Advertisement

ಕೊರೊನಾ ಭೀತಿಗೆ ಮಂಗಳೂರು ಏರ್‌ಪೋರ್ಟ್‌ ಶಟ್‌ಡೌನ್‌ ಸಾಧ್ಯತೆ !

09:52 AM Mar 28, 2020 | mahesh |

ಮಹಾನಗರ: ಕೋವಿಡ್-19 ಆತಂಕದಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ರದ್ದಾದ ಬೆನ್ನಿಗೆ ಇದೀಗ ದೇಶೀಯ ವಿಮಾನಯಾನ ಸೇವೆಯೂ ಸಂಪೂರ್ಣ ಸ್ಥಗಿತದ ಬಗ್ಗೆ ಶೀಘ್ರವೇ ಕೇಂದ್ರ ಸರಕಾರದಿಂದ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.

Advertisement

ಒಂದು ವೇಳೆ ಕೋವಿಡ್-19 ಹರಡದಂತೆ ದೇಶದ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಂಡರೆ, ಇದೇ ಮೊದಲ ಬಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸಂಪೂರ್ಣ ಶಟ್‌ಡೌನ್‌ ಆಗುವ ಸಾಧ್ಯತೆಯಿದೆ.

ಸದ್ಯದ ಮಾಹಿತಿ ಪ್ರಕಾರ, ಬುಧವಾರದಿಂದ ದೇಶೀಯ ವಿಮಾನ ಸೇವೆ ಎಲ್ಲ ಏರ್‌ಪೋರ್ಟ್‌ ಗಳಿಂದ ರದ್ದುಗೊಳ್ಳಲಿದೆ. ಒಂದುವೇಳೆ ರದ್ದಾದರೆ ಮಂಗಳೂರು ಏರ್‌ಪೋರ್ಟ್‌ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಎಲ್ಲ ವಿಮಾನ ಸೇವೆಯು ಸ್ಥಗಿತವಾದಂತಾಗುತ್ತದೆ.

ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತೀ ದಿನ 26 ಆಗಮನ, 26 ನಿರ್ಗಮನ ವಿಮಾನ ನಿರ್ವಹಣೆಯಾಗುತ್ತದೆ. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಈ ಸಂಖ್ಯೆಯಲ್ಲಿ ಭಾರೀ ವ್ಯತ್ಯಯವಾಗುತ್ತಿದೆ. ಅಂತಾರಾಷ್ಟ್ರೀಯ ವಿಮಾನಯಾನ ರವಿವಾರದಿಂದ (ಮಾ. 22) ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೇವಲ ದೇಶೀಯ ವಿಮಾನಯಾನ ಸೇವೆ ಮಾತ್ರ ಮಂಗಳೂರು ಏರ್‌ಪೋರ್ಟ್‌ನಿಂದ ನಡೆಯುತ್ತಿದೆ. ಸಾಮಾನ್ಯವಾಗಿ ಪ್ರತೀ ದಿನ 19 ಆಗಮನ, 19 ನಿರ್ಗಮನ ದೇಶೀಯ ವಿಮಾನಯಾನ ಸೇವೆ ಮಂಗಳೂರು ಏರ್‌ಪೋರ್ಟ್‌ ಮೂಲಕ ನಡೆಯುತ್ತಿತ್ತು. ಸದ್ಯ ಕೊರೊನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆ ಕಾರಣದಿಂದ ಈ ಸಂಖ್ಯೆ ಸೋಮವಾರ 9ಕ್ಕೆ ಇಳಿಕೆಯಾಗಿತ್ತು. ಪರಿಣಾಮವಾಗಿ ಏರ್‌ಪೋರ್ಟ್‌ ವ್ಯಾಪ್ತಿಯಲ್ಲಿ ಜನರ ಸಂಖ್ಯೆ ಹಾಗೂ ಪಾರ್ಕಿಂಗ್‌ನಲ್ಲಿ ವಾಹನಗಳ ಸಂಖ್ಯೆ ಭಾರೀ ಕಡಿಮೆಯಾಗಿದೆ.

ದೇಶೀಯ ವಿಮಾನಗಳಿಂದ ಆಗಮಿಸುವ, ನಿರ್ಗಮಿಸುವ ಪ್ರಯಾಣಿಕರನ್ನು ಸೂಕ್ತ ಆರೋಗ್ಯ ತಪಾಸಣೆ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಜತೆಗೆ ಬೇರೆ ಬೇರೆ ನಗರಗಳಿಂದ ಈ ವಿಮಾನದ ಮೂಲಕ ಬರುವ ಜ್ವರ ಪೀಡಿತರು ವಿಮಾನಯಾನ ಸೇವೆಗೂ ಬಹುದೊಡ್ಡ ಆತಂಕ ಸೃಷ್ಟಿಸಿದ್ದರು. ಹಾಗಾಗಿ ದೇಶೀಯ ವಿಮಾನ ಸೇವೆಗೂ ಬ್ರೇಕ್‌ ನೀಡಲು ಇದೀಗ ಸಿದ್ಧತೆ ನಡೆದಿದೆ.

