Advertisement

ಬಿಜೆಪಿಯಿಂದ ಇಡಿ ದುರ್ಬಳಕೆ: ಕಾಂಗ್ರೆಸ್‌ ಕಿಡಿ

03:37 PM Jun 18, 2022 | Team Udayavani |

ಮಂಡ್ಯ: ಕೇಂದ್ರದ ಬಿಜೆಪಿ ಸರ್ಕಾರ ಸಾಂವಿಧಾನಿಕ ಇ.ಡಿ. ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕೃತಕವಾಗಿ ಸೃಷ್ಟಿಸಿದ ವಿಷಯದಲ್ಲಿ ಕಾಂಗ್ರೆಸ್‌ ನಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ನಗರದ ಆದಾಯ ತೆರಿಗೆ ಇಲಾಖೆ ಮುಂದೆ ಜಮಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆದಾಯ ತೆರಿಗೆ ಇಲಾಖೆಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ತಡೆದರು. ನಂತರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ದೇಶದಲ್ಲಿ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಮುಗಿದ ಅಧ್ಯಾಯವಾಗಿತ್ತು. ಅದನ್ನು ಮತ್ತೆ ಮರು ತನಿಖೆಗೆ ಆದೇಶ ಮಾಡಿ, ದ್ವೇಷ ಸಾಧಿಸುವ ಕೆಲಸ ಮಾಡಲಾಗುತ್ತಿದೆ. ಎಂಟು ವರ್ಷಗಳಿಂದ ಸುಮ್ಮನಿದ್ದು, ಮುಂದಿನ ಬಾರಿ ಚುನಾವಣೆಯ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮೇಲೆ ಅಪನಂಬಿಕೆ ಬರುವಂತೆ ಮಾಡುವ ಹುನ್ನಾರ ಅಡಗಿದೆ ಎಂದು ಕಿಡಿಕಾರಿದರು.

ವಿಚಾರಣೆ ನೆಪದಲ್ಲಿ ಕಿರುಕುಳ: ಕಾಂಗ್ರೆಸ್‌ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರಿಗೆ ಸಮನ್ಸ್‌ ನೀಡಿ, ಮೂರು ದಿನ ವಿಚಾರಣೆ ನಡೆಸಿ, ಕಿರುಕುಳ ನೀಡಲಾಗುತ್ತಿದೆ. ಅಲ್ಲದೆ, ಸೋನಿಯಾ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ತನ್ನ ತಾಯಿಯನ್ನು ನೋಡಲು ಬಿಡದೆ ತೊಂದರೆ ನೀಡುತ್ತಿದ್ದಾರೆ. ತಾಯಿ ನೋಡಲು ಮೂರು ದಿನಗಳ ಕಾಲಾವಕಾಶ ಪಡೆಯುವಂತ ಪರಿಸ್ಥಿತಿಗೆ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರ ವಿರುದ್ಧ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು, ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಪೊಲೀಸ್‌ ಇಲಾಖೆಯು ಪಕ್ಷದ ಶಾಸಕರು, ಸಂಸದರು ಹಾಗೂ ಹಿರಿಯ ನಾಯಕರನ್ನು ಅಮಾನವೀಯ ನಡೆಸಿಕೊಳ್ಳುತ್ತಿದೆ. ಎಐಸಿಸಿ ಕಚೇರಿಗೆ ನುಗ್ಗಿ ಪಕ್ಷದ ಕಾರ್ಯಕರ್ತರು, ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಮೇಲೆ ದ್ವೇಷ: ದೇಶದಲ್ಲಿ ಕೇಂದ್ರ ಸರ್ಕಾರದ ನೀತಿಗಳಿಂದ ಆರ್ಥಿಕ ಪರಿಸ್ಥಿತಿ ಕುಗ್ಗಿದೆ, ರೈತರ ಸಮಸ್ಯೆಗಳು ಸಾಕಷ್ಟಿವೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ, ಬಡವರು ಜೀವನ ಮಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ತೆರಿಗೆ, ಪೆಟ್ರೋಲ್‌, ಡಿಸೇಲ್‌, ದಿನಸಿ ಪದಾರ್ಥಗಳು, ಅಡುಗೆ ಅನಿಲ ಸೇರಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರು ತತ್ತರಿಸುವಂತೆ ಮಾಡಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಕಾಂಗ್ರೆಸ್‌ ಮೇಲೆ ದ್ವೇಷ ಸಾಧಿ ಸುವ ಮೂಲಕ ಮತ್ತೂಮ್ಮೆ ಅಧಿಕಾರ ಹಿಡಿಯುವ ಕೆಟ್ಟ ಪಕ್ಷವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ ಎಂದು ದೂರಿದರು.

Advertisement

ಜನರ ದಿಕ್ಕು ತಪ್ಪಿಸುವ ಕೆಲಸ: ರಾಜ್ಯ ಸರ್ಕಾರದ ಮೇಲೂ ಆರ್‌ಎಸ್‌ಎಸ್‌ ಪ್ರಭಾವ ಬೀರಿದ್ದು, ಹಿಜಾಬ್‌, ಹಲಾಲ್‌ ಕಟ್‌, ಮಸೀದಿ, ಪಠ್ಯ ಪರಿಷ್ಕರಣೆ ಸೇರಿ ಅನೇಕ ವಿವಾದಗಳನ್ನು ಹುಟ್ಟುಹಾಕಿ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರ ಸಮಸ್ಯೆ ನಿವಾರಿಸುವ ಬದಲು ಕೇವಲ ವಿವಾದ, ಗಲಭೆ ಎಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಕುವೆಂಪು ನಾಡಗೀತೆಗೆ ಅವಮಾನ ಮಾಡುವ ಮೂಲಕ ಮಕ್ಕಳಿಗೆ ಆರ್‌ಎಸ್‌ಎಸ್‌ ಸಿದ್ಧಾಂತ ತುಂಬುವ ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ದ್ವೇಷ ರಾಜಕಾರಣ ಬಿಡಬೇಕು: ಬಿಜೆಪಿ ಸರ್ಕಾರದ ಇಂತಹ ದ್ವೇಷ ರಾಜಕಾರಣ ಬಿಡಬೇಕು. ಅಲ್ಲದೆ, ನಮ್ಮ ಪಕ್ಷದ ಹಿರಿಯ ನಾಯಕರು, ಸಂಸದರು, ಶಾಸಕರು, ಕಾರ್ಯಕರ್ತರ ಮೇಲಿನ ಹಿಂಸಾಚಾರಕ್ಕೆ ದೇಶದ ಜನರ ಕ್ಷಮೆಯಾಚಿಸಬೇಕು. ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ನಿಲ್ಲಿಸಿ ಪ್ರಜಾಪ್ರಭುತ್ವದ ಗೌರವ ಕಾಪಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಎನ್‌. ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ಎಂ. ಎಸ್‌.ಆತ್ಮಾನಂದ, ವಿಧಾನ ಪರಿ ಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಮುಖಂಡರಾದ ಡಾ.ಕೃಷ್ಣ, ರವಿ ಕುಮಾರ್‌ ಗಣಿಗ, ನಟ ಸಚಿನ್‌, ಮಹಿಳಾಧ್ಯಕ್ಷೆ ಅಂಜನಾಶ್ರೀಕಾಂತ್‌, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next