Advertisement

“ಕೈ’ನಲ್ಲಿ ಮೂಲ-ವಲಸಿಗರ ತಿಕ್ಕಾಟ

03:47 PM Apr 27, 2022 | Team Udayavani |

ಮಂಡ್ಯ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇದೆ. ಈಗ ಸದ್ಯ ಮೂಲ ಹಾಗೂ ವಲಸಿಗರ ನಡುವಿನ ಭಿನ್ನಾಭಿಪ್ರಾಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ಮುಖ್ಯ ವೇದಿಕೆಯಾಗಿದೆ.

Advertisement

ಜಿಲ್ಲಾಧ್ಯಕ್ಷ ಸ್ಥಾನ ಬದಲಿಸುವ ಉದ್ದೇಶದಿಂದಲೇ ಸಿ.ಡಿ.ಗಂಗಾಧರ್‌ರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಡ್ತಿ ನೀಡಲಾಗಿದೆ.

ಇದರ ಜತೆಗೆ ಮುಂದೆ ಯಾವುದಕ್ಕೂ ಯಾರೂ ತಕರಾರು, ಭಿನ್ನಾಭಿಪ್ರಾಯ ಉಂಟಾಗದಂತೆ ಶಮನ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಅಳೆದು ತೂಗಿ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರ ಸ್ವಾಮಿ, ಡಾ.ಎಚ್‌.ಎನ್‌. ರವೀಂದ್ರ, ದಡದಪುರ ಶಿವಣ್ಣ ಅವರಿಗೂ ಸ್ಥಾನ ನೀಡಿದ್ದಾರೆ. ಆದರೆ ಖಾಲಿಯಾಗುವ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಉಂಟಾಗಿದೆ.

ಪೈಪೋಟಿ: ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಶುರುವಾಗಿದ್ದು, ಇದರ ಜತೆಯಲ್ಲಿ ಯೇ ಮೂಲ-ವಲಸಿಗ ಎಂಬ ಚರ್ಚೆಯೂ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ನ ಮೂಲ ಕಾರ್ಯಕರ್ತರಿಗೆ ಮಣೆ ಹಾಕಬೇಕು ಎಂದು ಪಕ್ಷದ ಮೂಲ ಹಿರಿಯ ಮುಖಂಡರ ಬಣ ಪಟ್ಟು ಹಿಡಿದಿದೆ.

ಅತ್ತ ಪಕ್ಷ ಸೇರಿರುವ ನಾಯಕರು, ಆಪ್ತರಿಗೆ ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಹಿರಿಯ ಮುಖಂಡ ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ ಬಣದವರಿಗೆ ನೀಡ ಬೇಕು ಎಂದು ಒಂದು ಬಣ ಇದ್ದರೆ, ಮತ್ತೂಂದೆಡೆ ಎನ್‌.ಚಲುವರಾಯಸ್ವಾಮಿ ಬಣ ತಮ್ಮ ಆಪ್ತರಿಗೆ ಜಿಲ್ಲಾಧ್ಯಕ್ಷ ಸ್ಥಾನದ ಪಟ್ಟ ಕಟ್ಟಲು ಪೈಪೋಟಿ ಏರ್ಪಟ್ಟಿದೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವಾಗ ಬೇಕಾದರೂ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

Advertisement

ವರಿಷ್ಠರಿಗೆ ಗೊಂದಲ: ಮೂಲ-ವಲಸಿಗ ಕಾರ್ಯಕರ್ತರ ಭಿನ್ನಾಭಿಪ್ರಾಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹೈಕಮಾಂಡ್‌ ನಾಯಕರಿಗೆ ಜಿಲ್ಲಾಧ್ಯಕ್ಷ ಸ್ಥಾನ ಆಯ್ಕೆ ಕಗ್ಗಂಟಾಗಿದೆ. ಯಾವ ಬಣದವರನ್ನು ನೇಮಿಸಿದರೂ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಸ್ಥಳೀಯ ಸಂಸ್ಥೆಗಳಲ್ಲೂ ಸೋಲು ಅನುಭವಿಸುತ್ತಾ, ಆಡಳಿತ ಚುಕ್ಕಾಣಿ ಕಳೆದುಕೊಳ್ಳುವಂತಾಗಿದೆ.

ಹೀಗಾಗಿ ಎಲ್ಲರನ್ನು ಒಗ್ಗಟ್ಟಾಗಿ ಕೊಂಡೊ ಯ್ಯುವ ಸಂಘಟನಾತ್ಮಕ ನಾಯಕನನ್ನು ಆಯ್ಕೆ ಮಾಡುವ ಅನಿವಾರ್ಯತೆ ಇದೆ. ಅಲ್ಲದೆ, ಜೆಡಿಎಸ್‌ ಅನ್ನು ಸಮರ್ಥವಾಗಿ ನಿಭಾಯಿಸುವ ಸಮರ್ಥ ಅಭ್ಯರ್ಥಿ ಅಗತ್ಯವಾಗಿದೆ.

