Advertisement

ವಿಕ್ಷಿಪ್ತ ಚಿತ್ತಗಳ ವಿರಾಟ ಸ್ವರೂಪ

09:41 AM Nov 23, 2019 | mahesh |

ತನ್ನ ಟೈಟಲ್‌ ಮತ್ತು ಪೋಸ್ಟರ್‌ಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ಬಹುತೇಕ ಹೊಸ ಪ್ರತಿಭೆಗಳ ಸೈಕಲಾಜಿಕಲ್‌, ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರ “ಮನರೂಪ’ ಈ ವಾರ ತೆರೆಗೆ ಬರುತ್ತಿದೆ. ಸದ್ಯ ಕಳೆದ ಕೆಲ ದಿನಗಳಿಂದ ಭರ್ಜರಿಯಾಗಿ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡಕ್ಕೆ ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದು, ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿತು.

Advertisement

ಮೊದಲಿಗೆ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ಕಿರಣ್‌ ಹೆಗಡೆ, “ಇದು ಇಂದಿನ ಜನರೇಶನ್‌ನ ಚಿತ್ರ. ಇಂದಿನ ಯುವ ಪೀಳಿಗೆಯ ಹಿಂಸೆ, ವಿಕ್ಷಿಪ್ತ ಅಸಂಗತೆ ಮತ್ತು ಮನಸ್ಥಿತಿಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ದಟ್ಟ ಕಾಡಿನಲ್ಲಿ ನಿಗೂಢವಾಗಿರುವ ಕರಡಿ ಗುಹೆಯನ್ನು ಹುಡುಕಿಕೊಂಡು ಹೊರಟಿರುವ ಐವರು ಸ್ನೇಹಿತರ ನಡುವಿನ ಕಥನವೇ ಮನರೂಪ ಸಿನಿಮಾದ ತಿರುಳು. ಅದರ ನಡುವೆ ಸಿಗುವ ಹಲವು ಅಚ್ಚರಿಗಳು, ತಿರುವುಗಳು, ಹಿಂಸೆ, ಕಾಡಿನ ಭಯ, ಕರಡಿ ಗುಹೆಯ ನಿಗೂಢತೆ ಮುಂತಾದ ಸಂಗತಿಗಳ ಜೊತೆಗೆ ಈ ಐವರ ನಡುವೆ ಏನು ವಿಷಮ ಸಂಗತಿ ನಡೆಯುತ್ತದೆ ಎಂಬದೇ ಚಿತ್ರದ ಸಸ್ಪೆನ್ಸ್‌ ಅಂಶ. ಅದನ್ನು ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ.

“ಮನರೂಪ’ ಚಿತ್ರದ ಶೇಕಡಾ ಎಂಬತ್ತರಷ್ಟು ಚಿತ್ರೀಕರಣವನ್ನು ದಟ್ಟ ಕಾಡಿನಲ್ಲೇ ನಡೆಸಲಾಗಿದೆಯಂತೆ. ಹಾಗಾಗಿ ಕಾಡಿನಲ್ಲಿ ಓಟ, ಬೀಳುವುದು, ಭಯದ ಛಾಯೆ, ಹುಡುಕಾಟ, ಅಪನಂಬಿಕೆ, ಪ್ರೇಮ ವೈಫ‌ಲ್ಯ, ಪಯಣ; ಈ ಎಲ್ಲಾ ಅಂಶಗಳನ್ನೂ ನೋಡುಗರಿಗೆ ಹೊಸ ಅನುಭವ ನೀಡಲಿದೆ ಅನ್ನೋದು ಚಿತ್ರತಂಡದ ಮಾತು. ಈಗಾಗಲೇ ಬಿಡುಗಡೆಯಾಗಿರುವ “ಮನರೂಪ’ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆಯಂತೆ. ಅದರ ಬಗ್ಗೆ ಮಾತನಾಡುವ ಚಿತ್ರತಂಡ, “ಚಿತ್ರ ಪ್ರೇಕ್ಷಕರಿಗೆ ಥ್ರಿಲ್ಲಿಂಗ್‌ ಅನುಭವ ನೀಡುತ್ತದೆ. ಚಿತ್ರದಲ್ಲಿ ಅನೇಕ ಅಚ್ಚರಿ ಮೂಡಿಸುವ ಸಂಗತಿಗಳಿವೆ. ಕೆಲ ದೃಶ್ಯಗಳು ತನ್ನ
ಕಂಟೆಂಟ್‌ ಮತ್ತು ಯೋಚನೆಗಳಿಂದ ಬೆಚ್ಚಿಬೀಳಿಸುತ್ತವೆ.

