Advertisement

ಮಂಗಳೂರು: 9 ತಿಂಗಳಲ್ಲಿ  61 ಸೈಬರ್‌ ಪ್ರಕರಣ ದಾಖಲು

06:00 AM Jul 01, 2018 | |

ಮಂಗಳೂರು: ಸೈಬರ್‌ ಅಪರಾಧ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದು, ಸುಶಿಕ್ಷಿತರು ಇಂಥ ಪ್ರಕರಣಗಳಿಗೆ ಬಲಿಯಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಮಧ್ಯೆಕೊರತೆಗಳಿಂದ ಬಸವಳಿದಿರುವ ಸೈಬರ್‌ ಠಾಣೆ ಪೊಲೀಸರಿಗೆ ಪ್ರಕರಣವನ್ನು ಪತ್ತೆ ಭೇದಿಸು ವುದೇ ಸವಾಲಾಗಿ ಪರಿಣಮಿಸಿದೆ. 

Advertisement

ದ.ಕ. ಜಿಲ್ಲೆ, ಮುಖ್ಯವಾಗಿ ಮಂಗಳೂರಿನ ಯುವಕ, ಯುವತಿಯರು ಅನಾಮಧೇಯ ಕರೆ ಅಥವಾ ಸಂದೇಶಗಳಿಗೆ ಮರುಳಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಠಾಣೆ ಆರಂಭವಾದಲ್ಲಿಂದ ಒಂಬತ್ತು ತಿಂಗಳಲ್ಲಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ 61 ಪ್ರಕರಣಗಳು ದಾಖಲಾಗಿದ್ದು, 70ಕ್ಕೂ ಹೆಚ್ಚು ದೂರುಗಳು (ಎನ್‌ಸಿಆರ್‌) ಸ್ವೀಕೃತವಾಗಿವೆ.

32 ಲಕ್ಷ ರೂ. ವಂಚನೆ
ನಿಮಗೆ ಬಹುಮಾನ ಬಂದಿದೆ ಎಂದು ನಂಬಿಸಿ 32 ಲಕ್ಷ ರೂ. ಗಳಷ್ಟು  ಮೊತ್ತವನ್ನು ವಂಚಿಸಿದ ನೈಜೀರಿಯನ್‌ ಫ್ರಾಡ್‌ ಪ್ರಕರಣ ಮಹತ್ವದ್ದಾಗಿದೆ. ಕ್ರೆಡಿಟ್‌ ಕಾರ್ಡ್‌ ವಂಚನೆ, ಒಟಿಪಿ ಪಡೆದು ಹಣ ಡ್ರಾ, ವೈವಾಹಿಕ ಸಂಬಂಧಿತ ಪ್ರಕರಣಗಳೂ  ದಾಖಲಾಗಿವೆ. ಕೆಲವು ಸಣ್ಣ ಪ್ರಕರಣಗಳಲ್ಲಿ ಹಣ ವಾಪಸ್‌ ಬಂದಿದೆ. ದೊಡ್ಡ ಪ್ರಕರಣದಲ್ಲಿ ಏನೂ ಪತ್ತೆಯಾಗಿಲ್ಲ.

ಬ್ಯಾಂಕುಗಳಿಂದ ಅಸಹಕಾರ
ಸೈಬರ್‌ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವ ಸಂಬಂಧ ನಾವು ದೂರುಗಳ ವಿಚಾರಣೆಗೆ ಹೋದರೆ ಬ್ಯಾಂಕ್‌ ಸಿಬಂದಿ ಸೂಕ್ತ ಸಹಕಾರ ನೀಡುವುದಿಲ್ಲ ಎಂಬುದು ಸೈಬರ್‌ ಪೊಲೀಸ್‌ ಠಾಣೆ ಅಧಿಕಾರಿಗಳ ಆರೋಪ. ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಕುರಿತಂತೆ ಕೇಸುಗಳು ಜಾಸ್ತಿ ಇವೆ. ಬಜಾಜ್‌ ಫೈನಾನ್ಸ್‌ಗೆ
ಸಂಬಂಧಿಸಿದ ಪ್ರಕರಣಗಳೂ ಇವೆ. 

ಒಟಿಪಿ ನಂಬರ್‌ ಕೊಡದಿರಿ
ವಂಚಕರು ತಾವು ಬ್ಯಾಂಕಿನವರು ಎಂದು ಹೇಳಿ ಕರೆ ಮಾಡಿ ಆಧಾರ್‌ ನಂಬರ್‌ ಲಿಂಕ್‌ ಮಾಡಲಿಕ್ಕಿದೆ ಅಥವಾ ಬೇರೆ ನೆಪ ಹೇಳಿ ಒಟಿಪಿ ನಂಬರ್‌ ಕೇಳುತ್ತಾರೆ. ನೀಡಿದರೆ ಹಣ ಡ್ರಾ ಮಾಡಿ ವಂಚಿಸುತ್ತಾರೆ. ಒಎಲ್‌ಎಕ್ಸ್‌  ಹೆಸರಿನಲ್ಲೂ ಕರೆ ಮಾಡುತ್ತಾರೆ. ಕರೆ ಮಾಡಿ ಕಸ್ಟಮ್ಸ್‌,  ಮಿಲಿಟರಿ, ಪೊಲೀಸ್‌ ಅಧಿಕಾರಿ ಎಂದು ನಂಬಿಸುತ್ತಾರೆ. ವಾಟ್ಸಪ್‌ನಲ್ಲಿ ಫೋಟೊ ಹಾಕಿ ನಂಬಿಸುತ್ತಾರೆ.  ಯಾರು ಕೇಳಿದರೂ ಒಟಿಪಿ ನಂಬರ್‌ ಕೊಡಬೇಡಿ ಎನ್ನುತ್ತಾರೆ ಪೊಲೀಸರು.

