Advertisement

Lok Sabha Elections; ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ:ಇಂದು ಅಧಿಕೃತ ಘೋಷಣೆ?

10:31 PM Mar 25, 2024 | Team Udayavani |

ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿಯವರೇ ಕಣಕ್ಕೆ ಇಳಿಯುವ ಸಾಧ್ಯತೆಗಳು ಅಧಿಕವಾಗಿವೆ. ಈ ಬಗ್ಗೆ ಮಂಗಳವಾರ ನಡೆಯಲಿರುವ ಜೆಡಿಎಸ್‌ ಕೋರ್‌ ಕಮಿಟಿ ಸಭೆಯಲ್ಲಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

Advertisement

ರವಿವಾರ ಮಂಡ್ಯದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಜೆಡಿಎಸ್‌ ನಾಯಕ ಕುಮಾರಸ್ವಾಮಿ, ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲು ಒಂದು ದಿನ ಸಮಯ ಕೊಡಿ, ಚನ್ನಪಟ್ಟಣದ ಕಾರ್ಯಕರ್ತರನ್ನು ಕರೆದು ಮಾತನಾಡುತ್ತೇನೆ ಎಂದಿದ್ದರು. ಅದರಂತೆ ಸೋಮವಾರ ಬೆಂಗಳೂರಿನಲ್ಲಿ ಚನ್ನಪಟ್ಟಣದ ಮುಖಂಡರು, ಕಾರ್ಯಕರ್ತರ ಜತೆ ಸಭೆ ನಡೆಸಿದರು.

ಸಭೆಯಲ್ಲಿ ಒಂದು ಗುಂಪು ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತು. ಕುಮಾರಸ್ವಾಮಿ ಅವರನ್ನು ಒಂದು ಕ್ಷೇತ್ರಕ್ಕೆ ಸೀಮಿತವಾಗಿ ನೋಡುವುದು ಸರಿಯಲ್ಲ. ಮಂಡ್ಯದಿಂದ ಸ್ಪರ್ಧಿಸಿ ಗೆದ್ದರೆ ಅದು ಪಕ್ಷಕ್ಕೆ ಇನ್ನಷ್ಟು ಶಕ್ತಿ ಕೊಡುತ್ತದೆ. ಲೋಕಸಭೆಗೆ ಹೋದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷದ ವರ್ಚಸ್ಸು ಹೆಚ್ಚಾಗುತ್ತದೆ ಎಂದು ಮತ್ತೂಂದು ಗುಂಪು ವಾದ ಮುಂದಿಟ್ಟಿತು. ಈ ವೇಳೆ ಕಾರ್ಯಕರ್ತರ ನಡುವೆ ಪರಸ್ಪರ ಜಟಾಪಟಿ ನಡೆಯಿತು. ಕುಮಾರಸ್ವಾಮಿ ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು.

ಮಂಡ್ಯ ಸ್ಪರ್ಧೆ ಅನಿವಾರ್ಯ
ಸಭೆಯಲ್ಲಿ ಚನ್ನಪಟ್ಟಣದ ಜೆಡಿಎಸ್‌ ಕಾರ್ಯಕರ್ತರನ್ನು ಸಮಾಧಾನಪಡಿಸಿ, ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟ ಎಚ್‌.ಡಿ. ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇದರೊಂದಿಗೆ ಅಮಿತ್‌ ಶಾ ಸಹಿತ ಬಿಜೆಪಿ ವರಿಷ್ಠರು ಕೂಡ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ನನಗೆ ಸಲಹೆ ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಮಂಡ್ಯದಿಂದ ಸ್ಪರ್ಧಿಸುವ ಅನಿವಾರ್ಯ ಎದುರಾಗಿದೆ. ನೀವು ನನಗೆ ಸಮ್ಮತಿ ನೀಡಿ ಎಂದು ಸಭೆಯಲ್ಲಿ ಮನವಿ ಮಾಡಿದ್ದಾರೆ.

ಕೈ ಕುಯ್ದುಕೊಳ್ಳಲು ಜೆಡಿಎಸ್‌
ಕಾರ್ಯಕರ್ತನ ಯತ್ನ
“ಕುಮಾರಣ್ಣ ಚನ್ನಪಟ್ಟಣ ಬಿಟ್ಟು ಹೋಗಬಾರದು’ ಎಂದು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತನೊಬ್ಬ ಹರಿತ ವಸ್ತುವಿನಿಂದ ಕೈ ಕುಯ್ದುಕೊಳ್ಳಲು ಮುಂದಾದ ಘಟನೆ ನಡೆದಿದೆ. ಚನ್ನಪಟ್ಟಣದ ಜೆಡಿಎಸ್‌ ಕಾರ್ಯಕರ್ತರ ಜತೆಗೆ ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದಾಗ ಈ ಹೈಡ್ರಾಮ ನಡೆದಿದೆ. ಈ ವೇಳೆಗೆ ಮಧ್ಯಪ್ರವೇಶಿಸಿದ ಇತರ ಕಾರ್ಯಕರ್ತರು ಆತನ ಕೈಯಲ್ಲಿದ್ದ ಹರಿತ ವಸ್ತು ಕಿತ್ತುಕೊಂಡರು. ಜತೆಗೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಕುಮಾರಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

Advertisement

ಇಂದು ಕೋರ್‌ ಕಮಿಟಿ ಸಭೆ
ಮಂಡ್ಯ, ಕೋಲಾರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣ ರಣತಂತ್ರದ ಬಗ್ಗೆ ಚರ್ಚಿಸಲು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸದಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಸಭೆ ನಡೆಯಲಿದೆ. ಸಭೆ ಬಳಿಕ ಮಂಡ್ಯ ಕ್ಷೇತ್ರದ ಅಭ್ಯರ್ಥಿಯ ಅಧಿಕೃತ ಘೋಷಣೆ ಆಗಲಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next