ಮಂಡ್ಯ: ಕೋವಿಡ್ ನಿಯಂತ್ರಿಸಲು ಸರ್ಕಾರ 14 ದಿನ ಲಾಕ್‌ಡೌನ್ ಮಾಡಿದ್ದಾರೆ. ಆದರೆ, ಮಂಡ್ಯ ನಗರ ದಲ್ಲಿ ಲಾಕ್‌ಡೌನ್ ಬಿಗಿ ಕಳೆದುಕೊಳ್ಳುವಂತಾಗಿದೆ.
ಬೆಳಗ್ಗೆ 10 ಗಂಟೆ ನಂತರವೂ ಕಾರು, ಬೈಕ್ ಸವಾರರು ಎಂದಿನಂತೆ ಸಂಚರಿಸುತ್ತಿದ್ದಾರೆ. ಅಗತ್ಯಕ್ಕಿಂತ ಅನಗತ್ಯವಾಗಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರಕು ಸಾಗಣೆ, ಅಗತ್ಯ ವಸ್ತುಗಳ ಸರಬರಾಜು ಮಾಡುವ ವಾಹನ ಸಂಚರಿಸುತ್ತಿವೆ. ಜತೆಗೆ ಅನಗತ್ಯವಾಗಿ ಓಡಾಡುವವರ ಸಂಖ್ಯೆಯೂ ಹೆಚ್ಚಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ತಪಾಸಣೆಯನ್ನು ದಿನನಿತ್ಯ ತಪಾಸಣೆ ಮಾಡುತ್ತಿದ್ದಾರೆ. ಆದರೆ ಹೆದ್ದಾರಿ ಹೊರತುಪಡಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿಕ್ರಮ ಇಲ್ಲದ ಕಾರಣ ಬೈಕ್, ಕಾರುಗಳ ಸಂಚಾರ ಎಂದಿನಂತಿದೆ.
ಅನಗತ್ಯ ಓಡಾಟ: ಯುವಕರು ಪ್ರತಿನಿತ್ಯ ಅನಗತ್ಯ ಓಡಾಟ ಮಾಡುತ್ತಲೇ ಇದ್ದಾರೆ. ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಯುವಕರು, ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಿದ್ದಾರೆ. ಈ ವೇಳೆ ಮಾಸ್ಕ್ ಕೂಡ ಧರಿಸಿರುವುದಿಲ್ಲ. ರಸ್ತೆ ಬಂದ್ ಮಾಡಿರುವ ಹಾಗೂ ಪೊಲೀಸರು ಗಸ್ತು ಇರುವ ಕಡೆ ಬಿಟ್ಟು ಪೊಲೀಸರ ಕಣ್ತಪ್ಪಿಸಿ ಯುವಕರು ಬೈಕ್ ರೈಡಿಂಗ್ ಮಾಡುತ್ತಿರುವುದು ಕಂಡು ಬರುತ್ತಿದೆ.
ಸೋಂಕು ಭೀತಿ: ನಗರದ ನೂರಡಿ ರಸ್ತೆ, ವಿವಿ ರಸ್ತೆ, ವಿನೋಬಾ ರಸ್ತೆ, ಕೆ.ಆರ್.ರಸ್ತೆ, ವಿವೇಕಾನಂದ ಜೋಡಿ ರಸ್ತೆಗಳಲ್ಲಿ ಹೆಚ್ಚು ಸಂಚಾರ ನಡೆಸಲಾಗುತ್ತಿದೆ. ಕೆಲ ಯುವಕರು ಮಾಸ್ಕ್ ಧರಿಸದೆ ಸಂಚರಿಸುತ್ತಿರುವುದು ಸೋಂಕು ಹೆಚ್ಚು ಹರಡುವ ಸಾಧ್ಯತೆ ಇದೆ. ಕೆಲವರು ಹೋಟೆಲ್‌ಗಳಿಗೆ ಊಟ ತರಲು ಹೋದರೆ, ಅವರ ಜತೆ ಮೂರು ಮಂದಿ ಹೋಗುತ್ತಾರೆ. ಇದರಿಂದ ಜನಸಂಚಾರ ಹೆಚ್ಚಾಗುತ್ತಿದೆ.ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೂ ಜನ ಲಾಕ್‌ಡೌನ್ ಸಂದರ್ಭದಲ್ಲೂ ಸಂಚರಿಸುತ್ತಿರುವುದು ಸೋಂಕಿನ ಪ್ರಮಾಣ ಹೆಚ್ಚಲು ಕಾರಣವಾಗುತ್ತಿದೆ. ಸೋಂಕು ನಿಯಂತ್ರಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ನಿರಂತರವಾಗಿ ಕ್ರಮ ವಹಿಸುತ್ತಿದೆ. ಆದರೆ ಲಾಕ್ ಡೌನ್ ಬಿಗಿಯಾಗುತ್ತಿಲ್ಲ. ಆಸ್ಪತ್ರೆ, ಕೊರೊನಾ ಪರೀಕ್ಷೆ,ಲಸಿಕೆ ಪಡೆಯುವವರು ತೆರಳುವವರು ಇದ್ದಾರೆ. ಜತೆಗೆ ಕೆಲ ಯುವಕರು ಅನಗತ್ಯವಾಗಿ ಸಂಚರಿಸುತ್ತಿದ್ದಾರೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ.
ಸಾಮಾಜಿಕ ಅಂತರ ನಿರ್ಲಕ್ಷ್ಯ:
ಪ್ರತಿದಿನ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಸಾಮಾಜಿಕ ಅಂತರ ಮರೆಯುವುದು ಮುಂದುವರಿದಿದೆ. ಮಂಡ್ಯದಲ್ಲೇ 350ಕ್ಕೂ ಹೆಚ್ಚು ಪ್ರಕರಣ ಪ್ರತಿದಿನ ದಾಖಲಾಗುತ್ತಿವೆ. ಆದರೂ, ಅಂತರ ಕಾಪಾಡಿಕೊಳ್ಳುತ್ತಿಲ್ಲ. ತರಕಾರಿ, ಹಾಲು, ಹಣ್ಣು, ಹೂ, ಮಾಂಸ ಖರೀದಿ ಅಂಗಡಿಗಳಲ್ಲಿ ಅಂಟಿಕೊಂಡೇ ಗ್ರಾಹಕರು ಖರೀದಿಸುತ್ತಿದ್ದಾರೆ.