Advertisement

ಅನಕ್ಷರಸ್ಥರ ಮೂಲಕ ಆಧಾರ್‌
ವಂಚಕರು ಅನಕ್ಷರಸ್ಥರನ್ನು ಭೇಟಿ ಮಾಡಿ ಅವರಿಗೆ ಹಣ ಕೊಟ್ಟು ಆಧಾರ್‌ ಕಾರ್ಡ್‌ ಮಾಡಿಸಿ ಅದರ ಮೂಲಕ ಬ್ಯಾಂಕ್‌ ಖಾತೆಯನ್ನು  ತೆರೆದು ತಾವೇ ಅದನ್ನು ನಿರ್ವಹಿಸುತ್ತಾರೆ. ಹೀಗೆ ಅವರು ವಂಚನೆ ಮೂಲಕ ಪಡೆದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ.

ಬಹುತೇಕ ಆರೋಪಿಗಳು ಉತ್ತರ ಭಾರತ ದವರಾಗಿದ್ದು, ಹಿಂದಿಯಲ್ಲಿ ಮಾತನಾಡುತ್ತಾರೆ. ಇಂಗ್ಲಿಷ್‌ನಲ್ಲಿ  ಮೆಸೇಜ್‌ ಕಳುಹಿಸುತ್ತಾರೆ. ಮಂಗಳೂರು ಸೈಬರ್‌ ಠಾಣೆಯಲ್ಲಿ  ದಾಖಲಾದ ಎಲ್ಲಾ  ಪ್ರಕರಣಗಳೂ ಪಶ್ಚಿಮ ಬಂಗಾಳ, ನೋಯ್ಡಾ, ಜಾರ್ಖಂಡ್‌, ಬಿಹಾರ, ಉತ್ತರ ಪ್ರದೇಶ, ಭೋಪಾಲ್‌, ಅಸ್ಸಾಂ ಮತ್ತಿತರ ರಾಜ್ಯಗಳಿಗೆ ಸಂಬಂಧಿಸಿದ್ದಾಗಿವೆ.

ಮೂಲ ಸೌಲಭ್ಯ ಕೊರತೆ
ಸೈಬರ್‌ ಪೊಲೀಸ್‌ ಠಾಣೆಯಲ್ಲಿ  ಮೂಲ ಸೌಲಭ್ಯಗಳ ಕೊರತೆ ಇದ್ದು, ಕಾರ್ಯ ನಿರ್ವಹಿಸುವುದೇ ಸವಾಲಾಗಿದೆ. ಸಿಬಂದಿ ಕೊರತೆ ಜತೆಗೆ, ಮಾಹಿತಿ ತಂತ್ರಜ್ಞಾನದಲ್ಲಿ  ಪರಿಣತಿ ಪಡೆದ ಅಧಿಕಾರಿ/ ಸಿಬಂದಿ ಇಲ್ಲ. ಸೈಬರ್‌ ಅಪರಾಧವು ಮಾಹಿತಿ ತಂತ್ರಜ್ಞಾನಕ್ಕೆ  ಸಂಬಂಧಿಸಿದ್ದು. ಇದನ್ನು ಭೇದಿಸಲು ಕನಿಷ್ಠ ಬಿಎಸ್‌ಸಿ/ ಎಂಎಸ್‌ಸಿ ಓದಿದ ಅಥವಾ ಸಾಫ್ಟ್‌ವೇರ್‌ ಎಂಜಿನಿಯರ್‌ ಗಳ ನೇಮಕವಾಗಬೇಕಿದೆ. ಸಾಮಾನ್ಯ ಪೊಲೀಸರಿಂದ ಇದು ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಅವರನ್ನೇ ಬಳಸಿಕೊಳ್ಳಲು ಸೂಕ್ತ ತರಬೇತಿ ನೀಡಬೇಕು. ಜತೆಗೆ ಅವರನ್ನು  ವರ್ಗಾವಣೆ ಪ್ರಕ್ರಿಯೆಯಿಂದ ಹೊರತು ಪಡಿಸಬೇಕು ಎಂಬುದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಸಲಹೆ.

ಜಾಗೃತಿಗೆ ಯತ್ನ
ಅಪರಿಚಿತರು ಅಥವಾ ಅನಾಮಧೇಯರು ವಿವಿಧ ರೀತಿಯಲ್ಲಿ  ವಂಚಿಸಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ  ಆಗಾಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಹಾಗಿದ್ದರೂ ಜನರು ಮತ್ತೆ ಮತ್ತೆ ಮೋಸ ಹೋಗುತ್ತಿದ್ದಾರೆ. ಅಪರಿಚಿತರು ಕಳುಹಿಸುವ ಮೆಸೇಜ್‌ಗಳಿಗೆ ಅಥವಾ ಫೋನ್‌ ಕರೆಗಳಿಗೆ ಮತ್ತು ಆಮಿಷಗಳಿಗೆ ಯಾರೂ ಬಲಿಯಾಗಬಾರದು. 
ಟಿ.ಆರ್‌. ಸುರೇಶ್‌, ಮಂಗಳೂರು ಪೊಲೀಸ್‌ ಆಯುಕ್ತರು.

ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next