ಒತ್ತಡ ಹಾಕಿದವರಿಗೆ ಮಣೆ : ದಿ.ಅಂಬರೀಷ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ತಮ್ಮ ಆಪ್ತರೇ ಆಗಿದ್ದ ಸಿ.ಡಿ.ಗಂಗಾಧರ್‌ರನ್ನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ರಿಗೆ ಒತ್ತಡ ತಂದಿದ್ದರು. ಕೆಲವೇ ದಿನಗಳಲ್ಲಿ ಹಾಲಿ ಜಿಲ್ಲಾಧ್ಯಕ್ಷರಾಗಿದ್ದ ಮಾಜಿ ಸಚಿವ ಎಂ.ಎಸ್‌.ಆತ್ಮಾನಂದರನ್ನು ಕೆಪಿಸಿಸಿ ಕಾರ್ಯದರ್ಶಿ ನ್ನಾಗಿ ನೇಮಿಸಿ ಅವರ ಸ್ಥಾನಕ್ಕೆ ಅಂಬರೀಷ್‌ ಆಪ್ತ ಗಂಗಾಧರ್‌ರನ್ನು ಕೆಪಿಸಿಸಿ ನೇಮಿಸಿತ್ತು. ಅದರಂತೆ ಈ ಬಾರಿಯೂ ಎನ್‌. ಚಲುವರಾಯಸ್ವಾಮಿ ತಮ್ಮ ಆಪ್ತರ ಪರ ಬ್ಯಾಟ್‌ ಬೀಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಬಣ ರಾಜಕೀಯ ಹೊಸದೇನಲ್ಲ : ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹೊಸದೇನಲ್ಲ. ಹಿರಿಯ ನಾಯಕರಾಗಿದ್ದ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಹಾಗೂ ಮಾಜಿ ಸಚಿವ ದಿವಂಗತ ಅಂಬರೀಷ್‌ ನಡುವಿನ ಭಿನ್ನಾಭಿಪ್ರಾಯದಿಂದ ಉಂಟಾದ ಬಣ ರಾಜಕೀಯ ಮುಂದುವರಿಯುತ್ತಲೇ ಬಂದಿದೆ. ಈಗಲೂ ಎಸ್‌.ಎಂ.ಕೃಷ್ಣ ಬಣ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದೆ. ಅಂಬರೀಷ್‌ ಬಣದ ಕೆಲವರು ಈಗಾಗಲೇ ಸಂಸದೆ ಸುಮಲತಾಅಂಬರೀಷ್‌ ಪರ ನಿಂತಿದ್ದರೆ, ಕೆಲವರು ಮೌನವಾಗಿಯೇ ಇದ್ದಾರೆ.

ಹಿರಿಯರ ಕಡೆಗಣನೆ ಆರೋಪ : ಕಾಂಗ್ರೆಸ್‌ನಲ್ಲಿ ಮೂಲ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಸಿಗುತ್ತಿರುವ ಗೌರವ ನಮಗೆ ಸಿಗುತ್ತಿಲ್ಲ. ಜಿಲ್ಲಾ ಪದಾಧಿ ಕಾರಿಗಳ ಆಯ್ಕೆಯಲ್ಲೂ ಅವರಿಗೆ ಬೇಕಾದವರಿಗೆ ನೀಡಲಾಗುತ್ತಿದೆ. ಇದು ಮೊದಲಿನಿಂದ ಪಕ್ಷ ಕಟ್ಟಿದ ಹಿರಿಯ ಮುಖಂಡರಿಗೆ ಬೇಸರ ತರಿಸಿದೆ. ಇದರಿಂದ ಪಕ್ಷದ ಬಹುತೇಕ ಚಟುವಟಿಕೆಗಳಿಂದ ಹಿರಿಯ ಮುಖಂಡರು ಹಿಂದೆ ಸರಿಯುವಂತಾಗಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ಮೂಲ ಕಾರ್ಯಕರ್ತರ ಗೌಪ್ಯ ಸಭೆ?: ಕುತೂಹಲ : ಮೂಲ ಕಾರ್ಯಕರ್ತರೊಬ್ಬರಿಗೆ ಜಿಲ್ಲಾಧ್ಯಕ್ಷ ಸ್ಥಾನ ಸಿಗಲು ಮೂಲ ವಲಸಿಗರು ಗೌಪ್ಯ ಸಭೆ ಸೇರಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ, ಈಗಾಗಲೇ ಹಿರಿಯ ಮುಖಂಡ ಎಂ.ಎಸ್‌.ಆತ್ಮಾನಂದರನ್ನು ಜೆಡಿಎಸ್‌ ತಮ್ಮ ಪಕ್ಷಕ್ಕೆ ಕರೆತರಲು ಎಲ್ಲ ರೀತಿಯ ಸಿದ್ಧತೆ ನಡೆದಿವೆ. ಆಪ್ತ ಸಿ.ಎಂ.ಇಬ್ರಾ ಹಿಂ ಮೂಲಕ ಆಹ್ವಾನ ನೀಡಲಾಗಿದ್ದು, ಕಸರತ್ತು ನಡೆಸಲಾಗುತ್ತಿದೆ. ಇದೆಲ್ಲವೂ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಬಹುದು ಎಂಬ ರಾಜಕೀಯ ಚರ್ಚೆ ನಡೆಯುತ್ತಿವೆ.

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next