ಮಹಾನಗರ: ಕಾಂಗ್ರೆಸ್ ಗ್ಯಾರಂಟಿ ಜಾರಿಗೊಳಿಸಲು ರಾಜ್ಯ ಬಜೆಟ್‌ನ ಶೇ. 20 ಹಣ ಮಾತ್ರ ವ್ಯಯ ಆಗಲಿದೆ. ಇದು ರಾಜ್ಯ ಬಿಜೆಪಿ ಸರಕಾರದ 40 ಪರ್ಸೆಂಟ್ ಭ್ರಷ್ಟಾಚಾರದ ಅರ್ಧ ಭಾಗ ಮಾತ್ರ. ಜನರ ತೆರಿಗೆ ಹಣವನ್ನು ಜನರಿಗೆ ನೀಡುವುದು ಕಾಂಗ್ರೆಸ್ ಗ್ಯಾರಂಟಿ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದ್ದಾರೆ.
ಮಂಗಳೂರು ನಗರ ದಕ್ಷಿಣ ಕಾಂಗ್ರೆಸ್‌ನ ಚುನಾವಣ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಘೋಷಿಸುವ ಕೆಲಸವನ್ನು ಮಾಡಿರುವ ಸರಕಾರ ಬಜೆಟ್‌ನಲ್ಲಿ ಹಣವನ್ನು ಮೀಸಲಿಡದೆ ಚುನಾವಣೆಯ ಅವಧಿಯಲ್ಲಿ ಜನರನ್ನು ಯಾಮಾರಿಸುವ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದರು.
ಮಂಗಳೂರು ಶಿಕ್ಷಣ ಹಬ್, ವೈದ್ಯಕೀಯ ಕಾಲೇಜುಗಳ ಕ್ಷೇತ್ರವಾಗಿದ್ದರೂ ಉದ್ಯೋಗಕ್ಕಾಗಿ ಯುವಜನತೆ ವಲಸೆ ಹೋಗುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಬೇಕಾಗಿದೆ. ನಗರದಲ್ಲಿ ಜಲಸಿರಿ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಕಾರಣವೇ ಜೆ.ಆರ್. ಲೋಬೋ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ತಂದ ಸ್ಮಾರ್ಟ್ ಸಿಟಿ ಯೋಜನೆ ಇದೀಗ ರಸ್ತೆಗಳನ್ನು ಅಗೆದು ಮತ್ತೆ ಕಾಂಕ್ರಿಟೀಕರಣಕ್ಕೆ ಮಾತ್ರ ಸೀಮಿತಗೊಂಡಿದೆ.
ಅತ್ಯಗತ್ಯ ಮೂಲಭೂತ ಸೌಕರ್ಯವಾದ ಸಾರ್ವಜನಿಕ ಶೌಚಾಲಯವೇ ನಗರದ ಪ್ರಮುಖ ರಸ್ತೆಗಳಲ್ಲಿ ಇಲ್ಲ. ಹಿಂದಿನ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಸೇರಿದಂತೆ ಕಾಂಗ್ರೆಸ್ ಸೋಲಿಗೆ ಬಿಜೆಪಿಯ ಭಾವನಾತ್ಮಕ ವಿಚಾರಗಳೇ ಹೊರತು ಅಭಿವೃದ್ಧಿಯ ಹಿನ್ನೆಡೆ ಕಾರಣವಲ್ಲ. ಜನತೆ ಇದನ್ನು ಅರ್ಥ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.
ಮಾಜಿ ಮೇಯರ್ ಸೇಸಮ್ಮ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಟಿ.ಕೆ. ಸುಧೀರ್, ಪ್ರಕಾಶ್ ಸಾಲಿಯಾನ್, ರಾಕೇಶ್ ದೇವಾಡಿಗ, ಸುನಿಲ್ ಪೂಜಾರಿ, ಸುಕೇಶ್ ಕುಮಾರ್, ಯೋಗೀಶ್ ನಾಯಕ್, ಮೋಹನ್ ಶೆಟ್ಟಿ, ಕೃತಿನ್ ಉಪಸ್ಥಿತರಿದ್ದರು.
ಐಟಿ ಪಾರ್ಕ್ ಎಲ್ಲಿ ಹೋಯ್ತು?
2018ರಲ್ಲಿ ಚುನಾವಣೆ ಸಂದರ್ಭ ಬಿಜೆಪಿಯ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು ಐಟಿ ಪಾರ್ಕ್ ಮಾಡುವುದಾಗಿ ಹೇಳಿದ್ದರು. ಆ ಚುನಾವಣೆಯಲ್ಲಿ ಗೆದ್ದು ಐದು ವರ್ಷಗಳ ಕಾಲ ಆ ಬಗ್ಗೆ ಏನೂ ಕ್ರಮ ವಹಿಸದೆ, ಇದೀಗ ಮತ್ತೆ ಐಟಿ ಪಾರ್ಕ್ ಮಾಡುವುದಾಗಿ ಮತ್ತೆ ಹೇಳಿಕೆ ನೀಡಿದ್ದಾರೆ. ಇಷ್ಟರವರೆಗೆ ಅವರು ನಿದ್ದೆ ಮಾಡಿದ್ದರಾ ಎಂದು ಪದ್ಮರಾಜ್ ಆರ್. ಪ್ರಶ್ನಿಸಿದರು.