ಬೆಂಗಳೂರು: “ನಿಖೀಲ್ ಎಲ್ಲಿದ್ದೀಯಪ್ಪ’ – ಜಗತ್ತಿನಾದ್ಯಂತ ವೈರಲ್ ಆದ ಡೈಲಾಗ್ ಇದು. ಜಾಗÌರ್ ಸಿನಿಮಾ ಧ್ವನಿ ಸುರುಳಿ ಬಿಡುಗಡೆ ವೇಳೆ ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿಯವರನ್ನು ಉದ್ದೇಶಿಸಿ ಹೇಳಿದ್ದ ಮಾತು ರಾಜಕೀಯ ಪ್ರಚಾರದ ವ್ಯಾಪ್ತಿಯನ್ನು ಮೀರಿ, ಈಗ ಮನರಂಜನೆ ಸರಕಾಗಲೂ ಹೊರಟಿದೆ. ಈ ಟೈಟಲ್‌ನ್ನು ರಿಜಿಸ್ಟರ್ ಮಾಡಲು ಪೈಪೋಟಿಯೇ ಏರ್ಪಟ್ಟಿದೆ. ಆದರೆ, ಸದ್ಯಕ್ಕಂತೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇದಕ್ಕೆ “ನೋ’ ಎಂದಿದೆ.
ಅಷ್ಟೇ ಅಲ್ಲ, “ಸುಮಲತಾ’, “ಮಂಡ್ಯದ ಹೆಣ್ಣು’ ಸೇರಿದಂತೆ ಇನ್ನೂ ಹಲವು ಟೈಟಲ್‌ಗಳನ್ನು ನೀಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅನೇಕರು ಮನವಿ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಓಡಾಡಿದ, ಟ್ರೋಲ್ ಆದ ವಿಷಯಗಳಲ್ಲಿ “ನಿಖೀಲ್ ಎಲ್ಲಿದ್ದೀಯಪ್ಪಾ’ ಹಾಗೂ “ಜೋಡೆತ್ತು’, “ಕಳ್ಳೆತ್ತು’ ಕೂಡಾ ಒಂದು. ಸಿಎಂ ಕುಮಾರಸ್ವಾಮಿಯವರು ಕಾರ್ಯಕ್ರಮವೊಂದರಲ್ಲಿ ತಮ್ಮ ಮಗ ನಿಖೀಲ್‌ನನ್ನು “ನಿಖೀಲ್ ಎಲ್ಲಿದ್ದೀಯಪ್ಪಾ’ ಎಂದು ಕರೆದರೆ, ಸುಮಲತಾ ಪರ ಪ್ರಚಾರದಲ್ಲಿ ನಟ ದರ್ಶನ್, “ನಾನು ಹಾಗೂ ಯಶ್ ಜೋಡೆತ್ತುಗಳಂತೆ ಕೆಲಸ ಮಾಡುತ್ತೇವೆ’ ಎಂದಿದ್ದರು. ಈ ಎರಡು ಪದಗಳು ಸಾಕಷ್ಟು ವಿವಾದವನ್ನು ಎಬ್ಬಿಸುವ ಜೊತೆಗೆ ದೊಡ್ಡ ಸುದ್ದಿಗೂ ಗ್ರಾಸವಾದುವು. ಈ ತರಹದ ಟೈಟಲ್‌ಗಳನ್ನು ಇಟ್ಟರೆ ಸಿನಿಮಾಕ್ಕೆ ಪಬ್ಲಿಸಿಟಿ ಸಿಗುವ ಜೊತೆಗೆ, ಸಿನಿಮಾದೊಳಗಡೆ ಏನಿದೆ ಎಂಬ ಕುತೂಹಲದಿಂದ ಆರಂಭದಲ್ಲಿ ಒಳ್ಳೆಯ ಓಪನಿಂಗ್ ಪಡೆಯಬಹುದೆಂಬ ಲೆಕ್ಕಾಚಾರ ಸಿನಿಮಾ ಮಂದಿಯದ್ದು. ಈ ಕಾರಣದಿಂದ ಈ ತರಹದ ಟ್ರೋಲ್ ಟೈಟಲ್‌ಗಳಿಗೆ ಭಾರೀ ಬೇಡಿಕೆ ಇದೆ.
ಬಾಲಿವುಡ್‌ನಲ್ಲಿ ಪುಲ್ವಾಮಾದಲ್ಲಿನ ಉಗ್ರರ ದಾಳಿ, ಭಾರತೀಯ ವಾಯುಪಡೆ ಬಾಲಕೋಟ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯನ್ನು ಆಧರಿಸಿದ ಟೈಟಲ್‌ಗಳಿಗೆ ಮುಗಿ ಬೀಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮ.ಹರೀಶ್, “ರಾಜಕೀಯಕ್ಕೆ ಸಂಬಂಧಿಸಿದಂತೆ ಈ ತರಹದ ಟೈಟಲ್‌ಗಳನ್ನು ರಿಜಿಸ್ಟರ್ ಮಾಡಿಸಲು ಪ್ರತಿ ದಿನ ಹತ್ತಾರು ಮಂದಿ ಬರುತ್ತಿದ್ದಾರೆ. ಆದರೆ, ಅದನ್ನು ನಾವು ಇನ್ನೂ ಪರಿಗಣಿಸಿಲ್ಲ. ಕೆಲವರು ಕೇವಲ ಪ್ರಚಾರಕ್ಕಾಗಿ ಇಂತಹ ಟೈಟಲ್ ಬಳಸುತ್ತಾರೆಯೇ ಹೊರತು, ಅದನ್ನು ಸಿನಿಮಾ ಮಾಡೋದಿಲ್ಲ. ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಟೈಟಲ್ ಕೊಡುವ ಮುಂಚೆ ಸಾಕಷ್ಟು ವಿಚಾರಿಸಿ, ಪರಾಮರ್ಶಿಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎನ್ನುತ್ತಾರೆ.
ಪ್ರಸಕ್ತ ರಾಜಕೀಯ ವಿದ್ಯಮಾನಕ್ಕೆ ಸಂಬಂಧಿಸಿದ ಇಂಥ ಟೈಟಲ್‌ಗಳನ್ನು ನಾವು ಪರಿಗಣಿಸಿಲ್ಲ. ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಸಾಕಷ್ಟು ವಿಚಾರಿಸಿ ನಿರ್ಧಾರ ಕೈಗೊಳ್ಳುತ್ತೇವೆ.
– ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ
– ಜಿ ಎಸ್ ಕಾರ್ತಿಕ್ ಸುಧನ್