ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳ ಸಂಖ್ಯೆ ಕಡಿಮೆ. ಅದರಲ್ಲೂ ಅನ್ಯಗ್ರಹ ಜೀವಿಗಳು, ಹಾರುವ ತಟ್ಟೆಗಳ ಕುರಿತು ಸಿನಿಮಾಗಳೂ ಬಂದೇ ಇಲ್ಲ ಎಂದರೂ ತಪ್ಪಾಗಲಾರದು. ಈಗ ಇಂಥದ್ದೊಂದು ಅಪರೂಪದ ಸಬ್ಜೆಕ್ಟ್ ಮೇಲೆ “ಮಂಡಲ’ ಎಂಬ ಸಿನಿಮಾ ತಯಾರಾಗಿದ್ದು, ಇದೇ ಮಾ. 10ಕ್ಕೆ ತೆರೆಗೆ ಬರುತ್ತಿದೆ.
ಅಂದಹಾಗೆ, ಅಜಯ್ ಸಪ್ತೇಷ್ಕರ್ ಎಂಬ ಹೊಸ ಪ್ರತಿಭೆ ಇಂಥದ್ದೊಂದು ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಇತ್ತೀಚೆಗೆ “ಮಂಡಲ’ ಸಿನಿಮಾದ ಟ್ರೇಲರ್ ಮತ್ತು ಹಾಡು ಬಿಡುಗಡೆಯಾಗಿದೆ.
ಇದೇ ವೇಳೆ ಮಾತನಾಡಿದ ನಿರ್ಮಾಪಕ ಕಂ ನಿರ್ದೇಶಕ ಅಜಯ್ ಸರ್ಪೇಷ್ಕರ್, “ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಕಥೆಗಳು ಸಿನಿಮಾವಾಗಿದ್ದು ಕಡಿಮೆ. ಈ ಥರದ ಸಬ್ಜೆಕ್ಟ್ ನಲ್ಲಿ ಬೇರೆಯೊಂದು ಪ್ರಪಂಚವನ್ನೇ ಸೃಷ್ಟಿಸಬಹುದು. ಸಿನಿಮಾದಲ್ಲಿ ಸಾಕಷ್ಟು ವಿಎಫ್ಎಕ್ಸ್ ಕೆಲಸಗಳಿದ್ದರಿಂದ ಮತ್ತು ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬವಾಗಿತ್ತು. ಸಿನಿಮಾದಲ್ಲಿ ತಲೆ ಎತ್ತಿ ಬಾಹ್ಯಾಕಾಶವನ್ನು ನೋಡು ಮತ್ತು ತಲೆ ಬಗ್ಗಿಸಿ ನಮ್ಮ ಮೂಲ ಸಂಸ್ಕೃತಿ ಹಿನ್ನೆಲೆಯ ಬಗ್ಗೆ ತಿಳಿದುಕೋ ಎಂಬ ಎರಡು ಅಂಶಗಳಿವೆ. ವಿಜ್ಞಾನದ ವಿವಿಧ ಆಯಾಮಗಳ ಚಿತ್ರಣ ಈ ಸಿನಿಮಾದಲ್ಲಿದ್ದು, ಎಲ್ಲಾ ವಯೋಮಾನ ದವರು ಬಂದು ನೋಡಬಹುದಾದ ಸಿನಿಮಾ ಇದಾಗಿದೆ’ ಎಂದು ವಿವರಣೆ ನೀಡಿದರು.
ಹಿರಿಯ ನಟ ಪ್ರಕಾಶ್ ಬೆಳವಾಡಿ ಮಾತನಾಡಿ, “ಈ ಸಿನಿಮಾದ ಚಿತ್ರಕಥೆಯಲ್ಲಿ ನಾನು ಕೈಜೋಡಿಸಿದ್ದೇನೆ. ಹೊಸ ಬಗೆಯ ಸಿನಿಮಾಗಳು ಬೇಕು ಎಂದು ಬಯಸುವವರಿಗೆ “ಮಂಡಲ’ ಹೊಸ ಅನುಭವ ಕೊಡಲಿದೆ. ವಿಜ್ಞಾನ, ಬಾಹ್ಯಾಕಾಶ, ತಂತ್ರಜ್ಞಾನದ ಹಲವು ಅಚ್ಚರಿಗಳು ಈ ಸಿನಿಮಾದಲ್ಲಿ ನೋಡಲು ಸಿಗುತ್ತದೆ’ ಎಂದರು.
ಚಿತ್ರದ ನಾಯಕ ಕಿರಣ್, ನಾಯಕಿ ಶರ್ಮಿಳಾ ಸೇರಿದಂತೆ ಇಡೀ ಚಿತ್ರತಂಡ ಹಾಗೂ ತಂತ್ರಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡರು.
“ಮಂಡಲ’ ಸಿನಿಮಾದಲ್ಲಿ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಕಿರಣ್ ಶ್ರೀನಿವಾಸ್, ಸಂಯುಕ್ತಾ ಹೊರನಾಡು, ನರೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