುವ ಅರಣ್ಯ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವುಗಳ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ಟೆಲಿಗ್ರಾಂ ಮತ್ತು ಇತರೆ ಡಾರ್ಕ್‌ವೆಬ್‌ ಮೂಲಕ ಕಳುಹಿಸಿದ್ದ.

ಈ ಮಧ್ಯೆ 2020ರ ಸುದ್ದುಗುಂಟೆಪಾಳ್ಯ ಪ್ರಕರಣದ ಕೆಲ ಆರೋಪಿಗಳು ಅರಣ್ಯ ಪ್ರದೇಶದದಲ್ಲಿ ಇಸ್ಲಾಮಿಕ್‌ ಸ್ಟೇಟ್‌ನ ಟೀ ಶರ್ಟ್‌ ಧರಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದರು. ಆ ಫೋಟೋ ವೈರಲ್‌ ಕೂಡ ಆಗಿತ್ತು. ಹೀಗಾಗಿ ಆ ಸ್ಥಳವನ್ನು ಪತ್ತೆ ಹಚ್ಚಲು ಕೇಂದ್ರ ತನಿಖಾ ಸಂಸ್ಥೆಗಳು ಮುಂದಾಗಿದ್ದವು. ಈ ಮಧ್ಯೆ ಶಾರೀಕ್‌ ಕೂಡ ಈ ತಂಡದ ಸದಸ್ಯರ ಜತೆ ಅರಣ್ಯ ಪ್ರದೇಶದಲ್ಲಿ ಐಸಿಸ್‌ ಪ್ರಾಂತ್ಯ ಸ್ಥಾಪಿಸುವ ಯೋಜನಾ ತಂಡದಲ್ಲಿದ್ದ ಎಂದು ಹೇಳಲಾಗಿತ್ತು. ಹೀಗಾಗಿ ಆತನ ಮೊಬೈಲ್‌ ಅನ್ನು ಸಂಪೂರ್ಣವಾಗಿ ರಿಟ್ರೈವ್‌ ಮಾಡಲಾಗುತ್ತಿದೆ. ಈ ಮೊದಲು ಇಸ್ಲಾಮಿಕ್‌ ಸ್ಟೇಟ್‌ನ ಸದಸ್ಯರು ಶಿವನಸಮುದ್ರ ಮತ್ತು ತಮಿಳುನಾಡಿನ ರತ್ನಗಿರಿ ಕಾಡಿನಲ್ಲಿ ಸ್ಥಳ ಗುರುತಿಸಿ, ಶಸ್ತ್ರಾಸ್ತ್ರ ತರಬೇತಿಗೆ ಸಿದ್ದತೆ ನಡೆಸಿದ್ದರು. ಅಲ್ಲದೆ, ಕೋಲಾರ, ಕೊಡಗು ಭಾಗದಲ್ಲೂ ಸ್ಥಳ ಶೋಧಿಸಿ ಗುರುತಿಸಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

ಹಿಂದೂ ಮುಖಂಡರು, ದೇವಾಲಯಗಳೇ ಟಾರ್ಗೆಟ್‌:

ಐಸಿಸ್‌ ಸಂಘಟನೆ ಮತ್ತು ಅದರ ಪ್ರೇರಿತ ಸಂಘಟನೆಗಳಾದ ಅಲ್‌-ಉಮಾ ಮತ್ತು ಅಲ್‌-ಹಿಂದ್‌ ಸಂಘಟನೆಗಳು ಹಿಂದೂ ಮುಖಂಡರು ಮತ್ತು ದೇವಾಲಯಗಳೇ ಟಾರ್ಗೆಟ್‌ ಆಗಿವೆ. 2019ರಲ್ಲಿ ತಮಿಳುನಾಡಿನಲ್ಲಿ ಹಿಂದೂ ಮುಖಂಡ ಸುರೇಶ್‌ ಹತ್ಯೆಗೈಯಲಾಗಿತ್ತು. ನಂತರ ಬೆಂಗಳೂರಿನಲ್ಲಿ ಹಿಂದೂ ಮುಖಂಡರಿಗಾಗಿ ಶೋಧಿಸುವಾಗ ಸುದ್ದುಗುಂಟೆಪಾಳ್ಯದಲ್ಲಿ ಶಂಕಿತರನ್ನು ಬಂಧಿಸಲಾಗಿತ್ತು. ಶಿವಮೊಗ್ಗದಲ್ಲಿ ನಡೆದ ಸಾವರ್ಕರ್‌ ಗಲಾಟೆ ವೇಳೆ ಯಾರಾದರೂ ಹಿಂದೂ ಮುಖಂಡನ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆದರೆ, ಪೊಲೀಸರು ಕ್ಷೀಪ್ರಕಾರ್ಯಾಚರಣೆ ನಡೆಸಿದ್ದರಿಂದ ಅದು ವಿಫ‌ಲಗೊಂಡಿತ್ತು. ಆ ಬಳಿಕವೂ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ತೀವ್ರಗಾವಿ ಹಿಂದೂ ಮುಖಂಡರಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಅಲ್ಲದೆ, ಹಿಂದೂಗಳ ಪರವಾಗಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು ಕೂಡ ಸಂಘಟನೆ ಗುರಿಯಾಗಿತ್ತು ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

– ಮೋಹನ್‌ ಭದ್ರಾವತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next