ಕುಟುಂಬ ವ್ಯವಸ್ಥೆ, ವ್ಯಕ್ತಿತ್ವ, ಅಸ್ತಿತ್ವ ಮತ್ತು ಇರುವಿಕೆಯ ವಿವಿಧ ಮಜಲನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕಾಡು ಮತ್ತು ಕಾಡುವ ಪಾತ್ರಗಳು ಪ್ರೇಕ್ಷಕನನ್ನು ಹಿಡಿದಿಡುತ್ತವೆ. ಮನರೂಪ ಚಿತ್ರವನ್ನು ಪ್ರೇಕ್ಷಕ ಕಡೆಗಣಿಸಲಾರ. ಹೊಸ ಬಗೆಯ ಕಥೆ, ನಿರೂಪಣೆ ಮತ್ತು ಮನಸನ್ನು ನಾಟುವಂತಹ ವಿಷಯವೇ “ಮನರೂಪ’ದ ಶಕ್ತಿ. ವಿಕ್ಷಿಪ್ತ ಸಂಭಾಷಣೆ, ಅಸಂಗತ ಪರಿಕಲ್ಪನೆಯೇ “ಮನರೂಪ’ ಚಿತ್ರದ ಅಂದವನ್ನು ಹೆಚ್ಚಿಸಿದೆ. ಈಗಾಗಲೇ ಪ್ರೇಕ್ಷಕರಿಂದ ಸಿಗುವ ಪ್ರತಿಕ್ರಿಯೆ ನೋಡಿದರೆ, ಪ್ರೇಕ್ಷಕರು “ಮನರೂಪ’ವನ್ನು ಬೇರೆಯದೇ ಆಯಾಮದಲ್ಲಿ ನೋಡುತ್ತಾರೆಂಬ ನಂಬಿಕೆ ಇದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತದೆ.

ಇನ್ನು “ಮನರೂಪ’ ಚಿತ್ರದಲ್ಲಿ ದಿಲೀಪ್‌ ಕುಮಾರ್‌, ಅನೂಷಾ ರಾವ್‌, ನಿಶಾ ಬಿ.ಆರ್‌, ಆರ್ಯನ್‌,
ಶಿವಪ್ರಸಾದ್‌, ಅಮೋಘ… ಸಿದ್ದಾರ್ಥ್, ಗಜಾ ನೀನಾಸಂ, ಪ್ರಜ್ವಲ್‌ ಗೌಡ, ರಮಾನಂದ ಐನಕೈ,
ಸತೀಶ್‌ ಗೋಳಿಕೊಪ್ಪ ಹಾಗೂ ವಿಶೇಷ ಪಾತ್ರದಲ್ಲಿ ಬಿ. ಸುರೇಶ್‌ ಅಭಿನಯಿಸಿದ್ದಾರೆ. “ಸಿಎಂಸಿಆರ್‌ ಮೂವೀಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಗೋವಿಂದರಾಜ್‌ ಛಾಯಾಗ್ರಹಣ,
ಸೂರಿ ಮತ್ತು ಲೋಕಿ ಸಂಕಲನ ಕಾರ್ಯವಿದೆ. ಚಿತ್ರಕ್ಕೆ ಸರವಣ ಸಂಗೀತ ಸಂಯೋಜಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next