Advertisement

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ 2 ವರ್ಷ: ಆರೋಪಿಯ ವಿಚಾರಣೆ ಬಹುತೇಕ ಪೂರ್ಣ

10:25 PM Jan 20, 2022 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ ಪ್ರಕರಣಕ್ಕೆ 2 ವರ್ಷಗಳಾಗಿದ್ದು, ಆರೋಪಿ ಆದಿತ್ಯ ರಾವ್‌ (39) ನಗರದ ಸಬ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

Advertisement

ವಿಚಾರಣೆ ಬಹುಪಾಲು ಪೂರ್ಣ ಗೊಂಡಿದೆ. ಕೆಲವು ವಿಚಾರಣೆಗಳಿಗೆ ಖುದ್ದಾಗಿಯೂ ಇನ್ನೂ ಕೆಲವಕ್ಕೆ ವೀಡಿಯೋ ಕಾನ್ಫರೆನ್ಸ್‌ ಮೂಲಕವೂ ಹಾಜರಾಗಿದ್ದಾನೆ. ತನಿಖಾ ಧಿಕಾರಿಯ ವಿಚಾರಣೆ ಮತ್ತು ಹೇಳಿಕೆ ಪಡೆಯಲು ಬಾಕಿ ಇದೆ. ಕೊರೊನಾ 2ನೇ ಅಲೆಯ ಕಾರಣ ಸ್ವಲ್ಪ ವಿಳಂಬವಾಗಿದೆ. ಆರೋಪಿಯ ಕೈಬರಹ ಮತ್ತಿತರ ಕೆಲವೇ ವಿಚಾರಣೆ ಬಾಕಿ ಇದೆ.

ಆದಿತ್ಯ ತನ್ನ ಪರವಾಗಿ ಯಾವುದೇ ವಕೀಲರನ್ನು ನೇಮಿಸಿಕೊಂಡಿಲ್ಲ. ಸರಕಾರಿ ವಕೀಲರನ್ನು ನೇಮಿಸಲು ಅವಕಾಶ ನೀಡಿದ್ದರೂ ನಿರಾಕರಿಸಿದ್ದಾನೆ ಎನ್ನಲಾಗಿದೆ.

ಪ್ರಕರಣದ ವಿವರ:

ಆರೋಪಿ ಆದಿತ್ಯ 2020ರ ಜ. 20ರಂದು ಬೆಳಗ್ಗೆ ವಿಮಾನ ನಿಲ್ದಾಣದ ಟರ್ಮಿನಲ್‌ ಬಿಲ್ಡಿಂಗ್‌ನ ಟಿಕೆಟ್‌ ಕೌಂಟರ್‌ ಬಳಿ ಪ್ರಯಾಣಿಕರು ಕುಳಿತುಕೊಳ್ಳುವ ಕುರ್ಚಿಯಲ್ಲಿ ಬಾಂಬ್‌ ಇರುವ ಬ್ಯಾಗ್‌ ಇರಿಸಿ ಬಳಿಕ ಪಾರ್ಕಿಂಗ್‌ ಪ್ರದೇಶದಲ್ಲಿದ್ದ ಆಟೋ ರಿಕ್ಷಾ ಏರಿ ಹೋಗಿದ್ದನು.

Advertisement

ಅನುಮಾನಾಸ್ಪದ ಬ್ಯಾಗನ್ನುಕಂಡ ನಿಲ್ದಾಣದ ಅಧಿಕಾರಿಗಳು ತಜ್ಞರಿಂದ ಪರಿಶೀಲನೆಗೆ ಒಳಪಡಿಸಿದಾಗ ಸ್ಫೋಟಕ ಪತ್ತೆಯಾಗಿತ್ತು. ಬಳಿಕ ಕೆಂಜಾರಿನ ನಿರ್ಜನ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು.ಆರೋಪಿ ಬೆಂಗಳೂರಿಗೆ ತೆರಳಿ ಜ. 22ರಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದನು. ಹಲಸೂರು ಗೇಟ್‌ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ಮಂಗಳೂರಿನ ಪೊಲೀಸರು ಬೆಂಗಳೂರಿಗೆ ತೆರಳಿ ಮಂಗಳೂರಿಗೆ ಕರೆ ತಂದಿದ್ದರು.

ತನಿಖೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ  ಮಂಗಳೂರು ಪೊಲೀಸರು ಪುನಃ ಕಸ್ಟಡಿಗೆ ಪಡೆದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಎರಡು ವರ್ಷಗಳಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಮಾತು ಕಡಿಮೆ :

ಜೈಲಿನಲ್ಲಿರುವ ಆದಿತ್ಯ ಬಹುತೇಕ ಮೂಡಿಯಾಗಿರುತ್ತಾನೆ. ವಿಕ್ಷಿಪ್ತ ಮನೋಭಾವ ಆತನದಾಗಿದ್ದು, ಸಹ ಕೈದಿಗಳ ಜತೆ ಬೆರೆಯುವುದು ಅಥವಾ ಮಾತನಾಡುವುದು ತೀರಾ ಕಡಿಮೆ. ಯಾರಾದರೂ ಮಾತನಾಡಿಸಿದರೆ ಮಾತ್ರ ಮಾತನಾಡುತ್ತಾನೆ. ದೈಹಿಕವಾಗಿ ಆರೋಗ್ಯದಿಂದ ಇದ್ದಾನೆ ಎಂದು ಜೈಲಿನ ಮೂಲಗಳು ತಿಳಿಸಿವೆ.

700 ಪುಟಗಳ  ಆರೋಪ ಪಟ್ಟಿ :

ತನಿಖಾಧಿಕಾರಿಯಾಗಿದ್ದ ಆಗಿನ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ತನಿಖೆಯನ್ನು ಪೂರ್ಣಗೊಳಿಸಿ 700 ಪುಟಗಳ ಆರೋಪ ಪಟ್ಟಿಯನ್ನು  ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕೊರೊನಾ ಪ್ರಯುಕ್ತ ಬಾಕಿ ಉಳಿದಿದ್ದ ಗುರುತು ಪತ್ತೆ ಪರೇಡ್‌ ಮತ್ತು ಬ್ರೈನ್‌ ಮ್ಯಾಪಿಂಗ್‌ ಪ್ರಕ್ರಿಯೆಯನ್ನೂ ಲಾಕ್‌ಡೌನ್‌ ತೆರವಾದ ಬಳಿಕ ಪೂರ್ತಿಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next