ಬೆಂಗಳೂರು : ನಗರದಲ್ಲಿ ಕ್ಲಸ್ಟರ್ ಮಾದರಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಗಳಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ಹೋಟೆಲ್ ನ ಎಲ್ಲ ಸಿಬ್ಬಂದಿಗೆ ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡುವಂತೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಹೋಟೆಲ್ ವರ್ತಕರು, ಮಾಲೀಕರ ಸಂಘಟನೆ ಸದಸ್ಯರೊಂದಿಗೆ ಆಯುಕ್ತರು ಶುಕ್ರವಾರ ವರ್ಚ್ಯೂಲ್ ಸಭೆ ನಡೆಸಿದರು. ಈ ವೇಳೆ ಹೋಟೆಲ್ ವರ್ತಕರು ಹಾಗೂ ಮಾಲೀಕರನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ನಗರದಲ್ಲಿ ಮತ್ತೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೋಟೆಲ್‌ನಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಯನ್ನು ಕಡ್ಡಾಯವಾಗಿ 15 ದಿನಗಳಿಗೊಮ್ಮೆ ಆರ್ ಟಿ ಪಿಸಿಆರ್ ಪರೀಕ್ಷೆಗೆ ಒಳಪಡುವಂತೆ ಸೂಚಿಸಿದರು.
ಪಾಲಿಕೆಯ ಪರೀಕ್ಷಾ ತಂಡ ಹೋಟೆಲ್ ಗಳ ಬಳಿ ಬಂದು ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಲಿದೆ. ಸೋಂಕು ಪತ್ತೆಯಾದಲ್ಲಿ ಕೂಡಲೇ ವ್ಯಕ್ತಿಯನ್ನು ಪ್ರತ್ಯೇಕಿಸಬೇಕು. ಎಲ್ಲ ಹೋಟೆಲ್ ಮಾಲೀಕರು ಕೋವಿಡ್ ನಿಯಮ ಪಾಲಿಸುವಮೂಲಕ ಸೋಂಕು ಹರಡುವಿಕೆ ತಡೆಗೆ ಸಹಕರಿಸಬೇಕು ಎಂದು ಹೇಳಿದರು.ಹೋಟೆಲ್ ಗಳಿಗೆ ಮಾಸ್‌ಕ್ ಧರಿಸದೆ ಬರುವವರಿಗೆ ಪ್ರವೇಶ ನಿರಾಕರಿಸುವಂತೆ ಹಾಗೂ ಊಟಕ್ಕೆ ಹಾಗೂ ಟೀ, ಕಾಫಿ ಕುಡಿಯುವ ವೇಳೆ ಮಾತ್ರ ಮಾಸ್ಕ್ ತೆರೆಯಲು ಅನುಮತಿ ನೀಡಿ ಎಂದರು.
ಇನ್ನು ಹೋಟೆಲ್ ಗಳಲ್ಲಿ ಅಡುಗೆ ಮಾಡುವ ಮತ್ತು ಊಟ ಬಡಿಸುವ ಸಿಬಂದಿ ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಧರಿಸಬೇಕು. ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹೋಟೆಲ್ ಪ್ರವೇಶ ದ್ವಾರದಲ್ಲಿ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನ್ ಮೂಲಕ ಪರೀಕ್ಷೆ ಮಾಡಬೇಕು. ಎಲ್ಲರಿಗೂ ಲಭ್ಯವಾಗುವಂತೆ ಹ್ಯಾಂಡ್ ಸ್ಯಾನಿಟೈಸರ್ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.
ನಗರದ ರಸ್ತೆ ಬದಿ ಹೋಟೆಲ್ ಗಳು ನಡೆಸುವವರ ಮೇಲೆ ಮಾರ್ಷಲ್ ಗಳು ನಿಗಾ ವಹಿಸಲಿದ್ದು, ಕೋವಿಡ್ ನಿಯಮ ಪಾಲಿಸದಿದ್ದರೆ ನಿಯಮಾನುಸಾರ ದಂಡ ವಿಧಿಸಲಿದ್ದಾರೆ ಎಂದು ಹೇಳಿದರು.