Advertisement

1951ರಲ್ಲಿ ಆರಂಭವಾದ ಏರ್‌ಪೋರ್ಟ್‌
ಮದರಾಸು ಅಧಿಪತ್ಯದಲ್ಲಿದ್ದ ಮಂಗಳೂರಿನಲ್ಲಿ ಕೇಂದ್ರ ಸರಕಾರದ ನಾಗರಿಕ ವಿಮಾನಯಾನ ಇಲಾಖೆಯು ವಿಮಾನ ನಿಲ್ದಾಣವನ್ನು ಬಜಪೆಯ 140 ಎಕರೆ ಪ್ರದೇಶದಲ್ಲಿ (ಮಂಗಳೂರಿನಿಂದ 20 ಕಿ.ಮೀ. ದೂರ) 1951ರಲ್ಲಿ ನಿರ್ಮಿಸಿತ್ತು. ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಡಿ. 25ರಂದು “ಡಿ.ಸಿ.-3 ಡಕೋಟಾ’ ವಿಮಾನದಲ್ಲಿ ಬಜಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದು ಉದ್ಘಾಟನೆ ನೆರವೇರಿಸಿದ್ದರು. ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾನ್ಯತೆ ಪಡೆದ‌ ಮಂಗಳೂರು ವಿಮಾನ ನಿಲ್ದಾಣ ಲಕ್ಷಾಂತರ ಜನರ ಆಗಮನ-ನಿರ್ಗಮನ ಹಾಗೂ ಕಾರ್ಗೋ ಸಾಗಾಟದ ಮೂಲಕ ಗಮನಸೆಳೆದಿದೆ. ದೇಶ-ವಿದೇಶದ ಮೂಲೆ ಮೂಲೆಗೆ ಸಂಪರ್ಕ ಕೊಂಡಿಯಾಗಿ ಏರ್‌ಪೋರ್ಟ್‌ ಸಂಬಂಧ ಬೆಸೆದಿದೆ. ಮಂಗಳೂರು ಏರ್‌ಪೋರ್ಟ್‌ನಿಂದ ದುಬಾೖ, ಬೆಹರಿನ್‌, ಕುವೈಟ್‌, ದಮಾಮ್‌, ಮಸ್ಕತ್‌, ಅಬುಧಾಬಿ, ದೋಹಾ ಸಹಿತ ವಿದೇಶಗಳಿಗೆ, ಮುಂಬಯಿ, ಬೆಂಗಳೂರು, ಚೆನ್ನೈ, ಹೈದರಾಬಾದ್‌ ಸಹಿತ ದೇಶದ ವಿವಿಧ ಭಾಗಗಳಿಗೆ ವಿಮಾನ ಸೇವೆ ಇದೆ. ಮಂಗಳೂರು ಏರ್‌ಪೋರ್ಟ್‌ ಟರ್ಮಿನಲ್‌ ಕಟ್ಟಡ ವಿಸ್ತೀರ್ಣ ಸದ್ಯ 19,500 ಚದರ ಮೀ. ಇದ್ದು, ಹೆಚ್ಚುವರಿಯಾಗಿ 11,343 ಚದರ ಮೀಟರ್‌ ಸೇರ್ಪಡೆಗೊಳ್ಳಲಿದ್ದು, 2020ರಲ್ಲಿ ಪೂರ್ಣಗೊಳ್ಳಲಿದೆ.

ಆರೋಗ್ಯ ತಪಾಸಣೆ ಆರಂಭ
ರವಿವಾರದವರೆಗೆ ಅಂತಾರಾಷ್ಟ್ರೀಯ ವಿಮಾನದ ಪ್ರಯಾಣಿಕರನ್ನು ಏರ್‌ಪೋರ್ಟ್‌ ನಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಆದರೆ, ದೇಶೀಯ ವಿಮಾನಗಳಿಗೆ ಈ ತಪಾಸಣೆ ಇರಲಿಲ್ಲ. ಆದರೆ, ಸೋಮವಾರ ಬೆಳಗ್ಗಿನಿಂದ ದೇಶೀಯ ವಿಮಾನ ಪ್ರಯಾಣಿಕರಿಗೂ ತಪಾಸಣೆ ಆರಂಭಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಏರ್‌ಪೋರ್ಟ್‌ ನಲ್ಲಿ ಕಾರ್ಯ ಆರಂಭಿಸಿದ್ದಾರೆ.
 -ಡಾ| ರಾಜೇಶ್‌, ಆರೋಗ್ಯಾಧಿಕಾರಿ-ದ.ಕ.

Advertisement

Udayavani is now on Telegram. Click here to join our channel and stay updated with the latest news.

Next