ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್ 25 (ಎ) ರನ್ವಯ ಆನುವಂಶಿಕ ಮೊಕ್ತೇಸರರಿಂದ ಆಡಳಿತ ನಿರ್ವಹಿಸುವ ಅಧಿಸೂಚಿತ ಸಂಸ್ಥೆಯಾಗಿದೆ. ಪ್ರಸ್ತುತದ ಕಾನೂನಿನ ಪ್ರಕಾರ ಹೊಸದಾಗಿ ಆನುವಂಶಿಕವಲ್ಲದ ಮೊಕ್ತೇಸರರ ನೇಮಕ ಮತ್ತು ಮುಂದುವರಿಸಲು ಕಾನೂನಿನ ಪ್ರಕಾರ ಅವಕಾಶ ಇಲ್ಲ ಎಂದು ದೇಗುಲದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಸೆಕ್ಷನ್ 25(ಎ)ಯನ್ನು ರದ್ದು ಮಾಡಿ ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿರುವ ತೀರ್ಪಿಗೆ ಸುಪ್ರೀಂ ಕೋರ್ಟ್ 2015ರಲ್ಲಿ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 25 (ಎ) 2015ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದೆ. ಮಂಗಳಾದೇವಿ ದೇವಸ್ಥಾನಕ್ಕೆ 2000ನೇ ವಸವಿಯಲ್ಲಿ ಐದು ವರ್ಷದ ಅವಧಿಗೆ ಸರಕಾರದಿಂದ ನೇಮಿಸಿದ್ದ ಆನುವಂಶಿಕವಲ್ಲದ ಮೊಕ್ತೇಸರರ ಅಧಿಕಾರ ಅವಧಿಯು 2005ರಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದ ಹಿನ್ನೆಲೆಯಲ್ಲಿ ಅದೇ ಸಮಿತಿ ಅಧಿಕಾರದಲ್ಲಿ ಮುಂದುವರಿದಿತ್ತು.
ಸುಪ್ರೀಂಕೋರ್ಟ್‌ನ ಮಧ್ಯಾಂತರ ಆದೇಶ ಜಾರಿಗೆ ಬರುತ್ತಿದ್ದಂತೆ 2000ರಲ್ಲಿ ನೇಮಕಗೊಂಡಿದ್ದ ಸಮಿತಿಯ ಅಧಿಕಾರ 2015ಕ್ಕೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಆನುವಂಶಿಕ ಮೊಕ್ತೇಸರರಿಗೆ ಅ ಧಿಕಾರ ಹಸ್ತಾಂತರಿಸುವಂತೆ ಸರಕಾರ ಹೊರಡಿಸಿರುವ ಆದೇಶವು ಮತ್ತೆ ಊರ್ಜಿತವಾಗಿದೆ. ಮಂಗಳಾದೇವಿ ದೇವಸ್ಥಾನದ ಪ್ರಸ್ತುತದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ನ ಮಧ್ಯಾಂತರ ಆದೇಶದಂತೆ ಕಾರ್ಯನಿರ್ವಹಿಸುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಆನುವಂಶಿಕವಲ್ಲದ ಮೊಕ್ತೇಸರರಿಗೆ ಅಧಿಕಾರದಲ್ಲಿ ಮುಂದುವರಿಸಲು ಅವಕಾಶ ಇಲ್ಲ ಎಂದು ರಾಜ್ಯ ಧಾರ್ಮಿಕ ಇಲಾಖೆ ಆದೇಶ ಹೊರಡಿಸಿತ್ತು.
ಸುಪ್ರೀಂ ಕೋರ್ಟ್ ಆದೇಶದ ನಡುವೆಯೂ ಪ್ರೇಮಲತಾ ಕುಮಾರ್ ಪ್ರಕರಣದಲ್ಲಿ ಹೈಕೋರ್ಟ್, ಧಾರ್ಮಿಕ ದತ್ತಿ ಇಲಾಖೆಯ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಸುಪ್ರೀಂ ಕೋರ್ಟ್‌ನ ಆದೇಶ ಅಥವಾ ರಾಜ್ಯ ಹೈಕೋರ್ಟ್‌ನ ಆದೇಶ ಪಾಲನೆ ಮಾಡಬೇಕೇ ಎಂಬ ಗೊಂದಲ ದೇಗುಲದ ಆಡಳಿತ ಮಂಡಳಿ ಮುಂದಿದೆ. ಹೈಕೋರ್ಟ್‌ನ ಆದೇಶ ಪಾಲನೆ ಮಾಡಿದರೆ ಸುಪ್ರೀಂಕೋರ್ಟ್‌ನ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಆದೇಶಕ್ಕೆ ಸಂಬಂ ಧಿಸಿ ದೇಗುಲದ ಆಡಳಿತ ಮಂಡಳಿಯಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.